ಇ-ಖಾತೆಗೆ ಲಂಚ? ಭ್ರಷ್ಟಚಾರದ ಕೂಪವಾಯಿತೇ ದೊಡ್ಡಬಳ್ಳಾಪುರ ನಗರಸಭೆ?

ದೊಡ್ಡಬಳ್ಳಾಪುರ: ನಗರಸಭೆ ವ್ಯಾಪ್ತಿಯಲ್ಲಿ ಇ-ಖಾತೆ ಮಾಡಲು ಅಧಿಕಾರಿಗಳು 15 ರಿಂದ 20 ಸಾವಿರ ರೂ ಲಂಚ ಬೇಡಿಕೆಯನ್ನು ಒಡ್ಡುತ್ತಿದ್ದಾರೆಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪರಾಜಿತ ಅಭ್ಯರ್ಥಿ ಬಿ.ಶಿವಶಂಕರ್ ಗಂಭೀರ ಆರೋಪ ಮಾಡಿದ್ದಾರೆ.

ದೊಡ್ಡಬಳ್ಳಾಪುರ ಕೆಆ‌ರ್‌ಎಸ್ ಪಕ್ಷದ ಕಚೇರಿಯಲ್ಲಿ  ಸುದ್ದಿಗೋಷ್ಠಿ ನಡೆಸಿದ ಅವರು, ಲಂಚದ ಕುರಿತಂತೆ ಕೇಳಿದರೆ ಇಂತಿಂತ ಅಧಿಕಾರಿಗಳಿಗೆ ಇಷ್ಟಿಷ್ಟು ನೀಡಬೇಕೆಂದು ಬಹಿರಂಗವಾಗಿ ಹೇಳುತ್ತಿರುತ್ತಾರೆ. ಇದೇ ಸಮಸ್ಯೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ಮುಂದುವರಿದಿದೆ ಎಂದು ದೂರಿದರು.

ಲಂಚಾವತಾರ ತಪ್ಪಿಸಲು ಕಂದಾಯ ಅದಾಲತ್ ಮೂಲಕ ಸಾರ್ವಜನಿಕರಿಗೆ ಇ-ಖಾತೆ ಮಾಡಿಕೊಡುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲು ಒತ್ತಡ ಹೇರಲಾಗುವುದು. ಆ ಮೂಲಕ ಸಾರ್ವಜನಿಕರ ಸಹಕಾರದಿಂದ ಆಡಳಿತವನ್ನು ಜನರ ಬಾಗಿಲಿಗೆ ಮುಟ್ಟಿಸಲು ಹೆಚ್ಚಿನ ಗಮನ ಹರಿಸಲಾಗುವುದು ಎಂದರು.

ನಗರಸಭೆ ವತಿಯಿಂದ ಅಂಗಡಿ ಮಳಿಗೆಗಳನ್ನು ನಿರ್ಮಿಸಲಾಗಿದ್ದರೂ, ಬಾಡಿಗೆಗೆ ನೀಡುತ್ತಿಲ್ಲ ಈ ಹಿನ್ನೆಲೆ, ತಳ್ಳುವ ಗಾಡಿಯ ಮೂಲಕ ವ್ಯಾಪಾರ ಮಾಡಬೇಕಾದ ಅನಿವಾರ್ಯತೆಗೆ ವ್ಯಾಪಾರಿಗಳು ಸಿಲುಕಿದ್ದಾರೆ. ನಾಗರಕೆರೆ ಸೇರಿದಂತೆ ನಗರಸಭೆಗೆ ಸೇರಿದ ಅನೇಕ ಬೆಲೆಬಾಳುವ ಆಸ್ತಿ ಒತ್ತುವರಿಯಾಗಿದೆ ಎಂದು ದೂರಿದ ಅವರು, ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಹೆಸರಿಗೆ ಚೆನ್ನಾಗಿರುವುದು ಬಿಟ್ಟರೆ ಸಾರ್ವಜನಿಕರಿಗೆ ಯಾವುದೇ ಉಪಯೋಗವಾಗಿಲ್ಲ, ತಾಲೂಕಿನಲ್ಲಿ ಕಂಡು ಬಂದಿರುವ ಸಮಸ್ಯೆಗಳ ಕುರಿತಂತೆ ಅಧಿಕಾರಿಗಳ ಗಮನಕ್ಕೆ ತರಲಾಗುತ್ತಿದು, ಅಧಿಕಾರಿಗಳು ಸ್ಪಂದಿಸದೇ ಹೋದಲ್ಲಿ ಹೋರಾಟಗಳನ್ನು ನಡೆಸಲಾಗುವುದು ಎಂದರು

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಯುವಘಟಕದ ಅಧ್ಯಕ್ಷ ಆನಂದ್, ತಾಲೂಕು ಅಧ್ಯಕ್ಷ ಹೆಚ್.ಎನ್.ವೇಣು, ನಗರ ಅಧ್ಯಕ್ಷ ನಾಗರಾಜು, ಕಾರ್ಯದರ್ಶಿ ವೆಂಕಟೇಶ್, ಚಾಲಕರ ಸಂಘದ ಅಧ್ಯಕ್ಷ ವಿಜಯ್‌, ಉಪಾಧ್ಯಕ್ಷ ಗೋವಿಂದರಾಜು ಉಪಸ್ಥಿತರಿದ್ದರು.

Related posts