ಬೆಂಗಳೂರು: ಜಾತಿ ಸಮೀಕ್ಷೆ ವಿಚಾರದಲ್ಲಿ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿದ್ದು ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲೇ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಇದೇ ವೇಳೆ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರ ಅವಧಿ ವಿಸ್ತರಣೆಗೆ ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ. ಆದರೆ, ಸಿಎಂ ತೀರ್ಮಾನಕ್ಕೆ ಕಾಂಗ್ರೆಸ್ ಚಾಣಾಕ್ಷರು ವಿರೋಧ ವ್ಯಕ್ತಪಡಿಸುವ ಮೂಲಕ ರಾಜ್ಯ ರಾಜಕೀಯದಲ್ಲಿ ಕೋಲಾಹಲಕ್ಕೆ ಕಾರಣರಾಗಿದ್ದಾರೆ.
ಸಿಎಂ ಅವರುವೀ ವಿಚಾರದಲ್ಲಿ ಆತುರದ ನಿರ್ಧಾರ ಬೇಡ ಎಂದು ಕಾಂಗ್ರೆಸ್ ಹಿರಿಯ ನಾಯಕರೇ ಸಲಹೆ ಮುಂದಿಟ್ಟಿದ್ದಾರೆ. ಅದರಲ್ಲೂ ಮಾಜಿ ಶಾಸಕರೂ ಆದ ಕೆಪಿಸಿಸಿ ವಕ್ತಾರ ರಮೇಶ್ ಬಾಬು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿರುವ ಪತ್ರ ಕುತೂಹಲದ ಕೇಂದ್ರಬಿಂದುವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅವಧಿ ವಿಸ್ತರಣೆ ಬೇಡ ಎಂದು ರಾಜಕೀಯ ವಿಶ್ಲೇಷಕರೂ ಆದ ರಮೇಶ್ ಬಾಬು ಸಿಎಂ ಅವರಿಗೆ ಪತ್ರ ಬರೆದಿದ್ದಾರೆ.
ರಮೇಶ್ ಬಾಬು ಅವರ ಪತ್ರದಲ್ಲೇನಿದೆ..?
ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಸುಮಾರು 165 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಿರುತ್ತದೆ. ಸುಪ್ರೀಂ ಕೋರ್ಟ್ ನಿರ್ದೇಶನಕ್ಕೆ ಅನುಗುಣವಾಗಿ ಪ್ರತೀ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗಗಳನ್ನು ರಚಿಸಲಾಗಿದ್ದು, ಈ ಆಯೋಗಗಳ ವರದಿಗೆ ಅನುಗುಣವಾಗಿ ರಾಜ್ಯಗಳಲ್ಲಿ ಹಿಂದುಳಿದ ವರ್ಗ ಮತ್ತು ಜಾತಿಗಳನ್ನು ಅವುಗಳ ಸಾಮಾಜಿಕ ಮತ್ತು ಶೈಕ್ಷಣಿಕ ಅಂಶಗಳ ಮೇಲೆ ನಿರ್ಧರಿಸಲಾಗುತ್ತದೆ. ಹೆಚ್.ಕಾಂತರಾಜು ನೇತೃತ್ವದ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ನಿಗದಿತ ಸಮಯದಲ್ಲಿ ಪಡೆಯದೆ ಇರುವುದು ಅನೇಕ ರಾಜಕೀಯ ಚರ್ಚೆಗಳಿಗೆ ಅವಕಾಶವನ್ನು ಕೊಟ್ಟಿರುತ್ತದೆ. ಸುಪ್ರೀಂ ಕೋರ್ಟಿನ ತೀರ್ಪಿಗೆ ಅನುಗುಣವಾಗಿ ರಾಜ್ಯ ಸರ್ಕಾರ ಸದರಿ ವರದಿಯನ್ನು ಪಡೆದು, ಅದರ ಜಾರಿ ಮತ್ತು ವರದಿಯ ಅಂಶಗಳ ಕುರಿತು ಸಾರ್ವಜನಿಕ ಚರ್ಚೆಗೆ ಅವಕಾಶ ಕಲ್ಪಿಸಬೇಕಾಗಿದೆ ಎಂದು ರಮೇಶ್ ಬಾಬು ಅಭಿಪ್ರಾಯ ಮುಂದಿಟ್ಟಿದ್ದಾರೆ.
ರಮೇಶ್ ಬಾಬು ಪ್ರತಿಪಾದನೆ ಹೀಗಿದೆ:
-
ಹಿಂದಿನ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ತನ್ನ ಅವಧಿ ಮುಗಿದ ನಂತರವೂ ಆಯೋಗದ ಅವಧಿಯನ್ನು ವಿಸ್ತರಿಸಿಕೊಳ್ಳಲು ಸಕಾಲದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಿಲ್ಲ ಎಂಬ ಆರೋಪ ಇದೆ.
