ಇಡೀ ವಿಶ್ವದಲ್ಲಿ 2 ಕಡೆಗಳಲ್ಲಿ ಮಾತ್ರ ಇರುವ ಇತಿಹಾಸ ಪ್ರಸಿದ್ಧ ಶ್ರೀ ಬ್ರಹ್ಮ ದೇವರ ಸನ್ನಿಧಿ ಮಂಗಳೂರು ಸಮೀಪದ ಕಳ್ಳಿಗೆ ಗ್ರಾಮದ ಪುಣ್ಯಭೂಮಿಯಲ್ಲೆ ಶೀಘ್ರದಲ್ಲೇ ನೂತನ ದೇವಾಲಯವಾಗಿ ಕಂಗೊಳಿಸಲಿದೆ.
ಅಸ್ಸಾಂ ರಾಜ್ಯದ ನದಿಕಿನಾರೆಯಲ್ಲಿ ಹೊರತುಪಡಿಸಿ ಮತ್ತೊಂದು ಬ್ರಹ್ಮ ದೇವರ ಗುಡಿ ಇರುವುದು ಕರ್ನಾಟಕ ರಾಜ್ಯದ ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಬ್ರಹ್ಮರಕೂಟ್ಲುವಿನಲ್ಲಿ ಮಾತ್ರ. ರಾಷ್ಟ್ರೀಯ ಹೆದ್ದಾರಿ 75ರ ಚತುಷ್ಪಥ ಕಾಮಗಾರಿ ಆರಂಭವಾದಾಗ ಬ್ರಹ್ಮ ಸನ್ನಿಧಿ ತೆರವುಗೊಳಿಸಲು ಹೆದ್ದಾರಿ ಇಲಾಖೆ ಅಧಿಕಾರಿಗಳು ಮುಂದಾದ ಸಂದರ್ಭದಲ್ಲಿ ಗುತ್ತಿಗೆ ವಹಿಸಿಕೊಂಡಿದ್ದ ಇರ್ಕಾನ್ ಸಂಸ್ಥೆ ಗ್ರಾಮಸ್ಥರಿಗೆ ಮುನ್ಸೂಚನೆ ನೀಡದೆ, ಸನ್ನಿಧಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಏಕಾಏಕಿ ಜೆಸಿಬಿ ನುಗ್ಗಿಸಿ ಸನ್ನಿಧಿ ಕೆಡವಲು ಮುಂದಾಗಿತ್ತು ಎಂಬ ಅಸಮಾಧಾನ ಸ್ಥಳೀಯರದ್ದು.
ಆ ವೇಳೆ, ಪವಾಡವೊಂದು ನಡೆದಿತ್ತು. ಸನ್ನಿಧಿ ಕೆಡವಲು ಪ್ರಯತ್ನ ನಡೆದ ಸಂದರ್ಭದಲ್ಲಿ ಯಂತ್ರವು ಹಠತ್ತಾಗಿ ಕೆಟ್ಟುಹೋಗಿ ಕಾಮಗಾರಿಗೆ ತಡೆಯಾಯಿತು. ಮರುದಿನ 2009 ನವೆಂಬರ್ 8ರಂದು ಬ್ರಹ್ಮರಕೂಟ್ಲು ಶ್ರೀ ಬ್ರಹ್ಮ ಸನ್ನಿಧಿ ಉಳಿಸಿ ಹೋರಾಟ ಸಮಿತಿ ರಚಿಸಿ ಗ್ರಾಮಸ್ಥರು ಸನ್ನಿಧಿಯ ಪಕ್ಕ ಜಮಾಯಿಸಿ ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು. ನವೆಂಬರ್ 9ರಂದು ಮತ್ತೆ ಬೇರೆ ಯಂತ್ರಗಳನ್ನು ತಂದು ಕಾಮಗಾರಿ ಮುಂದುವರಿಸಲು ಮುಂದಾದಾಗ ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅದೇ ಸಂದರ್ಭದಲ್ಲಿ ತರಾತುರಿಯಲ್ಲಿ ಟೋಲ್ ಗೇಟ್ ನಿರ್ಮಾಣ ಕಾಮಗಾರಿ ಸದ್ದಿಲ್ಲದೆ ನಡೆಸಿ ಇರ್ಕಾನ್ ಇಂಜಿನಿಯರ್ ದರ್ಪವನ್ನು ತೋರಿ ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾದರು. ಕೂಡಲೇ ಎಚ್ಚೆತ್ತ ಗ್ರಾಮಸ್ಥರು ನವೆಂಬರ್ 10ರಂದು ಸಾವಿರಾರು ಸಂಖ್ಯೆಯಲ್ಲಿ ಸೇರಿ ಜಡಿಮಳೆಯನ್ನು ಲೆಕ್ಕಿಸದೆ ಸುಮಾರು 3 ತಾಸು ಕಾಲ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸಿದ್ದರು.
