ಡಿಜಿಟಲ್ ಮಾಧ್ಯಮಕ್ಕೆ ಶಕ್ತಿ ತುಂಬಿದ ಸಿಎಂ: ಕೆ.ವಿ ಪ್ರಭಾಕರ್’ಗೆ KSDMF ಸನ್ಮಾನ

ಬೆಂಗಳೂರು: ಡಿಜಿಟಲ್ ಮಾಧ್ಯಮಕ್ಕೆ ಜಾಹಿರಾತು ನೀಡಲು ರಾಜ್ಯದಲ್ಲಿ ಮೊದಲ ಬಾರಿಗೆ ಡಿಜಿಟಲ್ ಜಾಹೀರಾತು ನೀತಿ-2024 ಜಾರಿಗೊಳಿಸಿರುವುದು ನಮಗೆ ಶಕ್ತಿತುಂಬಿದೆ. ಈ ಹಿನ್ನೆಲೆಯಲ್ಲಿ ಶೀಘ್ರ ಬೆಂಗಳೂರಿನಲ್ಲಿ ವಿಶೇಷವಾದ ಡಿಜಿಟಲ್ ಮಾಧ್ಯಮ ಸಮೇಳನವನ್ನು ಹಮ್ಮಿಕೊಂಡು ರಾಷ್ಟ್ರಮಟ್ಟದ ಹಾಗೂ ಅಂತರರಾಷ್ಟ್ರೀಯ ಮಟ್ಟದ ಡಿಜಿಟಲ್ ಮಾಧ್ಯಮದ ಪತ್ರಕರ್ತರನ್ನು ಆಹ್ವಾನಿಸುವ ಚಿಂತನೆಯಿದೆ ಎಂದು ಕರ್ನಾಟಕ ಸ್ಟೇಟ್ ಡಿಜಿಟಲ್ ಮೀಡಿಯಾ ಫೋರಂ (KSDMF)ರಾಜ್ಯಾಧ್ಯಕ್ಷರಾದ ಬಿ. ಸಮೀವುಲ್ಲಾ ತಿಳಿಸಿದ್ದಾರೆ.

KSDMF ವತಿಯಿಂದ ನಗರದ ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ ಪ್ರಭಾಕರ್ ಹಾಗೂ ವಾರ್ತಾ ಇಲಾಖೆಯ ಆಯುಕ್ತರಾದ ಹೇಮಂತ್ ನಿಂಬಾಳ್ಕರ್ ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಡಿಜಿಟಲ್ ಮಾಧ್ಯಮ ನೀತಿಯಿಂದಾಗಿ ಬೇರೆ ಪತ್ರಿಕೆ, ಟಿವಿಯಂತೆ ಡಿಜಿಟಲ್ ಮಾಧ್ಯಮವು ಪತ್ರಿಕೋದ್ಯಮದ ಭಾಗವೆಂದು ಅಧಿಕೃತವಾಗಿದೆ. ದೇಶದಲ್ಲಿ ಡಿಜಿಟಲ್ ಪಾಲಿಸಿ ಕೆಲವು ರಾಜ್ಯಗಳಲ್ಲಿ ಇದೆಯಾದರೂ ನಮ್ಮ ರಾಜ್ಯದಲ್ಲಿ ಈ ನೀತಿ ಸಮಗ್ರವಾಗಿದ್ದು, ವೃತ್ತಿಪರವಾಗಿ ರಚನೆಯಾಗಿದೆ ಎಂದರು.

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರ ಪ್ರಯತ್ನದಿಂದಾಗಿ ರಾಜ್ಯದಲ್ಲಿ ಡಿಜಿಟಲ್ ನೀತಿಯನ್ನು ಜಾರಿಗೆ ತರುವಲ್ಲಿ ಮಹತ್ವದ ಕಾರ್ಯವನ್ನು ನಿರ್ವಹಿಸಿದ್ದಾರೆ. ಡಿಜಿಟಲ್ ಮಾಧ್ಯಮವು ಪರ್ಯಾಯ ಮಾಧ್ಯಮವಾಗಿ ನೈಜ ಪತ್ರಿಕೋದ್ಯಮ, ನಿಷ್ಪಕ್ಷಪಾತವಾಗಿ, ಮಾನವತೆಯಿಂದಾಗಿ ಪರ್ಯಾಯ ಪತ್ರಿಕೋದ್ಯಮವು ಬಹಳ ಪ್ರಾಮುಖ್ಯತೆ ಪಡೆದುಕೊಂಡಿದೆ ಎಂದರು.

