KIADB ಭೂಸ್ವಾಧೀನಕ್ಕೆ ರೈತರ ವಿರೋಧ. ಬಾಗಾಯ್ತು ದರದಂತೆ 1:4ಅನುಪಾತದಲ್ಲಿ ಪರಿಹಾರಕ್ಕೆ ಬೇಡಿಕೆ

ಬೆಂಗಳೂರು: ದೊಡ್ಡಬಳ್ಳಾಪುರ ತಾಲೂಕಿನ ಕೊನಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೈತರ ಕೃಷಿ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳುತ್ತಿರುವ ಕೆಐಎಡಿಬಿ ಕ್ರಮ ಅವೈಜ್ಞಾನಿಕವಾಗಿದೆ. ರೈತರ ಒಪ್ಪಿಗೆ ಪಡೆಯದೇ ಭೂಸ್ವಾಧೀನದ ನೊಟೀಸ್ ನೀಡಿ ಈಗ ರೈತರ ಗಮನಕ್ಕೆ ತರದೇ ಬೆಲೆ ನಿಗದಿಪಡಿಸಲಾಗಿದೆ. ನಿಯಮಾನುಸಾರ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ನೀಡಬೇಕಾದ ಪರಿಹಾರದ ಮೊತ್ತವನ್ನು ನೀಡದ ಹೊರತು ಅಕಾರಿಗಳ ಯಾವುದೇ ವಾಹನ ಇಲ್ಲಿಗೆ ಬರಲು ಬಿಡುವುದಿಲ್ಲ. ರೈತರ ಹಿತಕ್ಕಾಗಿ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಕೊನಘಟ್ಟ ಗ್ರಾಮದ ಭೂಸ್ವಾಧೀನಕ್ಕೊಳಪಡುವ ಜಮೀನಿನ ರೈತರು ಹೇಳಿದ್ದಾರೆ.

ಕೊನಘಟ್ಟ ಗ್ರಾಮದಲ್ಲಿ ನಡೆದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಟಿಎಪಿಎಂಸಿಎಸ್ ನಿರ್ದೇಶಕ ಆನಂದ್, ರೈತ ಮುಖಂಡ ರಾಮಾಂಜಿನಪ್ಪ ತಾಲೂಕಿನ ಕೊನಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿ, ಆದಿನಾರಾಯಣ ಹೊಸಹಳ್ಳಿ, ನಾಗದೇನಹಳ್ಳಿಗಳಿಗೆ ಒಳಪಡುವ ಪ್ರದೇಶಗಳ ಸುಮಾರು 970 ಎಕರೆ ಜಮೀನನ್ನು ಕೆಐಎಡಿಬಿ ಕೈಗಾರಿಕಾ ಪ್ರದೇಶದ ವಿಸ್ತೀರ್ಣಕ್ಕಾಗಿ ಸ್ವಾಧೀನ ಪಡಿಸಿಕೊಳ್ಳಲು ರೈತರಿಗೆ ನೊಟೀಸ್ ನೀಡಿದೆ. ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಎರಡು ಸಭೆಗಳಲ್ಲಿ ಬಹಳಷ್ಟು ರೈತರು ಹಾಜರಾಗಿಲ್ಲ ಹಾಗೂ ಜಮೀನು ನೀಡಲು ಒಪ್ಪಿಗೆ ನೀಡಿಲ್ಲ. ಇಲ್ಲಿನ ಕೃಷಿ ಜಮೀನಿನಲ್ಲಿ ಏನೂ ಇಲ್ಲ ಎಂದು ಅಧಿಕಾರಿಗಳು ವರದಿ ನೀಡಿದ್ದಾರೆ ಎಂದರು.

ಕೃಷಿ ಭೂಮಿ ಎಕರೆಗೆ 70 ಲಕ್ಷ ರೂ ನಿಗದಿಪಡಿಸಿದೆ. ಸಭೆಯಲ್ಲಿ ಬೆಲೆ ಸ್ಪಷ್ಟಪಡಿಸಿ ಎಂದರೆ ಅಧಿಕಾರಿಗಳಿಂದ ಉತ್ತರವಿಲ್ಲ. ರೈತರ ಸಂಕಷ್ಟ ಅರಿಯದ ಅಧಿಕಾರಿಗಳು ದಲ್ಲಾಳಿಗಳಂತೆ ವರ್ತಿಸುತ್ತಿದ್ದಾರೆ. ಇಲ್ಲಿನ ಬಹಳಷ್ಟು ಜಮೀನುಗಳನ್ನು 1978-79ರಲ್ಲಿ ಸರ್ಕಾರದಿಂದ ಎಸ್.ಸಿ/ಎಸ್.ಟಿ ಸಮುದಾಯಕ್ಕೆ ಸರ್ಕಾರ ನೀಡಿದೆ ಎಂದವರು ತಿಳಿಸಿದರು.

