ಬೆಂಗಳೂರು: ಕೊರೋನಾ ವೈರಾಣು ಸೋಂಕು ನಿಯಂತ್ರಣಕ್ಕಾಗಿ ರಾಜ್ಯದ 263 ಕೇಂದ್ರಗಳನ್ನು ಲಸಿಕೆ ವಿತರಣೆಯ ತಾಲೀಮು (ಡ್ರೈ ರನ್) ಸಂಬಂಧ ರಾಜ್ಯ ಸರ್ಕಾರ ಗುರುತಿಸಿದೆ.ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವಧನ್ ಅವರೊಂದಿಗೆ ಮಾಹಿತಿ ಹಂಚಿಕೊಂಡಿರುವ ರಾಜ್ಯದ ಆರೋಗ್ಯ ಸಚಿವ ಡಾ.ಸುಧಾಕರ್, ಲಸಿಕೆ ಬಂದ ಬಳಿಕ ವಿತರಣೆಯ ಕಾರ್ಯ ಜನಾಂದೋಲನದಂತೆ ನಡೆಯಬೇಕಿದೆ ಎಂದು ತಿಳಿಸಿದ್ದಾರೆ.
ಕೊರೊನಾ ಲಸಿಕೆಯ ವಿತರಣೆಗೆ ಸಿದ್ಧತೆ, ಕೇಂದ್ರ ಸರ್ಕಾರದಿಂದ ಬೇಕಿರುವ ಸಹಾಯದ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದೆ. ಜನವರಿ 8 ರಂದು ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಮೂರು ಕಡೆ ಲಸಿಕೆ ವಿತರಣೆಯ ತಾಲೀಮು ನಡೆಯಬೇಕಿತ್ತು. ಆದರೆ ನಮ್ಮ ರಾಜ್ಯದಲ್ಲಿ ಪ್ರತಿ ಜಿಲ್ಲೆಯಲ್ಲಿ ಏಳು ವ್ಯವಸ್ಥೆಯಲ್ಲಿ ತಯಾರಿ ಮಾಡಿಕೊಂಡು 263 ಪ್ರದೇಶಗಳಲ್ಲಿ ಲಸಿಕೆಯ ವಿತರಣೆ ನಡೆಯಲಿದೆ. 24 ಜಿಲ್ಲಾಸ್ಪತ್ರೆ, 20 ಮೆಡಿಕಲ್ ಕಾಲೇಜು, 43 ತಾಲೂಕು ಆಸ್ಪತ್ರೆ, 31 ಸಮುದಾಯ ಆರೋಗ್ಯ ಕೇಂದ್ರ, 87 ಪ್ರಾಥಮಿಕ ಆರೋಗ್ಯ ಕೇಂದ್ರ, 30 ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, 28 ಖಾಸಗಿ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ವಿತರಣೆ ನಡೆಯಲಿದೆ ಏನು ಅವರು ವಿವರಿಸಿದ್ದಾರೆ.
ಕೇಂದ್ರ ಸರ್ಕಾರ 24 ಲಕ್ಷ ಸಿರಿಂಜುಗಳನ್ನು ಕಳುಹಿಸಿಕೊಟ್ಟಿದೆ. ಇವುಗಳನ್ನು ಎಲ್ಲ ಜಿಲ್ಲೆಗಳಿಗೆ ಕಳುಹಿಸಿಕೊಡಲಾಗಿದೆ. ರಾಜ್ಯದಲ್ಲಿ 10 ವಾಕ್ – ಇನ್ ಕೂಲರ್, 4 ವಾಕ್ -ಇನ್ ಫ್ರೀಜರ್, 3,201 ಐಎಲ್ ಆರ್, 3039 ಡೀಪ್ ಫ್ರೀಜರ್, 3,312 ಕೋಲ್ಡ್ ಬಾಕ್ಸ್, 46,591 ಲಸಿಕೆ ಕ್ಯಾರಿಯರ್, 2,25,749 ಐಸ್ ಪ್ಯಾಕ್ ಲಭ್ಯವಿದೆ. ಕೇಂದ್ರ ಸರ್ಕಾರವು 225 ಲೀಟರ್ ಸಾಮರ್ಥ್ಯ ದ 64 ಐಎಲ್ ಆರ್ ಗಳನ್ನು ಕಳುಹಿಸಿಕೊಟ್ಟಿದೆ. ಇನ್ನೂ 2 ವಾಕ್ – ಇನ್ ಕೂಲರ್, 1 ವಾಕ್ – ಇನ್ ಫ್ರೀಜರ್ ಕಳುಹಿಸಿಕೊಡುವುದಾಗಿ ಕೇಂದ್ರ ತಿಳಿಸಿದೆ ಎಂದು ಮಾಹಿತಿ ನೀಡಿದರು.
ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 6.30 ಲಕ್ಷ ಸಿಬ್ಬಂದಿ ಲಸಿಕೆ ವಿತರಣೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇನ್ನೂ ಕೂಡ ನೋಂದಣಿ ಮಾಡಿಸುವುದಾದರೆ ಬರಬಹುದು. 1 ಕೋಟಿ ಲಸಿಕೆಗಳನ್ನು ಕೇಂದ್ರ ಸರ್ಕಾರ ನಾನಾ ರಾಜ್ಯಗಳಿಗೆ ನೀಡಲಿದೆ. ಪೊಲೀಸರು, ಆರೋಗ್ಯ ಸಿಬ್ಬಂದಿ, ರಕ್ಷಣಾ ಸಿಬ್ಬಂದಿ, ಕೊರೊನಾ ನಿಯಂತ್ರಣದಲ್ಲಿ ಕಾರ್ಯಪ್ರವೃತ್ತರಾಗಿರುವವರಿಗೆ ಲಸಿಕೆ ಮೊದಲಿಗೆ ದೊರೆಯಲಿದೆ ಎಂದು ತಿಳಿಸಿದರು.