ಈ ನಿಟ್ಟಿನಲ್ಲಿ ಕರ್ನಾಟಕ ಸ್ಟೇಟ್ ಡಿಜಿಟಲ್ ಮೀಡಿಯಾ ಫೋರಂ ತನ್ನ ಸಂಘಟಿತ ಪ್ರಯತ್ನದಿಂದಾಗಿ ರಾಜ್ಯದಲ್ಲಿ ಡಿಜಿಟಲ್ ಮಾಧ್ಯಮ-2024 ಜಾರಿಗೆ ತರಲಾಗಿದೆ. ಈ ನೀತಿಯಲ್ಲಿ ಪತ್ರಕರ್ತರಿಗೆ ಪೂರಕವಾಗಿ ಕೆಲವೊಂದು ಅಗತ್ಯ ಬದಲಾವಣೆ, ತಿದ್ದುಪಡಿಯಾಗಬೇಕಿದೆ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಕೆಎಸ್ ಡಿಎಂಎಫ್ ನೀಡಿದ ಸಂಸ್ಥೆಯ ಆಧ್ಯಕ್ಷರು ಹಾಗೂ ಹಿರಿಯ ಪತ್ರಕರ್ತರಾದ ಬಿ.ಸಮೀವುಲ್ಲಾ ಜೊತೆಗಿನ ವೃತ್ತಿ ಬಾಂಧವ್ಯವನ್ನು ಸ್ಮರಿಸಿದರು. ರಾಜ್ಯದಲ್ಲಿ ಡಿಜಿಟಲ್ ನೀತಿ ತರುವ ಬಗ್ಗೆ ಎರಡು ತಿಂಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಡಿಜಿಟಲ್ ಮಾಧ್ಯಮದ ಅಗತ್ಯತೆ ಬಗ್ಗೆ ತಿಳಿ ಹೇಳಿ ಆ ಬಗ್ಗೆ ಚರ್ಚೆ ನಡೆಸಿದ್ದೆ. ಕೃತಕ ಬುದ್ದಿಮತ್ತೆಯು ಡಿಜಿಟಲ್ ಮಾಧ್ಯಮಕ್ಕೂ ದಾಂಗುಡಿಯಿಟ್ಟಿದೆ ಎಂದರು.

ಸಣ್ಣ ಪತ್ರಿಕೆಯಂತೆ ಡಿಜಿಟಲ್ ಮಾಧ್ಯಮವನ್ನು ಕೈಹಿಡಿಯುವ ಬಗ್ಗೆ ಮುಖ್ಯಮಂತ್ರಿ ಅವರ ಜೊತೆ ಮಾತನಾಡಿ ಡಿಜಿಟಲ್ ಮಾಧ್ಯಮ ಸಂಸ್ಥೆಗಳಿಗೂ ಜಾಹೀರಾತು ನೀಡಲು ಹಣಕಾಸು ವೆಚ್ಚ, ಡಿಜಿಟಲ್ ಮೀಡಿಯಾ ನೀತಿಯ ನೀಲನಕ್ಷೆ ಬಗ್ಗೆಯೂ ತಿಳಿಸಿದೆ. ಇದಕ್ಕೆ ಸಿಎಂ ಕೂಡ ಸಹಮತ ವ್ಯಕ್ತಪಡಿಸಿದರು. ಹೀಗಾಗಿ ಡಿಜಿಟಲ್ ಜಾಹೀರಾತು ನೀತಿ ತರಲು ಸಾಧ್ಯವಾಯಿತು. ಈ ನಿಟ್ಟಿನಲ್ಲಿ ಡಿಜಿಟಲ್ ನೀತಿಯನ್ನು ಜಾರಿಗೆ ತರಲಾಗಿದೆ. ಅದರಲ್ಲಿ ಪತ್ರಕರ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮುಂದೆ ಬದಲಾವಣೆ ಮಾಡಲಾಗುವುದು ಎಂದರು.

