ಚಿತ್ರದುರ್ಗ: ದೇವನಹಳ್ಳಿ ಕೆಐಎಡಿಬಿ ಕರ್ಮಕಾಂಡ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಬಿಜೆಪಿ ಆಗ್ರಹಿಸಿದೆ.
ಚಿತ್ರದುರ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನಪರಿಷತ್ ಬಿಜೆಪಿ ಸದಸ್ಯ ಸಿ.ಟಿ.ರವಿ ರಾಜ್ಯ ಸರ್ಕಾರದ ಭೂ ಕರ್ಮಕಾಂಡಗಳ ಬಗ್ಗೆ ಆಕ್ರೋಶ ಹೊರಹಾಕಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿ KIADB ಭೂ ಸ್ವಾದೀನ ಪ್ರಕ್ರಿಯೆಯಲ್ಲಿ ಹಗರಣ ನಡೆದಿದ್ದು, ಈ ಬಗ್ಗೆ ಸಿಟಿಜನ್ ರೈಟ್ಸ್ ಫೌಂಡೇಷನ್’ ಅಧ್ಯಕ್ಷ ಕೆ.ಎ.ಪಾಲ್ ಎಂಬವರು ಲೋಕಾಯುಕ್ತರಿಗೆ ದೂರು ನೀಡಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದರು.
1984 ರಲ್ಲಿ ಇದೇ ಭೂಮಿಯನ್ನು ಉಳುಮೆ ಮಾಡಲು ಸರ್ಕಾರ ಅವಕಾಶ ಕೊಟ್ಟಿಲ್ಲ. ಆದರೆ ಕೆಐಎಡಿಬಿ ಭೂಸ್ವಾದೀನ ಪ್ರಕ್ರಿಯೆ ವೇಳೆ ಜಮೀನಿಗೆ ಮಾಲೀಕರನ್ನು ಹುಟ್ಟುಹಾಕಲಾಗಿದೆ. ಬೇನಾಮಿ ರೀತಿ ಜಮೀನು ಪರಿಹಾರದ ರೂಪದಲ್ಲಿ ಹಣ ನೀಡಲಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಸಿ.ಟಿ.ರವಿ ಆಗ್ರಹಿಸಿದರು.
ಸಿದ್ದರಾಮಯ್ಯ ಸರ್ಕಾರವು ಈ ಭೂಮಿಯನ್ನು ಕೊಟ್ಟಿದ್ದೇ ಆಗಿದ್ದರೇ, ಅದೂ ಕೂಡಾ ಭಾರೀ ಅಕ್ರಮ ಆಗುತ್ತದೆ. ಹಾಗಾಗಿ KIADBಯಿಂದಲೂ ಅತೀ ದೊಡ್ಡ ಹಗರಣ ಎಂಬಂತಾಗುತ್ತದೆ. ಹಾಗಾಗಿ ಸಮಗ್ರ ತನಿಖೆ ನಡೆಯಬೇಕು ಎಂದು ಸಿ.ಟಿ.ರವಿ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಕೆಐಎಡಿಬಿ ಹಗರಣ ಹಾಗೂ ಭೂ ಅಕ್ರಮಗಳನ್ನು ಗಮನಿಸಿದರೆ ‘ಹುಚ್ಚರ ಮದುವೆಯಲ್ಲಿ ಉಂಡವನೇ ಜಾಣ’ ಎನ್ನುವಂತಾಗಿದೆ ಎಂದು ಸಿದ್ದರಾಮಯ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸಿ.ಟಿ.ರವಿ, ಸರ್ಕಾರದ ಜಮೀನೇ ಆಗಿದ್ದರೆ, ಬೇರೆ ಯಾರೋ ಹೆಸರಿಗೆ ಪರಿಹಾರ ನೀಡಿದ್ದು ಸರಿಯಲ್ಲ ಎಂದರು.
ಸಿಎಂ ಭ್ರಷ್ಟಾಚಾರದ ಸ್ವಾತಂತ್ರ್ಯ ಇದೇ ಎಂದು ಘೋಷಣೆ ಮಾಡುವುದು ಸೂಕ್ತ ಎಂದು ರವಿ ಲೇವಡಿ ಮಾಡಿದರು.