-
ಆಯೋಗಗಳು ಪದೇ ಪದೇ ತಮ್ಮ ಅವಧಿಯ ನಂತರವೂ ವಿಸ್ತರಣೆಗೆ ರಾಜ್ಯ ಸರ್ಕಾರಕ್ಕೆ ಒತ್ತಡ ಹಾಕುವುದು ಸರಿಯಾದ ಕ್ರಮ ಆಗಿರುವುದಿಲ್ಲ.
-
ಈಗಿನ ಆಯೋಗದ ಅಧ್ಯಕ್ಷರು ಆಯೋಗದ ಅವಧಿಯನ್ನು ವಿಸ್ತರಿಸುವಂತೆ ಮಾಡಿರುವ ಮನವಿ ಸಮಂಜಸವಲ್ಲ.
-
ಯಾವುದೇ ಆಯೋಗಗಳು ರಾಜ್ಯ ಸರ್ಕಾರದ ಅಡಿಯಲ್ಲಿ ಬಂದರೂ ಅವುಗಳಿಗೆ ವಿಶೇಷವಾದ ಸ್ಥಾನಮಾನ ಮತ್ತು ಅಧಿಕಾರಗಳನ್ನು ನೀಡಲಾಗಿರುತ್ತದೆ.
-
ಆಯೋಗದಲ್ಲಿ ಮೂಲ ವರದಿ ಅಥವಾ ಪ್ರತಿ ನಾಪತ್ತೆ ಆಗಿದ್ದರೆ, ತಪ್ಪಿತಸ್ತರ ಮೇಲೆ ದೂರು ದಾಖಲಿಸಬೇಕಾಗಿತ್ತು.
-
ಸಾರ್ವಜನಿಕರ ಹಣವನ್ನು ವೆಚ್ಚ ಮಾಡಿ ಸಮೀಕ್ಷೆ ನಡೆಸಿ ಈಗ ಮೂಲ ವರದಿ ನಾಪತ್ತೆಯಾಗಿದೆ ಎಂದರೆ ಅದು ಅನೇಕ ಅನುಮಾನಗಳಿಗೆ ಅವಕಾಶ ನೀಡುತ್ತದೆ.
-
ವರದಿಯ ದತ್ತಾಂಶದ ಜೊತೆಗೆ ಸಮೀಕ್ಷೆಯ ವರದಿ ಅಂತಿಮಗೊಳ್ಳುವ ಮೊದಲು ಅನೇಕ ಸಭೆಯ ನಡವಳಿಕೆಗಳನ್ನು ಮಾಡಲಾಗಿದ್ದು, ಪ್ರತೀ ನಡವಳಿಕೆಯಲ್ಲಿ ಆಯೋಗದ ಅಧ್ಯಕ್ಷರು, ಸದಸ್ಯರು ಮತ್ತು ಕಾರ್ಯದರ್ಶಿ ತಮ್ಮ ಸಹಿ ಮಾಡಿರುತ್ತಾರೆ.
ಸಾಂವಿಧಾನಿಕವಾಗಿ ಆಯೋಗಕ್ಕೆ 3 ವರ್ಷಗಳ ಅವಧಿಯನ್ನು ನೀಡಲಾಗಿದ್ದು, ಅವಧಿ ಪೂರೈಕೆಗೆ ಮುಂಚೆ ಸಮೀಕ್ಷೆಯ ವರದಿಯನ್ನು ಮತ್ತು ಆಯೋಗದ ಇತರೆ ವರದಿಗಳನ್ನು ಸರ್ಕಾರಕ್ಕೆ ನೀಡಲಿ. ಯಾವುದೇ ಆಯೋಗಗಳು ತಮ್ಮ ಅವಧಿಯ ಒಳಗೆ ಪೂರ್ಣಮಟ್ಟದ ಕಾರ್ಯಗಳನ್ನು ಮಾಡಲು ಅವಕಾಶದ ಜೊತೆಗೆ ಸಿಬ್ಬಂದಿ ಮತ್ತು ಸೌಲಭ್ಯಗಳನ್ನು ನೀಡಲಾಗಿದೆ. ತಮ್ಮ ಜವಾಬ್ದಾರಿಗಳನ್ನು ನಿಗಧಿತ ಅವಧಿಯಲ್ಲಿ ಆಯೋಗಗಳು ಪರಿಣಾಮಕಾರಿಯಾಗಿ ನಿರ್ವಹಿಸದೇ ಹೋದರೆ ಆಯೋಗಗಳ ಮೂಲ ಉದ್ದೇಶವೇ ವಿಫಲವಾಗುತ್ತದೆ. ಆಯೋಗಗಳ ಅವಧಿಯನ್ನು ಪದೇ ಪದೇ ವಿಸ್ತರಿಸುವ ಮೂಲಕ ಕೆಟ್ಟ ಪರಂಪರೆಗೆ ಅವಕಾಶ ನೀಡಬಾರದೆಂದು ರಮೇಶ್ ಬಾಬು ಅವರು ರಾಜ್ಯ ಸರ್ಕಾರವನ್ನು ಕೋರಿದ್ದಾರೆ.