ದೊಡ್ಡಬಳ್ಳಾಪುರ: ಸರ್ವಧರ್ಮ ಸಮನ್ವಯ ಸಾರುವ ನಿಟ್ಟಿನಲ್ಲಿ ಗೌರಿ ಗಣೇಶ ಹಬ್ಬವನ್ನು ಆಚರಿಸಬೇಕು, ಖಾಸಗಿ, ಸರ್ಕಾರಿ ಜಾಗದಲ್ಲಿ ಪ್ರತಿಷ್ಠಾಪನೆ ಮಾಡಲು ಸಂಬಂಧಿಸಿದ ಗ್ರಾಮ ಪಂಚಾಯಿತಿ ವತಿಯಿಂದ ಹಾಗೂ ಸ್ಥಳೀಯ ಆಡಳಿತದಿಂದ ಪೂರ್ವಾನುಮತಿಯನ್ನು ಪಡೆಯಬೇಕು ಎಂದು ಡಿವೈಎಸ್ಪಿ ರವಿ ಪಿ ತಿಳಿದಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಉಪವಿಭಾಗದ ವತಿಯಿಂದ ಗೌರಿ ಗಣೇಶ ಹಬ್ಬದ ಪ್ರಯುಕ್ತ ಡಿವೈಎಸ್ ಪಿ ರವಿ.ಪಿ ಅವರ ನೇತೃತ್ವದಲ್ಲಿ ಶಾಂತಿ ಸಭೆಯನ್ನು ನಗರದ ಬಸವ ಭವನದಲ್ಲಿ ಆಯೋಜನೆ ಮಾಡಲಾಗಿತ್ತು. ಈ ಸಭೆಯಲ್ಲಿ ಮಾತನಾಡಿದ ಅವರು, ಧ್ವನಿ ವರ್ಧಕ ಅನುಮತಿ ಪತ್ರ, ಬೆಸ್ಕಾಂ ಇಲಾಖೆಯಿಂದ ಅನುಮತಿ ಪತ್ರ, ರಸ್ತೆ ಸಂಚಾರಕ್ಕೆ ಅಡಚಣೆಯಾಗದಂತೆ ಶೆಡ್, ಪೂಜಾ ಸ್ಥಳ ನಿರ್ಮಿಸಬೇಕು, ಡಿ.ಜೆ ಸೌಂಡ್ ಬಳಸಿ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವಂತಿಲ್ಲ ಎಂದು ತಿಳಿಸಿದರು.
ಗಣೇಶ ಮೂರ್ತಿಯನ್ನು ಸಾರ್ವಜನಿಕ ಸ್ಥಳಗಳಲ್ಲಿ 4ಅಡಿ ಎತ್ತರ ಮೀರದಂತೆ ಹಾಗೂ ಮನೆಗಳಲ್ಲಿ 2ಅಡಿ ಎತ್ತರ ಮೀರದಂತೆ ಪ್ರತಿಷ್ಠಾಪಿಸಬೇಕು, ಮೆರವಣಿಗೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಕಾನೂನು ಸುವ್ಯವಸ್ಥೆಗೆ ಯಾವುದೇ ರೀತಿಯಲ್ಲಿ ಭಂಗವನ್ನುಂಟು ಮಾಡದಂತೆ ಹಬ್ಬವನ್ನು ಶಾಂತ ರೀತಿಯಲ್ಲಿ ಆಚರಿಸಬೇಕು ಎಂದು ತಹಶೀಲ್ದಾರ್ ವಿಭಾ ವಿದ್ಯಾ ರಾಠೋಡ್ ತಿಳಿಸಿದರು.