ಬೆಂಗಳೂರು: “ಪಕ್ಷದ ಸಂಘಟನೆ, ಅಧಿಕಾರ ಹಾಗೂ ಸರ್ಕಾರದ ವಿಚಾರವಾಗಿ ಕಾಂಗ್ರೆಸ್ ಪಕ್ಷದ ಯಾವುದೇ ನಾಯಕರು ಸಾರ್ವಜನಿಕವಾಗಿ ಮಾತನಾಡುವಂತಿಲ್ಲ. ಪಕ್ಷದ ಶಿಸ್ತು ಮೀರಿ ಮಾತನಾಡಿದರೆ ಯಾರೇ ಆದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಸಚಿವರು ಹಾಗೂ ಪಕ್ಷದ ಶಾಸಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ನಡೆಸಿ, ಮುಂಬರುವ ಲೋಕಸಭೆ ಚುನಾವಣೆ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ, ನಿಗಮ-ಮಂಡಳಿ ನೇಮಕ ಹಾಗೂ ಪಕ್ಷದ ನಾಯಕರ ಹೇಳಿಕೆಗಳ ವಿಚಾರವಾಗಿ ಬುಧವಾರ ಸುದೀರ್ಘ ಚರ್ಚೆ ನಡೆಸಿದರು.
ಸಭೆ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ರಣದೀಪ್ ಸಿಂಗ್ ಸುರ್ಜೆವಾಲ, “ಪಕ್ಷದ ಶಾಸಕರು ತಮ್ಮ ಕ್ಷೇತ್ರ ಹಾಗೂ ಜಿಲ್ಲೆಗೆ ಸಂಬಂಧಿಸಿದ ಅಭಿವೃದ್ಧಿ, ರಾಜ್ಯದ ಜನರಿಗೆ ಅನುಕೂಲವಾಗುವಂತಹ ನೀತಿಗಳ ಬಗ್ಗೆ ಯೋಚಿಸಿ, ಸಲಹೆ ನೀಡುವತ್ತ ಗಮನಹರಿಸಬೇಕು. ಸಚಿವರು ತಮ್ಮ ಇಲಾಖೆ ಹಾಗೂ ಉಸ್ತುವಾರಿ ಜಿಲ್ಲೆಗಳ ಬಗ್ಗೆ ಗಮನಹರಿಸಬೇಕು. ಅಧಿಕಾರ ಹಂಚಿಕೆ ಸೇರಿದಂತೆ ಇತರೆ ವಿಚಾರಗಳ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವಂತಿಲ್ಲ. ಆ ರೀತಿ ಮಾತನಾಡುವುದು ಪಕ್ಷದ ಶಿಸ್ತು ಉಲ್ಲಂಘಿಸಿದಂತಾಗುತ್ತದೆ ಎಂದು ಹೇಳಿದರು.
ಅಶಿಸ್ತಿನ ಹೆಳಿಕೆಗಳನ್ನು ಪಕ್ಷ ಸಹಿಸುವುದಿಲ್ಲ. ಪಕ್ಷದಲ್ಲಿ ಶಿಸ್ತು ಉಲ್ಲಂಘನೆ ಯಾರೇ ಮಾಡಿದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಗತ್ಯ ಬಿದ್ದರೆ ವಿಪ್ ಜಾರಿ ಮಾಡಬೇಕಾಗುತ್ತದೆ. ನಿಮ್ಮ ಧ್ವನಿಗೆ ಪಕ್ಷದಲ್ಲಿ ಅವಕಾಶವಿದೆ. ನೀವು ನಿಮ್ಮ ದೂರು, ಸಲಹೆ, ಅಭಿಪ್ರಾಯಗಳನ್ನು ಮುಖ್ಯಮಂತ್ರಿಗಳು, ಪಕ್ಷದ ಅಧ್ಯಕ್ಷರು ಅಥವಾ ನನ್ನ ಬಳಿ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಬೇಕೇ ಹೊರತು ಸಾರ್ವಜನಿಕವಾಗಿ ಅಲ್ಲ ಎಂದರು