ಮಂಗಳೂರು/ಉಡುಪಿ: ಮಂಗಳೂರಿನಲ್ಲಿ ಕೆಲ ದಿನಗಳ ಹಿಂದಷ್ಟೇ ವ್ಯಕ್ತಿಯೊಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಇದೀಗ ಕೃಷ್ಣನ ನಾಡು ಉಡುಪಿಯಲ್ಲೂ ಅಂಥದ್ದೇ ಪ್ರಕರಣವೊಂದು ಪತ್ತೆಯಾಗಿದೆ.
ಉಡುಪಿಯ 34 ವರ್ಷದ ವ್ಯಕ್ತಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು ಆಸ್ಪತ್ರೆಯಲ್ಲಿ ತೀವ್ರ ನಿಗಾವಹಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಾರ್ಚ್ 18 ರಂದು ದುಬೈ ನಿಂದ ಉಡುಪಿಗೆ ಆಗಮಿಸಿದ್ದ ಈ ವ್ಯಕ್ತಿ ಕೆಲವೇ ದಿನಗಳಲ್ಲಿ ಜ್ವರದಿಂದ ಬಳಲಿದರು. ಈ ಹಿನ್ನೆಲೆಯಲ್ಲಿ ಅವರು ಮಾರ್ಚ್ ಮಾರ್ಚ್ 23 ರಂದು ಆಸ್ಪತ್ರೆಗೆ ದಾಖಲಾದರು. ವೈದ್ಯಕೀಯ ಪರೀಕ್ಷೆಯಲ್ಲಿ ಈ ವ್ಯಕ್ತಿಗೆ ಕೊರೋನಾ ಸೋಂಕು ಅಂಟಿರುವುದು ದೃಢಪಟ್ಟಿದೆ ವೈದ್ಯರು ಹೇಳಿದ್ದಾರೆ.
ಉಡುಪಿಯಲ್ಲಿ ಪತ್ತೆಯಾಗಿರುವ ಈ ಪ್ರಕರಣದ ನಂತರ ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 40 ಕ್ಕೆ ಏರಿಕೆಯಾದಂತಾಗಿದೆ.
ಇನ್ನೊಂದೆಡೆ ಮಂಗಳೂರಿನಲ್ಲೂ ಆತಂಕದ ಛಾಯೆ ಆವರಿಸಿದೆ. ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಅವಾಂತರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ಹರಿದಾಡಿದ ನಂತರವಂತೂ ಅಧಿಕಾರಿಗಳೂ ಎಚ್ಛೆತ್ತುಕೊಂಡಿದ್ದಾರೆ. ಈ ಮಧ್ಯೆ ದಕ್ಷಿಣಕನ್ನಡ ಜಿಲ್ಲೆಯ ಡಿಹೆಚ್.o ಅವರನ್ನು ಬದಲಾಯಿಸಲಾಗಿದೆ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಟ್ವೀಟ್ ಮಾಡಿದ್ದಾರೆ.
ಅತ್ತ, ಗೌರೀಬಿದನೂರಿನಲ್ಲಿ ಕ್ವಾರೆಂಟೈನ್’ ನಲ್ಲಿದ್ದ ಆಂಧ್ರಪ್ರದೇಶ ಮೂಲದ 75 ವರ್ಷದ ಮಹಿಳೆ ಸಾವನ್ನಪ್ಪಿದ್ದು, ಇವರು ಮಾರ್ಚ್ 23ರಂದು ಮೆಕ್ಕಾದಿಂದ ವಾಪಸ್ಸಾಗಿ ಗೌರಿಬಿದನೂರಿನಲ್ಲಿರುವ ತನ್ನ ಮಗನ ಮನೆಯಲ್ಲಿದ್ದರು. ಉಸಿರಾಟದ ಸಮಸ್ಯೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.