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪತ್ರಕರ್ತರ ಅಭಿವೃದ್ಧಿಗಾಗಿ ಆರೋಗ್ಯ, ಗ್ರಾಮೀಣ ಪತ್ರಕರ್ತರಿಗಾಗಿ ಬಸ್ ಪಾಸ್, ದಿನಪತ್ರಿಕೆ ಹಂಚುವವರಿಗೂ ಅನುಕೂಲ‌ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಮಾಧ್ಯಮ ಮಾನ್ಯತೆಯಿರುವವರಿಗೆ ಆರೋಗ್ಯ ಸಂಜೀವಿನಿಯಡಿ ಕಾರ್ಡ್ ನೀಡಲು ಕ್ರಮ ಕೈಗೊಳ್ಳುತ್ತೇವೆ. ಡಿಜಿಟಲ್ ಮಾಧ್ಯಮದವರಿಗೂ ವಾರ್ತಾ ಇಲಾಖೆಯಿಂದ ಐಡಿ ಕಾರ್ಡ್ ಅಥವಾ ಮಾನ್ಯತಾ ಕಾರ್ಡ್ ನೀಡಲು ಇಲಾಖೆಯ ಆಯುಕ್ತರಾದ ಹೇಮಂತ್ ನಿಂಬಾಳ್ಕರ್ ಅವರ ಜೊತೆ ಮಾತನಾಡುತ್ತೇನೆ ಎಂದು ಅವರು ಹೇಳಿದರು.

ಪ್ರೆಸ್ ಕ್ಲಬ್ ಅಧ್ಯಕ್ಷರಾದ ಶ್ರೀಧರ್ ಮಾತನಾಡಿ, ಡಿಜಿಟಲ್ ಮೀಡಿಯಾ ಫೋರಂ ಈಗಿನ ಡಿಜಿಟಲ್ ಮಾಧ್ಯಮಕ್ಕೆ ಅತ್ಯಗತ್ಯವಾಗಿತ್ತು. ವೃತ್ತಿಪರ ಡಿಜಿಟಲ್ ಪತ್ರಕರ್ತರಿಗೆ ಈ ಕೆಎಸ್ ಡಿಎಂಎಫ್ ಫೋರಂ ಹೆಚ್ಚಿನ ಅನುಕೂಲವಾಗಿದೆ ಎಂದರು.

ಸಮಾರಂಭದಲ್ಲಿ ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಜಂಟಿ ಕಾರ್ಯದರ್ಶಿ ಮಾಲತೇಶ್ ಅರಸ್ ಹರ್ತಿಕೋಟೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೆಎಸ್ ಡಿಎಂಎಫ್ ಉಪಾಧ್ಯಕ್ಷರಾದ ಸುನಿಲ್ ಶಿರಸಿಂಗಿ, ಕಾರ್ಯದರ್ಶಿ ಕೆ.ಎಂ ಶಿವಕುಮಾರ್, ಖಜಾಂಚಿ ಸನತ್ ಕುಮಾರ್ ರೈ, ಜಂಟಿ ಕಾರ್ಯದರ್ಶಿಗಳಾದ ಮಾಲತೇಶ್ ಅರಸ್ ಹರ್ತಿಕೋಟೆ, ರಜನಿ ಹಾಗೂ ಕೆಎಸ್ ಡಿಎಂಎಫ್ ಸದಸ್ಯರು ಹಿರಿಯ ಪತ್ರಕರ್ತರಾದ ಹಮೀದ್ ಪಾಳ್ಯ, ಪ್ರತಿಧ್ವನಿ ಶಿವಕುಮಾರ್, ವಿಜಯ್ ಭರಮಸಾಗರ, ಮಂಜು ಬಾಣಗೆರೆ, ರವೀಂದ್ರ ಜೋಶಿ, ಮುತ್ತುರಾಜ್, ಶ್ಯಾಮ್ , ರಮೇಶ್ , ದರ್ಶನ್ ಮೊದಲಾದ ಪ್ರಮುಖರು ಉಪಸ್ಥಿತರಿದ್ದರು.

Related posts