ಈ ನಡುವೆ, ಹೆದ್ದಾರಿ ಇಲಾಖೆ ಅಧಿಕಾರಿಗಳ ಉಪಸ್ಥಿತಿಯಲ್ಲಿ ಗ್ರಾಮಸ್ಥರು ಈ ದೇವರ ಸನ್ನಿಧಿಯಲ್ಲಿ ಅಷ್ಟಮಂಗಳ ಪ್ರಶ್ನೆ ಇರಿಸಿದಾಗ ಸನ್ನಿಧಿ ತೆರವುಗೊಳಿಸುವುದು ಸರಿಯಲ್ಲ, ಬದಲಾಗಿ ಇದ್ದ ಜಾಗದಲ್ಲೇ ಮೇಲಕ್ಕೆ ಏರಿಸಲು ಮಾತ್ರ ಅನುಮತಿ ದೊರೆಯಿತು. ಇದರಿಂದಾಗಿ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯೂ ನಿಂತುಹೋಯಿತು. ಸನ್ನಿಧಿ ಸಮೀಪ ಚತುಷ್ಪಥ ರಸ್ತೆ ದ್ವಿಪಥಕ್ಕೆ ಮಾತ್ರ ಸೀಮಿತವಾಯಿತು. ಆದರೆ, ಸನ್ನಿಧಿಯನ್ನು ಅಪವಿತ್ರಗೊಳಿಸುವ ಸಂಚು ನಿಗೂಢವಾಗಿ ನಡೆದಿರುವುದು ಪರಿಸ್ಥಿತಿಗೆ ಹಿಡಿದ ಕನ್ನಡಿಯಂತಿದೆ. ಉದ್ದೇಶಪೂರ್ವಕವಾಗಿ ಸನ್ನಿಧಿ ಆವರಣದಲ್ಲಿ ತ್ಯಾಜ್ಯರಾಶಿ ಕಂಡುಬರುತ್ತಿದೆ. ವಿವಿಧ ಸಂಘಟನೆಗಳು, ಸ್ವಯಂ ಸೇವಕರು ಸನ್ನಿಧಿಯಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರೂ ತ್ಯಾಜ್ಯ ಎಸೆಯುವವರ ಮನಸ್ಸು ಬದಲಾಗಲಿಲ್ಲ. ಸಿಸಿ ಕ್ಯಾಮೆರಾ ಕಣ್ಗಾವಲು ಇರಿಸಿ ಹಲವರಿಗೆ ಎಚ್ಚರಿಕೆ ನೀಡಿದ ನಂತರವಷ್ಟೇ ಪರಿಸ್ಥಿತಿ ಬದಲಾಗಿದೆ.
ಈ ಸನ್ನಿಧಿ ತಗ್ಗು ಪ್ರದೇಶದಲ್ಲಿ ಇರುವ ಕಾರಣ, ಕೊಳಚೆ ನೀರು ಸನ್ನಿಧಿ ಆವರಣ ಸೇರುತ್ತಿರುವ ಹಿನ್ನೆಲೆಯಲ್ಲಿ ಜೀರ್ಣೋದ್ಧಾರ ಮಾಡಬೇಕೆಂಬ ಆಗ್ರಹ ಕೇಳಿಬಂತು. ಆದರೆ ಸನ್ನಿಧಿಯ ಜಾಗ ಸರ್ಕಾರದ ಸುಪರ್ದಿಗೆ ಸೇರಿದ್ದರಿಂದ ಹಾಗೂ ಸ್ಥಳಾವಕಾಶದ ಕೊರತೆಯಿಂದ ಸಾಧ್ಯವಾಗಲಿಲ್ಲ. ಹೀಗಾಗಿ ಮತ್ತೊಮ್ಮೆ ಅಷ್ಟಮಂಗಲ ಪ್ರಶ್ನೆಯನ್ನಿಟ್ಟು ಪ್ರಾರ್ಥಿಸಿದಾಗ ‘ಸನ್ನಿಧಿಯ ಉತ್ತರ ದಿಕ್ಕಿನಲ್ಲಿರುವ ಜಾಗ ಸೂಕ್ತ’ ಎಂಬ ಅಂಶ ಬೆಳಕಿಗೆ ಬಂದಿತು. ಇದರಿಂದಾಗಿ ಪುಟ್ಟ ಗುಡಿ ಮುಂದಿನ ದಿನಗಳಲ್ಲಿ ಶಿಲಾಮಯ ದೇವಾಲಯವಾಗಿ ಅಭಿವೃದ್ಧಿ ಹೊಂದುವುದು. ಇಲ್ಲಿನ ಪವಿತ್ರ ತೀರ್ಥ ಪ್ರೋಕ್ಷಣೆಯಿಂದ ಸರ್ವ ಪಾಪ ನಿವಾರಣೆಯಾಗುವುದು ಎಂಬ ಅಂಶ ತಿಳಿದುಬಂದಿದ್ದು ದೇವಾಲಯದ ಜೊತೆಗೆ ಶುದ್ಧ ನೀರಿನ ತೀರ್ಥಬಾವಿ ನಿರ್ಮಾಣ ಮಾಡಬೇಕೆಂದೂ ಗೋಚರವಾಗಿದೆ. ಮುಂದಿನ ದಿನಗಳಲ್ಲಿ ಈ ದೇವಾಲಯ ಇಡೀ ಲೋಕವನ್ನೇ ಬೆಳಗುವ ತೀರ್ಥಕ್ಷೇತ್ರವಾಗಲಿದೆ ಎಂಬ ಅಂಶ ನಿಜಕ್ಕೂ ಧನ್ಯತಾ ಭಾವ ಮೂಡಿಸುತ್ತಿದೆ ಎಂಬುದು ಈ ಭಾಗದ ಆಸ್ತಿಕರ ನಂಬಿಕೆ.
