ಕ್ರೈಸ್ತ ಜಾತಿ ವಿವಾದಕ್ಕೆ ತೆರೆ ಎಳೆದ ಸರ್ಕಾರ; ಸಿಎಂ ನಿರ್ಧಾರಕ್ಕೆ ಶಾಜಿ ಸ್ವಾಗತ

ಬೆಂಗಳೂರು: ಜಾತಿ ಸಂಘರ್ಷದ ಕಿಚ್ಚುಹಚ್ಚಿದ್ದಾರೆ ಎಂದು ಸಿಎಂ ವಿರುದ್ಧ ಕ್ರೈಸ್ತ ಸಮುದಾಯ ಆಕ್ರೋಶ ಹೊಮ್ಮುತ್ತಿದ್ದಂತೆಯೇ ಸಿಎಂ ಸಿದ್ದರಾಮಯ್ಯ ಜಾಣ್ಮೆಯ ನಿರ್ಧಾರ ಕೈಗೊಂಡಿದ್ದಾರೆ. ಕ್ರಿಶ್ಚಿಯನ್ ಧರ್ಮದಲ್ಲಿ ಜಾತಿ ವ್ಯವಸ್ಥೆ ಸೃಷ್ಠಿಸಲು ರಾಜ್ಯ ಸರ್ಕಾರ ಮುಂದಾಗಿರುವುದು ಸರಿಯಲ್ಲ, ಈ ಸಂಬಂಧದ ನಿರ್ಧಾರವನ್ನು ಕೈಬಿಡಬೇಕೆಂದು ಕ್ರಿಶ್ಚಿಯನ್ ಸೇವಾ ಸಂಘ (CSS) ಮನವಿ ಸಲ್ಲಿಸಿದ ಬೆನ್ನಲ್ಲೇ, ಕ್ರಿಶ್ಚಿಯನ್ ಜಾತಿಗಳ ಮುಂದಿದ್ದ ಹಿಂದೂ ಹೆಸರುಗಳನ್ನೂ ಕೈಬಿಡಬೇಕೆಂದು ಸಿಎಂ ಸಿದ್ದರಾಮಯ್ಯ ಆದೇಶಿಸಿದ್ದಾರೆ.

ಸಿಎಂ ಆದೇಶದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸೂಕ್ತ ತಿದ್ದುಪಡಿಗೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ, ಕ್ರೈಸ್ತ ಜಾತಿ ವಿವಾದಕ್ಕೆ ತೆರೆ ಎಳೆದ ಸಿಎಂ ನಿರ್ಧಾರವನ್ನು ಕ್ರಿಶ್ಚಿಯನ್ ಸೇವಾ ಸಂಘದ ಅಧ್ಯಕ್ಷ ಶಾಜಿ ಟಿ ವರ್ಗೀಸ್ ಸ್ವಾಗತಿಸಿದ್ದಾರೆ.

ರಾಷ್ಟ್ರೀಯ ಹಿತಾಸಕ್ತಿಯನ್ನು ಪ್ರತಿಪಾದಿಸುತ್ತಿರುವ ಕ್ರೈಸ್ತಧರ್ಮದ ಹಾಗೂ ಜನರ ಹಿತಾಸಕ್ತಿ ಸಂಬಂಧ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿರುವ ಕ್ರಿಶ್ಚಿಯನ್ ಸೇವಾ ಸಂಘದ ಅಧ್ಯಕ್ಷ ಶಾಜಿ ಟಿ ವರ್ಗೀಸ್ ಅವರು, ರಾಜ್ಯ ಸರ್ಕಾರದ ನಡೆ ವಿರೋಧಿಸಿ ಸಿಎಂ ಸಿದ್ದರಾಮಯ್ಯ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು, ಮುಖ್ಯ ಕಾರ್ಯದರ್ಶಿ, ರಾಜ್ಯ ಹಿಂದುಳಿದ ವರ್ಗಗಳ ಆಯುಕ್ತರಿಗೆ ಪತ್ರ ಬರೆದಿದ್ದರು.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ವಿವಿಧ ಕ್ರಿಶ್ಚಿಯನ್ ಜಾತಿಗಳನ್ನು ನಮೂದಿಸಿ, ಕ್ರೈಸ್ತ ಧರ್ಮದಲ್ಲೂ ಜಾತಿ-ವ್ಯವಸ್ಥೆ ಸೃಷ್ಟಿಸಿರುವುದು ನ್ಯಾಯಸಮ್ಮತವಲ್ಲ. ಕ್ರೈಸ್ತ ಧರ್ಮದಲ್ಲಿ ನಿರ್ದಿಷ್ಟ ಪಂಗಡದ ಸಂಪ್ರದಾಯವನ್ನು ಅನುಸರಿಸಲಾಗುತ್ತದೆಯೇ ಹೊರತು, ಜಾತಿಯ ಆಧಾರದಲ್ಲಿ ಗುರುತಿಸಲಾಗುತ್ತಿಲ್ಲ. ಜಾತಿ ವ್ಯವಸ್ಥೆಯು ಕ್ರೈಸ್ತ ಧರ್ಮದಲ್ಲಿ ಇಲ್ಲ. ಹೀಗಿರುವಾಗ ಕರ್ನಾಟಕ ರಾಜ್ಯ ಸರ್ಕಾರವು ಕ್ರೈಸ್ತ ಧರ್ಮವನ್ನು ಒಡೆಯುವ ಸಂಚಿನ ಪ್ರಯತ್ನವಾಗಿ ಕ್ರೈಸ್ತ ಧರ್ಮದಳೊಗೆ ವಿವಿಧ ಜಾತಿಗಳನ್ನು ಸೃಷ್ಟಿಸಿದೆ. ಇದು ಧರ್ಮ ವಿರೋಧಿ ನಡೆಯಾಗಿದ್ದು, ಕೂಡಲೇ ಈ ಜಾತಿ-ಪದ್ದತಿಗೆ ತಿಲಾಂಜಲಿ ಹಾಕಬೇಕಿದೆ ಎಂದು ಪ್ರತಿಪಾದಿಸಿದ್ದಾರೆ.

ಈ ಮನವಿ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು ಕ್ರಿಶ್ಚಿಯನ್ ಜಾತಿಗಳ ಹೆಸರುಗಳನ್ನು ಸರಿಪಡಿಸಲು ಆದೇಶಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಈ ಆದೇಶವನ್ನು ಸ್ವಾಗತಿಸಿರುವ ಶ್ಚಿಯನ್ ಸೇವಾ ಸಂಘದ ಅಧ್ಯಕ್ಷ ಶಾಜಿ ಟಿ ವರ್ಗೀಸ್, ಈ ಬಾರಿಯ ಜಾತಿ ಸಮೀಕ್ಷೆಯಲ್ಲಿ ಕ್ರೈಸ್ತರಿಗೆ ಅನ್ಯಾಯವಾಗದಂತೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

Related posts