ಮರಣ ಮೃದಂಗ ಭಾರಿಸುತ್ತಿರುವ ಕಿಲ್ಲರ್ ಕೊರೋನಾ ನಿಟ್ಟಿನಲ್ಲಿ ಸರ್ಕಾರ ಇನ್ನಿಲ್ಲದ ಕಸರತ್ತಿನಲ್ಲಿ ತೊಡಗಿದೆ. ದೇಶವನ್ನು ಕೊರೋನಾ ಮುಕ್ತವಾಗಿಸಲು ಹಾಗೂ ಸೋಂಕಿತರ ರಕ್ಷಣೆಗಾಗಿ ಸಮರ ಸಜ್ಜಿನ ಕೆಲಸ ಸಾಗಿದೆ. ಈ ಕೆಲಸಕ್ಕೆ ಸಿನಿಮಾ ನಟ-ನಟಿಯರು, ಕ್ರೀಡಾ ತಾರೆಯರು ಕೋಟ್ಯಂತರ ರೂಪಾಯಿ ನೆರವು ಘೋಷಿಸಿದ್ದಾರೆ.
ತೆಲುಗು ಖ್ಯಾತ ನಟ ಮತ್ತು ರಾಜಕಾರಣಿ ಪವನ್ ಕಲ್ಯಾಣ್ ಪ್ರಧಾನಮಂತ್ರಿ ಪರಿಹಾರ ನಿಧಿಗೆ 1 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ಜತೆಗೆ ಆಂಧ್ರಪ್ರದೇಶ ಮತ್ತು ತೆಲಂಗಾಣ ಮುಖ್ಯಮಂತ್ರಿ ಪರಿಹಾರ ನಿಧಿಗೆ ತಲಾ 50 ಲಕ್ಷ ರೂಪಾಯಿ ಕೊಟ್ಟಿದ್ದಾರೆ.
ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಅವರು ಸುಮಾರು 4 ಕೋಟಿ ರೂಪಾಯಿ ನೆರವನ್ನು ಕೊರೋನಾ ನಿರ್ಮೂಲನೆಗಾಗಿ ಪ್ರಕಟಿಸಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿ ಕೂಡಾ ಕೊರೋನಾ ಸೈನಿಕರ ಕಾರ್ಯವನ್ನು ಮೆಚ್ಚಿದ್ದು ಈ ಮಹಾ ಕಾರ್ಯಕ್ಕೆ ಕಾಯಾ ವಾಚಾ ಮನಸಾ ನೆರವಾಗುವುದಾಗಿ ಹೇಳಿದ್ದಾರೆ. ಜೊತೆಗೆ ೧ ಕೋಟಿ ರೂಪಾಯಿ ನೆರವನ್ನು ನೀಡುವುದಾಗಿ ಘೋಷಿಸಿದ್ದಾರೆ. ಚಿರಂಜೀವಿ ಪುತ್ರ ರಾಮ್ ಚರಣ್ ಕೂಡ 70 ಲಕ್ಷ ರೂಪಾಯಿ ದೇಣಿಗೆ ಘೋಷಿಸಿದ್ದಾರೆ. ಮಹೇಶ್ ಬಾಬು ಕೂಡಾ ಆಂಧ್ರಪ್ರದೇಶ ಮತ್ತು ತೆಲಂಗಾಣ ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಂದು ಕೋಟಿ ಹಣವನ್ನು ದೇಣಿಗೆ ನೀಡಿದ್ದಾರೆ. ನಿರ್ದೇಶಕ ಕೊರಟಾಲ ಶಿವ ಅವರು ₹ 5 ಲಕ್ಷವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ್ದಾರೆ.
ಈ ನಡುವೆ ಬಹುಭಾಷಾ ನಟ ಪ್ರಕಾಶ್ ರೈ, ಸಂಕಷ್ಟದಲ್ಲಿರುವ ದಿನಗೂಲಿ ಕಾರ್ಮಿಕರಿಗೆ ಹಣ ಸಹಾಯ ನೀಡಿದ್ದಾರೆ. ಅಭಿನೇತ್ರಿ, ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಲಕ್ಷ ರೂಪಾಯಿ, ಮತ್ತು ಮುಖ್ಯಮಂತ್ರಿ ಪರಿಹಾರ ನಿಧಿಗೆ ಲಕ್ಷ ರೂಪಾಯಿ ನೀಡಿದ್ದಾರೆ.