ಸರ್ಕಾರಿ ವ್ಯವಸ್ಥೆಯಡಿ ಕೊರೊನಾ ಲಸಿಕೆ ವಿತರಣೆಗೆ ಸಿದ್ಧತೆ

ಬೆಂಗಳೂರು: ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಸವಾಲೊಡ್ಡಿ ನಮ್ಮ ದೇಶದಲ್ಲೇ ಶೀಘ್ರವಾಗಿ ಕೊರೊನಾ ಲಸಿಕೆ ಆವಿಷ್ಕಾರ ಮಾಡಿದ್ದು, ಇದು ಭಾರತೀಯರಿಗೆ ಹೆಮ್ಮೆಯ ವಿಚಾರ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್. ಲಸಿಕೆ ಆವಿಷ್ಕಾರಕ್ಕಾಗಿ ಶ್ರಮವಹಿಸಿದ ವಿಜ್ಞಾನಿಗಳು ಮತ್ತು ಪ್ರೋತ್ಸಾಹಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದಿಸುತ್ತೇನೆ. ಅಭಿವೃದ್ಧಿ ರಾಷ್ಟ್ರಗಳಿಗೆ ಸವಾಲೊಡ್ಡಿ ನಮ್ಮದೇ ಆದ ಕೊರೊನಾ ಲಸಿಕೆ ಕಂಡುಹಿಡಿಯಲಾಗಿದೆ. ಈ ಲಸಿಕೆಯನ್ನು ಮೊದಲಿಗೆ ಕೊರೊನಾ ಯೋಧರಿಗೆ ನೀಡಬಹುದು ಎಂಬ ಅಭಿಪ್ರಾಯ ಇದೆ. 3 ನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆದ ಬಳಿಕ ಅಂತಿಮವಾಗಿ ಪರವಾನಗಿ ದೊರೆಯಬಹುದು. ನಾನು ಕೂಡ ಸಂಬಂಧಪಟ್ಟ ವಿಜ್ಞಾನಿಗಳೊಂದಿಗೆ ಮಾತನಾಡಿದ್ದು, ಇದು ಯಶಸ್ವಿಯಾದ ಲಸಿಕೆ ಹಾಗೂ ಯಾವುದೇ ಅಡ್ಡ ಪರಿಣಾಮ ಇಲ್ಲ ಎಂದು ತಿಳಿದುಬಂದಿದೆ. ಇದು ವಿಶ್ವಕ್ಕೆ ಭಾರತೀಯರ ಕೊಡುಗೆ ಎಂದರು.

ಸರ್ಕಾರಿ ವ್ಯವಸ್ಥೆಯಡಿ ಲಸಿಕೆ ವಿತರಣೆ ಮಾಡಲು ಸಿದ್ಧತೆ ಪೂರ್ಣಗೊಂಡಿದೆ. ಖಾಸಗಿ ಆಸ್ಪತ್ರೆಗಳ ಸಹಕಾರ ಬೇಕಿದ್ದರೆ ಅದನ್ನೂ ಪಡೆಯುವ ಬಗ್ಗೆ ಚಿಂತಿಸಲಾಗುವುದು ಎಂದರು.

Related posts