‘ಯುದ್ಧ ಅಥವಾ ಶಾಂತಿ ಬಗ್ಗೆ ಕಾಂಗ್ರೆಸ್‌ ಸರಿಯಾದ ನಿಲುವು ಪ್ರಕಟಿಸಲಿ’

ಬೆಂಗಳೂರು: ಕಾಂಗ್ರೆಸ್‌ನಲ್ಲಿ ಒಬ್ಬರು ಯುದ್ಧ ಬೇಕು ಎಂದರೆ, ಮತ್ತೊಬ್ಬರು ಶಾಂತಿ ಬೇಕು ಎನ್ನುತ್ತಾರೆ. ಎಐಸಿಸಿಯಲ್ಲಿ ಈ ಬಗ್ಗೆ ಸರಿಯಾದ ನಿಲುವು ಪ್ರಕಟಿಸಲಿ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಆಡಳಿತದಲ್ಲಿದ್ದಾಗ ಅಮೆರಿಕದ ಬಳಿ ಹೋಗಿ ಭಿಕ್ಷೆ ಬೇಡಿದ್ದನ್ನು ನೋಡಿದ್ದೇವೆ. ಮುಂಬೈಯಲ್ಲಿನ ಉಗ್ರ ದಾಳಿಯಲ್ಲಿ 175 ಜನರು ಸತ್ತಿದ್ದರು. ಆಗ ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರ ಪ್ರತಿಕ್ರಿಯೆ ನೀಡಲೇ ಇಲ್ಲ. ಆದರೆ ಈಗ ಪ್ರಧಾನಿ ಮೋದಿ ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಸಿಂಧೂ ನದಿ ಒಪ್ಪಂದಕ್ಕೆ ನಾವು ಸಹಿ ಹಾಕಿಲ್ಲ. ಅದನ್ನು ಪ್ರಧಾನಿ ಮೋದಿ ರದ್ದು ಮಾಡಿದ್ದಾರೆ. ಭಯೋತ್ಪಾದಕ ದಾಳಿಗಳಾದಾಗಲೇ ಕಾಂಗ್ರೆಸ್‌ ಅದನ್ನು ಮಾಡಬೇಕಿತ್ತು. ಇದನ್ನು ಸಚಿವ ಸಂತೋಷ್‌ ಲಾಡ್‌ ಅರಿಯಬೇಕು ಎಂದರು.

ಇಡೀ ಜಮ್ಮು ಕಾಶ್ಮೀರ ಪ್ರಧಾನಿ ಮೋದಿಯವರ ಪರವಾಗಿ ನಿಂತಿದೆ. ಅಲ್ಲಿನ ಮುಖ್ಯಮಂತ್ರಿ ಕೂಡ ಕೇಂದ್ರ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ. ಅಲ್ಲಿನ ಅಭಿವೃದ್ಧಿಯನ್ನು ಜನರು ನೋಡಿದ್ದಾರೆ. ಪಾಕ್‌ ಆಕ್ರಮಿತ ಕಾಶ್ಮೀರ ನಮ್ಮದು, ಅದನ್ನು ಮರಳಿ ಪಡೆಯುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಕಾಂಗ್ರೆಸ್‌ನ ಒಬ್ಬೇ ಒಬ್ಬ ನಾಯಕರು ಈ ಮಾತನ್ನು ಧೈರ್ಯವಾಗಿ ಹೇಳಿಲ್ಲ ಎಂದರು.

ಯಾವುದೇ ಮಧ್ಯಸ್ಥಿಕೆಯನ್ನು ಒಪ್ಪಲ್ಲ ಎಂದು ವಿದೇಶಾಂಗ ಸಚಿವರು ಈಗಾಗಲೇ ಹೇಳಿದ್ದಾರೆ. ಆದರೂ ಕಾಂಗ್ರೆಸ್‌ನವರು ಮೊಸರಲ್ಲಿ ಕಲ್ಲು ಹುಡುಕುತ್ತಿದ್ದಾರೆ. ಮೊದಲು ಯುದ್ಧ ಬೇಡ, ಶಾಂತಿ ಬೇಕು ಎಂದವರು ನಂತರ ಯುದ್ಧ ಮಾಡಿ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌, ಮಲ್ಲಿಕಾರ್ಜುನ ಖರ್ಗೆ ಕದನ ವಿರಾಮವನ್ನು ಸ್ವಾಗತಿಸಿದ್ದಾರೆ. ಆದರೆ ಅದೇ ಕಾಂಗ್ರೆಸ್‌ನಲ್ಲಿ ಹಲವರು ಯುದ್ಧ ಮುಂದುವರಿಸಬೇಕಿತ್ತು ಎಂದಿದ್ದಾರೆ. ಕಾಂಗ್ರೆಸ್‌ನಲ್ಲೇ ಅನೇಕ ಗುಂಪುಗಳಿದ್ದು, ಒಬ್ಬೊಬ್ಬರು ಒಂದೊಂದು ಅಭಿಪ್ರಾಯ ಹೇಳುತ್ತಾರೆ. ಜೈರಾಮ್‌ ರಮೇಶ್‌ ಅವರು ಎಚ್ಚರಿಕೆ ನೀಡಿದ ನಂತರವೂ ಎಲ್ಲರೂ ವಿರುದ್ಧ ಹೇಳಿಕೆ ನೀಡುತ್ತಾರೆ ಎಂದು ದೂರಿದರು.

ಎಐಸಿಸಿಯಲ್ಲಿ ಯುದ್ಧದ ಕುರಿತು ಸರಿಯಾದ ನಿಲುವು ಪ್ರಕಟ ಮಾಡಲಿ. ಯುದ್ಧ ಬೇಕೆ, ಶಾಂತಿ ಬೇಕೆ, ಸಂಧಾನ ಬೇಕೆ ಎಂಬುದನ್ನು ಸರಿಯಾಗಿ ತಿಳಿಸಲಿ. ಆ ನಂತರ ಅಧಿವೇಶನದ ಬಗ್ಗೆ ಮಾತಾಡಲಿ. ಯೋಧರು ಈಗಲೂ ಭಯೋತ್ಪಾದಕರನ್ನು ಹುಡುಕಿ ಕೊಲ್ಲುತ್ತಿದ್ದಾರೆ. ಅಂತಹ ಯೋಧರ ಬಗ್ಗೆ ಎಲ್ಲರೂ ನಂಬಿಕೆ ಇರಿಸಬೇಕು. ಕಾಶ್ಮೀರದಲ್ಲಿ ಕಾಂಗ್ರೆಸ್‌ ಮಿತ್ರಪಕ್ಷಗಳ ಆಡಳಿತವಿದೆ. ಆ ಸರ್ಕಾರವನ್ನು ಇವರು ಎಂದಿಗೂ ಪ್ರಶ್ನಿಸುವುದಿಲ್ಲ. ಇಂತಹ ಸಮಯದಲ್ಲಿ ರಾಜಕೀಯ ಮಾಡಬಾರದು ಎಂದರು.

Related posts