ದೊಡ್ಡಬಳ್ಳಾಪುರದಲ್ಲಿ ಅರಳಿದ ಕಮಲ. ಕಾಂಗ್ರೆಸ್ ಭದ್ರಕೋಟೆಯಲ್ಲಿ ಬಿಜೆಪಿಯ ಧೀರಜ್ ಜಯಭೇರಿ.

ಬೆಂಗಳೂರು: ದೊಡ್ಡಬಳ್ಳಾಪುರ ವಿಧಾನಸಭೆ ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ಸಾರ್ವತ್ರಿಕ ಚುನಾವಣೆಯೊಂದರಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಕಾಂಗ್ರೆಸ್, ಜೆಡಿಎಸ್ ಭದ್ರಕೋಟೆಯಂತಿದ್ದ ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ಕಮಲ ಅರಳಿ ನಿಂತಿದೆ. 31 ವರ್ಷದ ಯುವಕ ಧೀರಜ್ ಮುನಿರಾಜು ಹಾಲಿ ಶಾಸಕ ಕಾಂಗ್ರೆಸ್ ನ ಟಿ.ವೆಂಕಟರಮಣಯ್ಯ ವಿರುದ್ಧ ದಾಖಲೆಯ ೩೧,೩೭೫ ಮತಗಳ ಅಂತರದಿಂದ ವಿಜಯ ಪತಾಕೆ ಹಾರಿಸಿದ್ದಾರೆ. ಈ ಮೂಲಕ ರಾಜ್ಯದಲ್ಲೇ ಅತ್ಯಂತ ಕಿರಿಯ ವ್ಯಕ್ತಿ ಶಾಸಕರಾಗಿ ಆಯ್ಕೆಯಾಗಿದ್ದರೆ.

ತ್ರಿಕೋನ ಸ್ಪರ್ಧೆಯೊಂದಿಗೆ ಜಿದ್ದಾಜಿದ್ದಿನಿಂದ ಕೂಡಿದ್ದ ಕ್ಷೇತ್ರದಲ್ಲಿ ಮತದಾನ ಮುಕ್ತವಾದರೂ ಗೆಲುವು ಮಾಲೆ ಯಾರಿಗೆ ಎಂಬುದನ್ನು ಅಂದಾಜಿಸಲು ಸಾಧ್ಯವಾಗಿರಲಿಲ್ಲ. ಕಾಂಗ್ರೆಸ್ ನಾಯಕರು ನಮ್ಮದೆ ಹ್ಯಾಟ್ರಿಕ್ ಗೆಲುವು ಎಂದು ಬೀಗುತ್ತಿದ್ದರು. ಜೆಡಿಎಸ್ ನವರು ಮತದಾರ ಪ್ರಭು ಈ ಬಾರಿ ನಮ್ಮ ಕೈಹಿಡಿಯಲಿದ್ದಾನೆ ಎಂದು ಅಬ್ಬರಿಸಿದ್ದರು. ಬಿಜೆಪಿಯವರು ಅಭಿವೃದ್ಧಿಗಾಗಿ, ಭ್ರಷ್ಟಾಚಾರ ಮುಕ್ತ, ಅಕ್ರಮ ಮದ್ಯ ಮಾರಾಟಕ್ಕೆ ಇತಿಶ್ರೀ ಹಾಡಲು ಒಮ್ಮೆ ಅವಕಾಶ ನೀಡಿ ಎಂದು ಮತಯಾಚನೆ ಮಾಡಿದ್ದರು. ಒಟ್ಟಾರೆ ಮತದಾರನ ಫಲಿತಾಂಶಕ್ಕೆ ಅಭ್ಯರ್ಥಿಗಳು ಬೆಚ್ಚಿಬಿದ್ದಿದ್ದಾರೆ. ಬಿಜೆಪಿಯ ಅಭ್ಯರ್ಥಿ ಧೀರಜ್ ಮುನಿರಾಜುಗೆ ತಾಲ್ಲೂಕಿನ ಜನತೆ ಆಶೀರ್ವಾದ ಮಾಡುವ ಮೂಲಕ ಕಮಲವನ್ನು ಅರಳಿಸಿದ್ದಾರೆ.

ತಾಲ್ಲೂಕಿನ ಒಟ್ಟು ೨ ಲಕ್ಷ್ಮ ೧೪ ಸಾವಿರ ಮತದಾರರಲ್ಲಿ ೧,೮೧,೦೨೬ ಮತಗಳು ಮತದಾನವಾಗಿತ್ತು. ಅದರಲ್ಲಿ ಬಿಜೆಪಿಯ ಅಭ್ಯರ್ಥಿ ಧೀರಜ್ ಮುನಿರಾಜು ೮೪,೪೪೫ ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಟಿ.ವೆಂಕಟರಮಣಯ್ಯ ೫೩,೦೭೦ ಮತಗಳನ್ನು ಪಡೆದು ದ್ವಿತೀಯ ಸ್ಥಾನಕ್ಕೆ ಕುಸಿದಿದ್ದಾರೆ. ಜೆಡಿಎಸ್ ಅಭ್ಯರ್ಥಿ ಬಿ.ಮುನೇಗೌಡ ೩೮,೯೬೮ ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ. ಒಟ್ಟಾರೆ ಹಾಲಿ ಶಾಸಕ ವೆಂಕಟರಮಣಯ್ಯ ವಿರುದ್ಧ ಕಾಂಗ್ರೆಸ್ ಭದ್ರಕೋಟೆಯನ್ನು ಛಿದ್ರಗೊಳಿಸಿರುವ ಬಿಜೆಪಿಯ ಹೊಸ ಮುಖ ಧೀರಜ್ ಮುನಿರಾಜು 31,375 ಮತಗಳ ದಾಖಲೆಯ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಮುಗಿಲು ಮುಟ್ಟಿದ ಜೈಕಾರ:

ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜು ಗೆಲುವು ನಿಶ್ಚಿತವಾಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ನಗರದ ವಿವಿಧೆಡೆ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

Related posts