ಬೆಂಗಳೂರು: ದಲಿತರ ಆಸ್ತಿ ಕಬಳಿಸಿ ದೌರ್ಜನ್ಯ ನಡೆಸಿದ್ದಾರೆಂದು ಕಾಂಗ್ರೆಸ್ ಸಚಿವ ಡಿ.ಸುಧಾಕರ್ ಅವರ ಮೇಲೆ ದೂರು ದಾಖಲಾಗಿದೆ. ಸಚಿವರ ಮೇಲೆ ದೂರು ದಾಖಲಾಗಿ ಮೇಲ್ನೋಟಕ್ಕೆ ಸತ್ಯವಿದೆ ಎಂದು ಕಂಡುಬಂದಾಗ ನಿಷ್ಪಕ್ಷಪಾತ ತನಿಖೆಗಾಗಿ ಅವರನ್ನು ಸಚಿವ ಸ್ಥಾನದಿಂದ ಕೈಬಿಡಬೇಕು. ಬಳಿಕ ನಿಷ್ಪಕ್ಷಪಾತ ತನಿಖೆ ನಡೆಸಲು ಸಾಧ್ಯ. ಆದ್ದರಿಂದ ಅವರನ್ನು ಸಚಿವಸಂಪುಟದಿಂದ ಕೈಬಿಡಿ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆಗ್ರಹಿಸಿದ್ದಾರೆ
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸದಾ ಕಾಲ ದಲಿತರ ಪರ ಎನ್ನುವ ಮಹದೇವಪ್ಪ ಹಾಗೂ ಸಿಎಂ, ಗೃಹಸಚಿವರ ಸೇರಿ ಎಲ್ಲ ಖಾತೆಗಳ ಜಿಪಿಎ ಪಡೆದ ಪ್ರಿಯಾಂಕ್ ಖರ್ಗೆಯವರು ಈ ವಿಷಯದಲ್ಲಿ ಮೌನವಾಗಿದ್ದಾರೆ. ಅವರ ಮೌನ ಹಲವು ಅನುಮಾನಗಳನ್ನು ಸೃಷ್ಟಿಸುತ್ತದೆ. ಅವರು ಮೌನ ವಹಿಸಬಾರದೆಂದು ಒತ್ತಾಯಿಸಿದರು.
4 ತಿಂಗಳಾದರೂ ವರ್ಗಾವಣೆ ಗೊಂದಲ ಬಗೆಹರಿದಿಲ್ಲ. 115 ಪೊಲೀಸ್ ಅಧಿಕಾರಿಗಳಿಗೆ ಜಾಗ ತೋರಿಸದೆ, ಕೆಲಸವನ್ನೂ ಕೊಡದೆ ಸಂಬಳ ಕೊಡುತ್ತಿದ್ದಾರೆ. ಬಹುಶಃ ಇವರಿಗೆ ಕಪ್ಪಕಾಣಿಕೆ ಸಲ್ಲಿಸುವ ಸಾಮಥ್ರ್ಯ ಇಲ್ಲದ ಕಾರಣಕ್ಕೆ 115 ಜನ ಅಧಿಕಾರಿಗಳನ್ನು ಜಾಗ ತೋರಿಸದೆ ವರ್ಗಾವಣೆ ಮಾಡಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದರು. ಕಪ್ಪಕಾಣಿಕೆ ಕೊಟ್ಟವರಿಗೆ ಆಯಕಟ್ಟಿನ ಜಾಗ ಕೊಟ್ಟಿದ್ದಾರೆ. ಕಪ್ಪಕಾಣಿಕೆ ನೀಡದವರಿಗೆ ಕೆಲಸವೂ ಇಲ್ಲದೆ ಸಂಬಳ ಕೊಡುತ್ತಿರುವಂತಿದೆ ಎಂದು ತಿಳಿಸಿದರು.
