ಕೆಎಸ್ಸಾರ್ಟಿಸಿ ಬಸ್‌ನಲ್ಲೇ ಹೆರಿಗೆ; ಮಾನವೀಯತೆ ಮೆರೆದ ಸಾರಿಗೆ ಸಿಬ್ಬಂದಿ..

ಚಿಕ್ಕಮಗಳೂರು: ಬಸ್ಸಿನಲ್ಲಿ‌ ಪ್ರಯಾಣಿಸುತ್ತಿದ್ದ ಗರ್ಭಿಣಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡು ಮಾರ್ಗಮಧ್ಯೆ ಕೆಎಸ್ಸಾರ್ಟಿಸಿ ಬಸ್ಸಿನಲ್ಲೇ ಮಗುವಿಗೆ ಜನ್ಮ ನೀಡಿದ ಅಪರೂಪದ ಸನ್ನಿವೇಶ ನಡೆದಿದೆ. ಬಸ್‌ನ ಮಹಿಳಾ ಕಂಡಕ್ಟರ್ ವೈದ್ಯೆಯ ಸ್ಥಾನದಲ್ಲಿ ನಿಂತು ಹೆರಿಗೆ ಮಾಡಿಸಿ ಎಲ್ಲರ ಕುತೂಹಲದ ಕೇಂದ್ರಬಿಂದುವಾದರು.

ಭಾನುವಾರ ಚಿಕ್ಕಮಗಳೂರು ಘಟಕದ ಕೆಎಸ್ಸಾರ್ಟಿಸಿ ಬಸ್ ಬೆಂಗಳೂರು- ಚಿಕ್ಕಮಗಳೂರು ನಡುವೆ ಪ್ರಯಾಣಿಕರನ್ನು ಕರೆದೊಯ್ಯುತ್ತಿತ್ತು. ಮಾರ್ಗ ಮಧ್ಯೆ ಉದಯಪುರ ಬಳಿ ಕೃಷಿ ಕಾಲೇಜು ಹತ್ತಿರ, ಮಧ್ಯಾಹ್ನ 13-25ರ ವೇಳೆ ಪ್ರಯಾಣಿಕರ ನಡುವೆ ಇದ್ದ ಗರ್ಭಿಣಿಗೆ ಇದ್ದಕ್ಕಿದ್ದಂತೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಸುಮಾರು 45 ಜನ ಪ್ರಯಾಣಿಕರು ಆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು.

ಬೆಂಗಳೂರಿನಿಂದ ಬೇಲೂರಿಗೆ ತೆರಳುತ್ತಿದ್ದ ಗರ್ಭಿಣಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಇದನ್ನು ಕಂಡ ಬಸ್‌ನ ಮಹಿಳಾ ನಿರ್ವಾಹಕಿ ಎಸ್ ವಸಂತಮ್ಮ, ಈ ಪ್ರದೇಶದಲ್ಲಿ ಆಸ್ಪತ್ರೆಯನ್ನು ಹುಡುಕಾಡುವ ಪ್ರಯತ್ನ ಮಾಡಿದರು. ಹತ್ತಿರದಲ್ಲಿ ಯಾವುದೇ ಆಸ್ಪತ್ರೆ ಇಲ್ಲ ಎಂಬುದನ್ನು ಮನಗಂಡ ಕಂಡಕ್ಟರ್ ತಾನೇ ಮುಂದೆ ನಿಂತು ಹೆರಿಗೆ ಮಾಡಿಸಲು ಮುಂದಾದರು. ಎಲ್ಲಾ ಪ್ರಯಾಣಿಕರನ್ನು ಬಸ್‌ನಿಂದ ಕೆಳಗೆ ಇಳಿಸಿ ಗರ್ಬಿಣಿಗೆ ಹೆರಿಗೆ ಮಾಡಿಸಿದರು.ಚಾಲಕ-ಕಂ-ನಿರ್ವಾಹಕಿಯಾಗಿರುವ ಎಸ್ ವಸಂತಮ್ಮ ಅವರು ತಾನು ಕರ್ತವ್ಯ ನಿರ್ವಹಿಸುತ್ತಿದ್ದ ಬಸ್ಸನ್ನೇ ಆಸ್ಪತ್ರೆಯನ್ನಾಗಿಸಿದ್ದಾರೆ. ಬಸ್ಸಿನಲ್ಲಿಯೇ ಹೆರಿಗೆಯನ್ನು ಮಾಡಿಸಿದ ಈ ಕಂಡಕ್ಟರ್‌ ಎಲ್ಲಾ ಪ್ರಯಾಣಿಕರಿಂದ ಶಹಬ್ಬಾಸ್‌ಗಿರಿ ಗಿಟ್ಟಿಸಿಕೊಂಡರು.

