ಪ್ರಯಾಣ ಮಧ್ಯೆ ಬಸ್ಸಿನಲ್ಲೇ ಹೆರಿಗೆ; ಮಾನವೀಯತೆ ಮೆರೆದ ಸಿಬ್ಬಂದಿಗೆ KSRTC ಪುರಸ್ಕಾರ

ಬೆಂಗಳೂರು: ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿ ಮಹಿಳೆಗೆ ಅತೀವ ಹೆರಿಗೆ ನೋವು ಕಾಣಿಸಿಕೊಂಡ ಸಂದರ್ಭದಲ್ಲಿ ತಾನೇ ಮುಂದೆ ನಿಂತು ಹೆರಿಗೆ ಮಾಡಿಸಿದ ಮಹಿಳಾ ನಿರ್ವಾಹಕಿಗೆ ಅಭಿನಂದನೆಗಳ ಮಾಹಾಪೂರವೇ ಹರಿದುಬಂದಿದೆ. ಈ ನಿರ್ವಾಹಕಿಯ ಮಾನವೀಯತೆಗೆ ಕೆಎಸ್ಸಾರ್ಟಿಸಿ ಅಧಿಕಾರಿಗಳು ಪುರಸ್ಕಾರ ಪ್ರಕಟಿಸಿದ್ದಾರೆ.

ಸೋಮವಾರ ಬೆಂಗಳೂರಿನಿಂದ ಚಿಕ್ಕಮಗಳೂರಿನತ್ತ ಕೆಎಸ್ಸಾರ್ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿಗೆ ಇದ್ದಕ್ಕಿದ್ದಂತೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಮಾರ್ಗಮಧ್ಯೆ ಸಕಾಲದಲ್ಲಿ ಯಾವುದೇ ಆಸ್ಪತ್ರೆ ಸಿಗದಿದ್ದುದರಿಂದ ಕಂಡಕ್ಟರ್ ಎಸ್.ವಸಂತಮ್ಮ ಅವರು ತಾವೇ ವೈದ್ಯರ ಸ್ಥಾನದಲ್ಲಿ ನಿಂತು ಹೆರಿಗೆ ಮಾಡಿಸಿದ್ದಾರೆ. ಇತರ ಪ್ರಯಾಣಿಕರನ್ನು ಕೆಳಗಿಳಿಸಿ ಬಸ್‌ನಲ್ಲೇ ಆಸ್ಪತ್ರೆಯ ವೈದ್ಯರ ರೀತಿ ಹೆರಿಗೆ ಮಾಡಿಸಿ, ಬಾಣಂತಿ ಹಾಗೂ ಮಗುವನ್ನು ಈ ಮಹಿಳಾ ನಿರ್ವಾಹಕಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.

ಚಿಕ್ಕಮಗಳೂರು ವಿಭಾಗದ ಚಾಲಕಿ-ಕಂ-ನಿರ್ವಾಹಕಿಯಾಗಿರುವ ಎಸ್.ವಸಂತಮ್ಮ, ಹಾಗೂ ಬಸ್ಸಿನ ಚಾಲಕರಾದ ಹೆಚ್.ಬಿ. ಕುಮಾರಸ್ವಾಮಿ ಅವರನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಜಿ ಸತ್ಯವತಿ ಅವರು ನಿಗಮದ ಕೇಂದ್ರ ಕಚೇರಿಯಲ್ಲಿ ಬುಧವಾರ ಅಭಿನಂದಿಸಿದರು. ಸಿಬ್ಬಂದಿಯನ್ನು ಸನ್ಮಾನಿಸಿ ಗೌರವಧನ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವ್ಯವಸ್ಥಾಪಕ ನಿರ್ದೇಶಕರಾದ ಜಿ ಸತ್ಯವತಿ, ನಿಗಮದ ಚಾಲನಾ ಸಿಬ್ಬಂದಿ ಬಸ್ಸುಗಳಲ್ಲಿ ಪ್ರಯಾಣಿಕರೊಂದಿಗೆ ಉತ್ತಮ ನಡೆವಳಿಕೆ ತೋರಿ ಅವರ ಅಗತ್ಯಗಳಿಗೆ ಸ್ಪಂದಿಸುವುದರಲ್ಲಿ ಮುಂಚೂಣಿಯಲ್ಲಿದ್ದು, ನಿರ್ವಾಹಕಿ ವಸಂತಮ್ಮ ಅವರು ಯಾವುದೇ ಹಿಂಜರಿಕೆ ಇಲ್ಲದೆ ಸಕಾಲದಲ್ಲಿ ಮಹಿಳೆ ಮತ್ತು ಮಗುವನ್ನು ಕಾಪಾಡಲೇಬೇಕು ಎಂಬ ಸದುದ್ದೇಶದಿಂದ, ಕಾರ್ಯೋನ್ಮುಖರಾದರು. ಹತ್ತಿರದಲ್ಲಿ ಆಸ್ಪತ್ರೆ ಇಲ್ಲದ ಕಾರಣ ಅವರಿಗೆ ಬಸ್ಸಿನಲ್ಲಿಯೇ ಹೆರಿಗೆ ಮಾಡಿಸಿ ಮಗು ಮತ್ತು ತಾಯಿಯ ಪ್ರಾಣವನ್ನು ಉಳಿಸಿ ಮಾನವೀಯತೆಯನ್ನು ಮೆರೆದಿರುವುದು ನಿಜಕ್ಕೂ ಅಭಿನಂದನಾರ್ಹ ಎಂದರು.