ಆರಂಭದ ದಿನಗಳಲ್ಲಿ ಸಾರ್ವಜನಿಕರಿಂದ ಸನ್ನಿಧಿ ಬಗ್ಗೆ ಹಲವಾರು ಅಪಸ್ವರಗಳು ಕೇಳಿಬಂದವು. ಬ್ರಹ್ಮ ಸನ್ನಿಧಿಯನ್ನು ನಾಗಬ್ರಹ್ಮ ಸನ್ನಿಧಿ ಎಂದು ಕುಹಕವಾಡಿದರು. ‘ನಮ್ಮೂರಲ್ಲೂ ಇದೆ, ಅಂತಹದ್ದೇನು ಅದರಲ್ಲಿದೆ?ತೆರವು ಮಾಡಲು ಅಡ್ಡಿಯಿಲ್ಲ’ ಎಂಬಿತ್ಯಾದಿ ಮಾತುಗಳೂ ಪ್ರತಿಧ್ವನಿಸಿದವು. ಆದರೆ ಅಷ್ಟಮಂಗಳ ಪ್ರಶ್ನೆಯಲ್ಲಿ ಇದೆಲ್ಲದಕ್ಕೂ ಉತ್ತರ ಸಿಕ್ಕಿದೆ ಎಂಬುದು ಹಲವರ ಮಾತುಗಳು.
ಋಷಿಮುನಿಗಳು ತಪಸ್ಸು ಮಾಡಿ ಬ್ರಹ್ಮದೇವರನ್ನು ಒಲಿಸಿಕೊಂಡಿರುವ ಈ ಪುಣ್ಯಭೂಮಿಯಲ್ಲಿ ಬ್ರಹ್ಮ ವಿಷ್ಣು ಮಹೇಶ್ವರರ ಸಾನಿಧ್ಯವಿರುವುದು ವಿಶೇಷ. ಹಿಂದೆ ಯಾವುದೇ ಒಂದು ಪರ್ಯಾಯ ವ್ಯವಸ್ಥೆ ಕಲ್ಪಿಸದೆ, ಧಾರ್ಮಿಕ ವಿಧಿವಿಧಾನ ನೆರವೇರಿಸದೆ, ಅಷ್ಟಮಂಗಳ ನಡೆಸಿ ಪ್ರಶ್ನಾ ಚಿಂತನೆ ನಡೆಸದೆ ಏಕಾಏಕಿ ದರ್ಪದಿಂದ ಸನ್ನಿಧಿ ತೆರವುಗೊಳಿಸಲು ಇರ್ಕಾನ್ ಇಂಜಿನಿಯರ್ ಮುಂದಾಗಿದ್ದು ಗ್ರಾಮಸ್ಥರನ್ನು ಕೆರಳಿಸಿತ್ತು. ಇದರಿಂದಾಗಿ ಗ್ರಾಮಸ್ಥರು ರಸ್ತೆಗಿಳಿದು ಪ್ರತಿಭಟಿಸಬೇಕಾಯಿತು.
ಇದೀಗ ಎಲ್ಲದಕ್ಕೂ ಉತ್ತರ ದೊರೆತಿದೆ. ಕ್ಷೇತ್ರವು ಬೆಳಗಲಿದೆ.. ಸ್ವಚ್ಚ ಸುಂದರ ಶಿಲಾಮಯ ದೇಗುಲ ನಿರ್ಮಾಣವಾಗಲಿದೆ. ಹಾಗಾಗಿ ಬ್ರಹ್ಮರಕೂಟ್ಲು ಶ್ರೀ ಬ್ರಹ್ಮ ಸನ್ನಿಧಿ ಉಳಿಸಿ ಹೋರಾಟ ಸಮಿತಿ ಕಳೆದ 14 ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬಂದಂತಹ ಹೋರಾಟವನ್ನು ಕೈಬಿಟ್ಟು, ದೇವರ ಅಪ್ಪಣೆಯಂತೆ ಮುಂದಿನ ವಿಧಿವಿಧಾನಗಳನ್ನು ನೆರವೇರಿಸಲು ಅವಕಾಶ ನೀಡುತ್ತಿದೆ. ಎಲ್ಲವೂ ಅಂದುಕೊಂಡಂತೆ ನಿರ್ವಿಘ್ನವಾಗಿ ನೆರವೇರಿದಲ್ಲಿ ಕರಾವಳಿಯು ಅನನ್ಯ ಬ್ರಹ್ಮ ಸನ್ನಿಧಿಗೆ ಸಾಕ್ಷಿಯಾಗಲಿದೆ.