ಈ ನಿರ್ವಾಹಕಿ ತಾನು ಅಸಹಾಯಕಿ ಗರ್ಭಿಣಿಗೆ ಹೆರಿಗೆ ಮಾಡಿಸಿದ್ದಷ್ಟೇ ಅಲ್ಲ, ಆಕೆಯ ಆರ್ಥಿಕ ದುಸ್ಥಿತಿ ಕಂಡು ಮಮ್ಮಲ ಮರುಗಿದ್ದಾರೆ. ತಮ್ಮ ಸಹೋದ್ಯೋಗಿಗಳಿಂದ ಒಂದಷ್ಟು ಹಣ ಸಂಗ್ರಹಿಸಿ ಕೊಟ್ಟು ಮಾನವೀಯತೆ ಮೆರೆದಿದ್ದಾರೆ.‌ ನಿಗಮದ ಚಾಲನಾ ಸಿಬ್ಬಂದಿಗಳು ಮಹಿಳೆಯ ತುರ್ತು ಖರ್ಚಿಗಾಗಿ  ಸುಮಾರು 1500 ರೂಪಾಯಿ ಸಂಗ್ರಹಿಸಿ ಕೊಟ್ಟಿದ್ದಾರೆ. ಬಳಿಕ ಬಾಣಂತಿಯನ್ನು  ಆಂಬುಲೆನ್ಸ್ ಮೂಲಕ ಶಾಂತಿಗ್ರಾಮದ ಆಸ್ಪತ್ರೆಗೆ ದಾಖಲು ಮಾಡಿ ಸಕಾಲಿ ಸೂಕ್ತ ಚಿಕಿತ್ಸೆ ಕೊಡಿಸಿದ್ದಾರೆ.‌ ಇದೀಗ ಬಾಣಂತಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಕಂಡಕ್ಟರ್ ವಸಂತಮ್ಮ ಕರ್ತವ್ಯಪ್ರಜ್ಞೆಗೆ ಶ್ಲಾಘನೆ:

ಬಸ್ ಪ್ರಯಾಣಿಕರ ಬಗ್ಗೆ ಸೂಕ್ತ ಕಾಲದಲ್ಲಿ ಸ್ಪಂಧಿಸಿ ಕರ್ತವ್ಯ ಪ್ರಜ್ಞೆ ಮೆರೆದ ನಿರ್ವಾಹಕಿ ಎಸ್.ವಸಂತಮ್ಮ ಅವರ ನಡೆ ಬಗ್ಗೆ ವ್ಯವಸ್ಥಾಪಕ ನಿರ್ದೇಶಕರಾದ ಜಿ.ಸತ್ಯವತಿ ಶ್ಲಾಘಿಸಿದ್ದಾರೆ.‌ ಸಕಾಲದಲ್ಲಿ ಸದರಿ ಮಹಿಳಾ ಪ್ರಯಾಣಿಕರಿಗೆ ಸ್ಪಂದಿಸಿ ಮಗು‌ ಮತ್ತು ತಾಯಿಯನ್ನು‌ ಉಳಿಸಿ ಮಾನವೀಯತೆ ಮರೆದ ನಿರ್ವಾಹಕಿಯ ಕಾರ್ಯವು ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ಜಿ.ಸತ್ಯವತಿ ಹೇಳಿದ್ದಾರೆ.

Related posts