ಇಂತಹಾ ಸಂದರ್ಭದಲ್ಲಿ ಸೂಕ್ತ ವೈದ್ಯಕೀಯ ಸೌಲಭ್ಯ ಮತ್ತು‌ ನುರಿತ ವೈದ್ಯಕೀಯ ಸಿಬ್ಬಂದಿಯ ಉಸ್ತುವಾರಿ ಅಗತ್ಯವಿದ್ದಾಗ್ಯೂ ಸಹ, ವಸಂತಮ್ಮ ಅವರು, ಸಮಯವಾಗಲಿ ಅಥವಾ ಆಸ್ಪತ್ರೆಯ ಸೌಲಭ್ಯವಾಗಲಿ ಆ‌ ಕ್ಷಣಕ್ಕೆ ಲಭ್ಯವಾಗದ ಕಾರಣ ವಿಶೇಷ ಕಾಳಜಿ ತೋರಿದ್ದಾರೆ ಎಂದು ಅವರು ಕೊಂಡಾಡಿದರು.

ಈ ರೀತಿ, ಎಷ್ಟೋ ಸಂದರ್ಭಗಳಲ್ಲಿ ಜನರು ನಮಗ್ಯಾಕೆ ಇದೆಲ್ಲ ನಮ್ಮ ಮೇಲೆ ಏನಾದರೂ ಅಪವಾದ / ಕ್ರಮ ತೆಗೆದುಕೊಂಡು ಬಿಡುತ್ತಾರೆ ಎಂದು ಯೋಚಿಸಿ ಸಹಾಯ ಮಾಡಲು ಹಿಂದೇಟು ಹಾಕುವುದುಂಟು. ಆದರೆ ವಸಂತಮ್ಮರವರು ಆ ರೀತಿಯ ಯಾವುದೇ ಯೋಚನೆ ಮಾಡದೆ ಜವಾಬ್ದಾರಿಯುತವಾಗಿ ನಡೆದುಕೊಂಡು ಇತರರಿಗೆ ಮಾದರಿಯಾಗಿದ್ದಾರೆ ಎಂದು ಕೆಎಸ್ಸಾರ್ಟಿಸಿ ಎಂಡಿ ಹೇಳಿದರು.

ಹೆರಿಗೆಯಾದ ಮಹಿಳೆ ಅಸ್ಸಾಂ ಮೂಲದವರಾಗಿದ್ದು, ತೀರ ಆರ್ಥಿಕ ಸಂಕಷ್ಟದಲ್ಲಿರುವುದನ್ನು ಗಮನಿಸಿ, ಪ್ರಯಾಣಿಕರಿಂದ ಹಣ ಸಂಗ್ರಹಿಸಿ ನೀಡಿರುವುದು ಇವರ ಮಾನವೀಯ ಅಂತಃಕರಣವನ್ನು ಬಿಂಬಿಸುತ್ತದೆ, ಇವರ ಈ ಕಾರ್ಯವು ಅನನ್ಯವೆಂದು ತಿಳಿಸಿ ಅವರಿಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ನಿರ್ದೇಶಕರು (ಸಿಬ್ಬಂದಿ ಮತ್ತು ಜಾಗೃತ) ಪ್ರಶಾಂತ್ ಕುಮಾರ್ ಮಿಶ್ರ, ಇಲಾಖಾ ಮುಖ್ಯಸ್ಥರು, ಚಿಕ್ಕಮಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಹಾಗೂ ಕಾರ್ಮಿಕ ಕಲ್ಯಾಣಾಧಿಕಾರಿ ಉಪಸ್ಥಿತರಿದ್ದರು.

Related posts