ವಿಧಾನಪರಿಷತ್ತಿನ 6 ಸ್ಥಾನಗಳ ಚುನಾವಣೆಗೆ ಮತದಾರರ ನೋಂದಣಿ ಕಾರ್ಯ ಮುಂದುವರೆಸಲು ಪೂರ್ವಭಾವಿ ಸಭೆ ನಡೆಸಲಾಗುತ್ತಿದೆ. ಇವತ್ತು ದಕ್ಷಿಣ ಕನ್ನಡ- ಉಡುಪಿಯಲ್ಲಿ ಸಭೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಗಾಂಧಿ ಹತ್ಯೆಗೆ ಆರೆಸ್ಸೆಸ್ ಕಾರಣ ಎಂದು ಸಿದ್ದರಾಮಯ್ಯನವರು ಹಲವು ಬಾರಿ ಸುಳ್ಳು ಹೇಳಿದ್ದಾರೆ. ಗಾಂಧಿ ಹತ್ಯೆ ಸಂದರ್ಭದಲ್ಲಿ ಜವಾಹರಲಾಲ್ ನೆಹರೂ ನೇತೃತ್ವದ ಸರಕಾರ ದೇಶದ ಆಳ್ವಿಕೆ ನಡೆಸುತ್ತಿತ್ತು. ಅವರೇ ನೇಮಕ ಮಾಡಿದ ಕಪೂರ್ ಆಯೋಗ ಮತ್ತು ಇತರ ಆಯೋಗಗಳು ಗಾಂಧಿ ಹತ್ಯೆಗೂ ಆರೆಸ್ಸೆಸ್‍ಗೂ ಸಂಬಂಧ ಇಲ್ಲ ಎಂದಿವೆ. ಆದರೂ ನೀವು ಮತ್ತು ನಿಮ್ಮ ಪಕ್ಷ ಸುಳ್ಳು ಹೇಳುತ್ತಿವೆ. ಹಾಗಿದ್ದ ಮೇಲೆ ಸುಳ್ಳನ್ನೇ ಸತ್ಯ ಮಾಡಲು ಹೊರಟ ಸಿದ್ದರಾಮಯ್ಯನವರ ಮೇಲೆ ಕೇಸು ಹಾಕುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು. ನಿಮ್ಮ ವ್ಯವಸ್ಥೆ ಪ್ರಾಮಾಣಿಕವಾಗಿದ್ರೆ ನಿಮ್ಮ ಮೇಲೆ ಕೇಸು ದಾಖಲಿಸಬೇಕೆಂದು ಆಗ್ರಹಿಸುತ್ತೇನೆ ಎಂದರು.
ಇಲ್ಲದೆ ಇದ್ದರೆ ನೀವು ಮತ್ತೆ ತುರ್ತು ಪರಿಸ್ಥಿತಿ ಹೇರಲು ಮತ್ತು ಮಾಧ್ಯಮಗಳನ್ನು ಫ್ಯಾಕ್ಟ್ ಚೆಕ್ ಹೆಸರಿನಲ್ಲಿ ನಿಯಂತ್ರಿಸಲು, ವಿರೋಧ ಪಕ್ಷಗಳ ಮೇಲೆ ದಬ್ಬಾಳಿಕೆ ಮಾಡಲು ಹಿಂಬಾಗಿಲ ಮೂಲಕ ತುರ್ತು ಪರಿಸ್ಥಿತಿ ಹೇರಲು ಸನ್ನಾಹ ನಡೆಸಿದ್ದೀರೆಂದು ಸ್ಪಷ್ಟವಾಗುತ್ತದೆ. ಐಎನ್‍ಡಿಐಎ 14 ಜನ ಪತ್ರಕರ್ತರ ಜೊತೆ ಸಂವಾದ ನಡೆಸುವುದನ್ನೇ ಬಹಿಷ್ಕರಿಸಿದೆ. ಇದು ನಿಮ್ಮ ಅಸಹಿಷ್ಣುತೆಗೆ ಸ್ಪಷ್ಟ ಉದಾಹರಣೆ ಎಂದು ತಿಳಿಸಿದರು.
ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಸುದರ್ಶನ್ ಮೂಡಬಿದಿರೆ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಎಂಎಲ್‍ಸಿ ಮೋನಪ್ಪ ಭಂಡಾರಿ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಜಿಲ್ಲಾ ವಕ್ತಾರ ರವಿಶಂಕರ್ ಮಿಜಾರು ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು..