ಬೆಂಗಳೂರು: ಬಿಜೆಪಿ ಸಾಮ್ರಾಜ್ಯವನ್ನು ಮೆಟ್ಟಿ ರಾಜ್ಯದ ಗದ್ದುಗೆ ಏರಿರುವ ಕೈ ಸಾಮ್ರಾಜ್ಯದಲ್ಲೂ ಒಡಕಿನ ಲಕ್ಷಣಗಳು ಗೋಚರಿಸಿವೆ. ಸಿಎಂ ಸಿದ್ದರಾಮಯ್ಯ ಅವರ ಆಡಳಿತ ವೈಖರಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರೇ ಅಸಮಾಧಾನಗೊಂಡಿದ್ದಾರೆ, ಇನ್ನೊಂದೆಡೆ ಸಿಎಂ ಬದಲಾವಣೆ ಸಾಧ್ಯತೆಗಳ ಬಗ್ಗೆ ಪ್ರತಿಪಕ್ಷಗಳ ವಿಶ್ಲೇಷಣೆ ಕೂಡಾ ರಾಜಕೀಯ ಅಚ್ಚರಿ ಹಾಗೂ ಕುತೂಹಲಕ್ಕೆ ಕಾರಣವಾಗಿದೆ.
ಈ ನಡುವೆ ಎರಡೂವರೆ ವರ್ಷಗಳ ಬಳಿಕ ಅಧಿಕಾರ ಹಂಚಿಕೊಳ್ಳುವ ಸೂತ್ರ ರೂಪಿಸಲಾಗಿದೆ ಎಂಬ ಮಾತುಗಳೂ ಕೆಪಿಸಿಸಿ ಮೊಗಸಾಲೆಯಲ್ಲಿ ಪ್ರತಿಧ್ವನಿಸುತ್ತಿದೆ. ಈ ಕುರಿತಂತೆ ಸಚಿವ ರಾಜಣ್ಣ ಸಹಿತ ಸಿದ್ದರಾಮಯ್ಯ ಆಪ್ತರು ಹೇಳಿಕೆಗಳನ್ನು ನೀಡುತ್ತಾ ಸಿದ್ದರಾಮಯ್ಯ ಅವರೇ ೫ ವರ್ಷಗಳ ಕಾಲ ಸಿಎಂ ಆಗಿರುತ್ತಾರೆ ಎಂದು ಹೇಳುವ ಮೂಲಕ ಸುದ್ದಿಗಳಿಗೆ ಗುದ್ದು ಕೊಡುತ್ತಿದ್ದಾರೆ. ಈ ಕುರಿತಂತೆ ಹೊಸಪೇಟೆಯಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ‘ಮುಂದಿನ ಐದು ವರ್ಷ ನಾನೇ ಮುಖ್ಯಮಂತ್ರಿ’ ಎಂದು ಹೇಳಿದ್ದಾರೆ.
ಈ ಕುರಿತಂತೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಅವರು ಸಿದ್ದರಾಮಯ್ಯ ಹೇಳಿಕೆಯನ್ನು ಸಮರ್ಥಿಸಿಕೊಂಡಿಲ್ಲ. ಆದರೆ, ‘ಈ ಬಗ್ಗೆ ಬಹಿರಂಗವಾಗಿ ಮಾತನಾಡುವುದಿಲ್ಲ. ಪಕ್ಷದ ಹೈಕಮಾಂಡ್ ಹೇಳಿದ್ದನ್ನು ಪಾಲಿಸುವುದಷ್ಟೆ ನಮಗೆ ಗೊತ್ತು’ ಎನ್ನುವ ಮೂಲಕ ಮುಂದಿನ ವಿದ್ಯಮಾನಗಳ ಬಗೆಗಿನ ಕುತೂಹಲವನ್ನು ಹೆಚ್ಚಿಸಿದ್ದಾರೆ. ‘ಕಾಂಗ್ರೆಸ್ ಪಕ್ಷದಲ್ಲಿ ಕಿತ್ತಾಟ ಇಲ್ಲ. ಕಿತ್ತಾಟ ಇರೋದು ಬಿಜೆಪಿಯಲ್ಲಿ’ ಎನ್ನುವ ಮೂಲಕ ಪ್ರತಿಪಕ್ಷಗಳ ಟೀಕೆಗಳಿಗೂ ಎದಿರೇಟು ಕೊಟ್ಟಿರುವ ಡಿಕೆಶಿ, ‘ವಿರೋಧ ಪಕ್ಷದ ನಾಯಕ ಆಯ್ಕೆ ಮಾಡಲು ಆಗಿಲ್ಲ’ ಎಂದು ಕೆಣಕಿದ್ದಾರೆ.