ರೈತ ನರಸಿಂಹಮೂರ್ತಿ ಮಾತನಾಡಿ, ಸರ್ಕಾರ ನೀಡುವ ಪರಿಹಾರದಿಂದ ನಾವು ಬೇರೆಡೆ ಜಮೀನು ಕೊಳ್ಳಲಾಗುವುದಿಲ್ಲ.. ಇಲ್ಲಿನ ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳನ್ನು ವಿದೇಶಕ್ಕೆ ಸಹ ರಪ್ತು ಮಾಡಲಾಗುತ್ತಿದೆ.ನನ್ನ 2.5 ಎಕರೆ ಭೂಮಿ ಪೂರ್ಣ ಹೋಗಲಿದೆ. ಇಲ್ಲಿನ ಬಹುಪಾಲು ರೈತರು ಜಮೀನು ಕಳೆದುಕೊಂಡು ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದರು. ರಾಜಘಟ್ಟದ ನಿವೃತ್ತ ಶಿಕ್ಷಕ ಕೃಷ್ಣಪ್ಪ ಮಾತನಾಡಿ, ಜಮೀನು ನೀಡಲು ರೈತರು ಸಭೆಯನ್ನು ಬಹಿಷ್ಕರಿಸಿದ್ದರೂ ಅಧಿಕಾರಿಗಳು ರೈತರಿಗೆ ನೊಟೀಸ್ ನೀಡುವ ಮೂಲಕ ಶಾಕ್ ನೀಡಿದ್ದಾರೆ. ಸರಿಯಾದ ಬೆಲೆ ನೀಡದ ಹೊರತು ಭೂಮಿ ನೀಡುವುದಿಲ್ಲ ಎಂದರು. ರೈತ ಪಾಪೇಗೌಡ ಮಾತನಾಡಿ, ನಮ್ಮದು 6 ಎಕರೆ ಅಡಿಕೆ ತೋಟವಿದೆ. ರೈತರು ಜಮೀನು ನೀಡಿದರೆ ಅನಾಥರಾಗಬೇಕಾಗುತ್ತದೆ ಎಂದರು.

ರೈತ ಕೆಂಪೇಗೌಡ ಮಾತನಾಡಿ, ನಮ್ಮದು 80 ಚದರ ಮನೆ ಇದೆ. ಕಟ್ಟಡದ ಮೌಲ್ಯ ಸಹ ಅವೈಜ್ಞಾನಿಕವಾಗಿದೆ. ಕೃಷಿ ಭೂಮಿಯಿಂದ ಇಲ್ಲಿನ ರೈತರು ಆದಾಯ ಗಳಿಸುತ್ತಿದ್ದರೂ ಅದನ್ನು ವಶಪಡಿಸಿಕೊಂಡು, ಸಂಕಷ್ಟಕ್ಕೆ ದೂಡುವುದು ಸರಿಯಲ್ಲ ಎಂದರು.

ಭೂಮಿ ನೀಡಲು ಶೇ.70 ರೈತರ ಒಪ್ಪಿಗೆ ಇಲ್ಲ. ರೈತರ ಸಭೆ ಕರೆದು ವೈಜ್ಞಾನಿಕವಾಗಿ ಬೆಲೆ ನಿಗದಿ ಪಡಿಸಲಿ. 2021ರಲ್ಲಿ ಇಲ್ಲಿನ ಬೆಲೆ 55 ರಿಂದ 89 ಲಕ್ಷ ರೂ ಇತ್ತು. ಈಗ ಖುಷ್ಕಿ ಜಮೀನಿಗೆ 70 ಲಕ್ಷ ರೂ ಹಾಗೂ ಬಾಗಾಯ್ತು ಜಮೀನಿಗೆ 1.10 ಕೋಟಿ ನಿಗದಿ ಮಾಡಲಾಗಿದೆ. ನೋಂದಣಿ ವೇಳೆ ಎಲ್ಲಾ ಕೃಷಿ ಭೂಮಿಗೆ ಒಂದೇ ದರ ವಿಧಿಸುವ ಸರ್ಕಾರ ಸ್ವಾಧೀನ ಪಡಿಸಿಕೊಳ್ಳುವಾಗ ಬೇರೆ ದರ ನಿಗದಿಪಡಿಸುವುದು ತರವಲ್ಲ. ಎಲ್ಲಾ ಜಮೀನಿಗೂ ಬಾಗಾಯ್ತು ದರದಂತೆ ನಿಗದಿ ಮಾಡಬೇಕು. 1;4 ಅನುಮಾಪಾತದಲ್ಲಿ ರೈತರ ಒಪ್ಪಿಗೆ ಪಡೆದು ಪರಿಹಾರ ನೀಡಬೇಕು ಎಂದು ರೈತ ಮುಖಂಡ ಕೆ.ಎಂ. ರಾಮಾಂಜಿನಪ್ಪ ಹೇಳಿದ್ದಾರೆ.

ಸುದ್ಧಿಗೋಷ್ಟಿಯಲ್ಲಿ ಭೂಸ್ವಾಧೀನಕ್ಕೊಳಪಡುವ ರೈತರು, ಗ್ರಾಮಸ್ಥರಾದ ಆನಂದ್, ರಾಮಾಂಜಿನಪ್ಪ, ನರಸಿಂಹಮೂರ್ತಿ, ಕೃಷ್ಣಪ್ಪ, ಪಾಪೇಗೌಡ, ರಾಮೇಗೌಡ ಸೇರಿದಂತೆ ಹಾಗೂ ಮುಖಂಡರು ಉಪಸ್ಥಿತರಿದ್ದರು.

Related posts