ಪೌರಾಡಳಿತ ಇಲಾಖೆ: 5 ಸಾವಿರ ಕೋಟಿಗೂ ಹೆಚ್ಚು ವೆಚ್ಚದ ಕಾಮಗಾರಿಗೆ ಕ್ರಮ

ಬೆಂಗಳೂರು: ಪೌರಾಡಳಿತ ಇಲಾಖೆಯಿಂದ ಸುಮಾರು 5 ಸಾವಿರ ಕೋಟಿಗೂ ಹೆಚ್ಚು ಕಾಮಗಾರಿಗಳನ್ನು ನಡೆಸಲು ತೀರ್ಮಾನಿಸಿದ್ದು, ಈಗಾಗಲೇ ಟೆಂಡರ್ ಪ್ರಕ್ರಿಯೆ ಚಾಲನೆಯಲ್ಲಿದೆ‌ ಎಂದು ಪೌರಾಡಳಿತ ಸಚಿವರಾದ ರಹೀಂ ಖಾನ್ ತಿಳಿಸಿದ್ದಾರೆ.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ರಹೀಂ ಖಾನ್, ಬರಗಾಲದಲ್ಲಿ ಕುಡಿಯುವ ನೀರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎಂದು ನಗರಾಭಿವೃದ್ಧಿ ಸಚಿವರಾದ ಬೈರತಿ ಸುರೇಶ್ ಅವರ ಜೊತೆಗೂಡಿ ಸಾಕಷ್ಟು ಸಭೆಗಳನ್ನು ನಡೆಸಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ‌ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ದೇಶನದ ಮೇರೆಗೆ ಸದಾ ಜನರ ಜೊತೆ ಸಂಪರ್ಕದಲ್ಲಿ ಇರಬೇಕು ಎಂದು ಜನರ ನಡುವೆಯೇ ಕೆಲಸ ಮಾಡುತ್ತಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಗೂ ಕೆಪಿಸಿಸಿ ಅಧ್ಯಕ್ಷರು, ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರ ನಿರ್ದೇಶನದ ಮೇರೆಗೆ ಸಾರ್ವಜನಿಕರ ಅಹವಾಲುಗಳನ್ನು ಪಡೆದುಕೊಳ್ಳಲು ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದ್ದೇನೆ ಎಂದರು.

ಸಾರ್ವಜನಿಕರು ಹಾಗೂ ಪಕ್ಷದ ಕಾರ್ಯಕರ್ತರು ಪದೇ, ಪದೇ ವಿಧಾನಸೌಧಕ್ಕೆ ಬರಲು ಆಗುವುದಿಲ್ಲ. ಅಲ್ಲಿ ಎಲ್ಲರಿಗೂ ಅವಕಾಶ ಸಿಗುವುದು ಕಡಿಮೆ ಆದ ಕಾರಣ ಕಾಂಗ್ರೆಸ್ ಕಚೇರಿಯಲ್ಲಿ ಭೇಟಿ ಮಾಡುವ ಆಲೋಚನೆ ಇದಾಗಿದೆ‌ ಎಂದ ಅವರು, ಅತ್ಯಂತ ಶೀಘ್ರ ಹಾಗೂ ತ್ವರಿತವಾಗಿ ಸಾರ್ವಜನಿಕರು ನೀಡುವ ಮನವಿಗಳನ್ನು ಬಗೆಹರಿಸಬೇಕು ಎಂದು ಸಿಎಂ ಅವರು ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.

ಸುಮಾರು 50 ಕ್ಕೂ ಹೆಚ್ಚು ಮಂದಿ ಕಚೇರಿಯಲ್ಲಿ ಭೇಟಿಯಾಗಿ, ತಮ್ಮ ಮನವಿಗಳನ್ನು ಸಲ್ಲಿಸಿದ್ದಾರೆ. ಸ್ಥಳದಲ್ಲೇ ಬಗೆಹರಿಸುವ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಲಾಗಿದೆ. ನಮ್ಮ ಇಲಾಖೆ ವ್ಯಾಪ್ತಿಯ ಕೆಲಸಗಳನ್ನು ತಕ್ಷಣ ಹಿರಿಯ ಅಧಿಕಾರಿಗಳು, ಇಲಾಖಾ ಕಾರ್ಯದರ್ಶಿಗಳು ಸೇರಿದಂತೆ ಇತರರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ ಸಚಿವರು, ಇತರೇ ಇಲಾಖೆಗಳ ಅಧಿಕಾರಿಗಳಿಗೆ ಸಂಭಂದಿಸಿದ ಕೆಲಸಗಳನ್ನೂ ಸಹ ಗಮನದಲ್ಲಿ ಇಟ್ಟುಕೊಂಡು ಶೀಘ್ರ ಬಗೆಹರಿಸುವಂತೆ ಅವರಿಗೂ ಸೂಚನೆ ನೀಡಿದ್ದೇನೆ ಎಂದರು.

Related posts