ಬೆಂಗಳೂರು: ಚಿಕ್ಕಮಗಳೂರು ವೈದ್ಯಕೀಯ ಕಾಲೇಜಿನಲ್ಲಿನ ನೀರಿನ ಸಮಸ್ಯೆ ನೀಗಿಸಲು ಪರ್ಯಾಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಅತಿ ಶೀಘ್ರವಾಗಿ ಸಮಸ್ಯೆ ಬಗೆಹರಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣ್ ಪ್ರಕಾಶ್ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಗುರುವಾರ ನಡೆದ ವಿಧಾನ ಸಭೆ ಕಲಾಪದಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದ ಶಾಸಕ ಎಚ್.ಡಿ.ತಮಯ್ಯ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಶರಣ್ ಪ್ರಕಾಶ್ ಪಾಟೀಲ್ ಅವರು, ಮಲೆನಾಡು ಭಾಗದ ಚಿಕ್ಕಮಗಳೂರು ವೈದ್ಯಕೀಯ ಕಾಲೇಜಿನಲ್ಲಿ ನೀರಿನ ಸಮಸ್ಯೆ ನೀಗಿಸಲು ತೆರೆದ ಬಾವಿ ನಿರ್ಮಿಸಲು ಚಿಂತನೆ ನಡೆದಿದೆ ಎಂದು ತಿಳಿಸಿದರು.
ಕಳೆದ ಬಿಜೆಪಿ ಸರ್ಕಾರ ಚಿಕ್ಕಮಗಳೂರಿಗೆ ಮೆಡಿಕಲ್ ಕಾಲೇಜು ಮಂಜೂರು ಮಾಡಿ, ಶಂಕುಸ್ಥಾಪನೆ ನೇರವೇರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ನಮ್ಮ ಸರ್ಕಾರ 100 ಕೋಟಿ ರೂ. ಹಣ ನೀಡಿದೆ. ಆಸ್ಪತ್ರೆ ಮತ್ತು ಕಾಲೇಜಿನಲ್ಲಿ ನೀರಿನ ಸಮಸ್ಯೆ ಸೃಷ್ಟಿಯಾಗಿದೆ. 10 ಬೋರ್ ವೆಲ್ ಕೊರೆದರೂ ನೀರು ಸಿಗುತ್ತಿಲ್ಲ. ಮಳೆ ಕೊಯ್ಲು ವ್ಯವಸ್ಥೆ ಮಾಡಿದರೆ ನೀರಿನ ಸೌಲಭ್ಯ ಸರಿ ಪಡಿಸಬಹುದು ಎಂದು ತಿಳಿಸಿದರು.
ಕಾಲೇಜಿನಲ್ಲಿ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಲು 348 ಲಕ್ಷ ರೂ. ಅಂದಾಜು ವೆಚ್ಚ ತಯಾರು ಮಾಡಲಾಗಿದೆ. ಬಯಲು ಸೀಮೆಯಲ್ಲಿ ನೀರಿನ ಸಮಸ್ಯೆ ಸಾಮಾನ್ಯ. ಚಿಕ್ಕಮಗಳೂರಿನಲ್ಲೂ ನೀರಿನ ಸಮಸ್ಯೆ ಇರುವುದು ಅಚ್ಚರಿಯ ವಿಷಯ. ಹಲವು ಬೋರ್ ವೆಲ್ ಕೊರೆಸಲಾಗಿದೆ. ಆದರೂ ಪ್ರಯೋಜನವಾಗುತ್ತಿಲ್ಲ. ತೆರೆದ ಬಾವಿ ನಿರ್ಮಾಣ ಮಾಡಿದರೆ ಸೂಕ್ತ ಎಂಬ ಸಲಹೆ ಬಂದಿದೆ. ಇದರ ಪರಿಶೀಲನೆ ಮಾಡಲಾಗುತ್ತಿದೆ. ಮಳೆಕೊಯ್ಲು ವ್ಯವಸ್ಥೆಯನ್ನು ಆಂತರಿಕ ಸಂಪನೂಲದಲ್ಲಿ ನಿರ್ವಹಣೆ ಮಾಡಲು ಆರ್ಥಿಕ ಇಲಾಖೆ ಸಹಮತ ವ್ಯಕ್ತ ಪಡಿಸಿದೆ. ಶೀಘ್ರವೇ ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.