ದೊಡ್ಡಬಳ್ಳಾಪುರ ನಗರದಲ್ಲಿ ಕಡ್ಡಾಯ ಏಕಮುಖ ಸಂಚಾರ ನಿಯಮ ಜಾರಿ.. ಮನಸೋಇಚ್ಛೆ ರಸ್ತೆಗಳಲ್ಲಿ ಮಾಡುವಂತಿಲ್ಲ ಪಾರ್ಕಿಂಗ್.. ಸಂಚಾರಿ ನಿಯಮಗಳ ಪಾಲನೆ ಕಡ್ಡಾಯ.. ಸಂಚಾರ ದಟ್ಟಣೆ ತಪ್ಪಿಸಲು ಸಿಪಿಐ ಪಣ..
ದೊಡ್ಡಬಳ್ಳಾಪುರ: ಎಲ್ಲೆಂದರಲ್ಲಿ ನಿಲ್ಲಿಸುತ್ತಿದ್ದ ವಾಹನಗಳಿಗೆ ಕಡಿವಾಣ, ಮನಸೋಇಚ್ಛೆ ರಸ್ತೆಗಳಲ್ಲಿ ನುಗ್ಗುತ್ತಿದ್ದ ಚಾಲಕರು ಹಾಗೂ ಬೈಕ್ ಸವಾರರಿಗೆ ಮೂಗುದಾರ ಹೀಗೆ ಕಠಿಣ ಕ್ರಮಗಳ ಮೂಲಕ ನಗರದಲ್ಲಿ ಸಂಚಾರ ದಟ್ಟಣೆ ತಪ್ಪಿಸಿ ಪಟ್ಟಣದ ಸೌಂದರ್ಯ ಹೆಚ್ಚಿಸಲು ಮುಂದಾಗಿರುವ ನಗರ ಠಾಣಾ ಪೊಲೀಸರು ಸಂಚಾರ ಹಾಗೂ ಪಟ್ಟಣದಲ್ಲಿ ಹಲವಾರು ಬದಲಾವಣೆಗಳನ್ನು ಜಾರಿಗೆ ತಂದಿದ್ದಾರೆ. ಸುಗಮ ಸಂಚಾರಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ. ನಿಯಮಗಳ ಪಾಲನೆ ಮಾಡದಿದ್ದಲ್ಲಿ ದಂಡಂ, ದಶಗುಣಂ ಕಟ್ಟಿಟ್ಟಬುತ್ತಿ ಎನ್ನುತ್ತಾರೆ ಪೊಲೀಸರು.
ಹೆಲ್ಮೆಟ್, ಸೀಟ್ ಬೆಲ್ಟ್, ಧರಿಸದೇ ಚಾಲನೆ, ಮಿತಿಮೀರಿದ ವೇಗ, ಅಡ್ಡಾದಿಡ್ಡಿ ಚಾಲನೆ, ಸಿಗ್ನಲ್ ಜಂಪ್, ಎಲ್ಲೆಂದರಲ್ಲಿ ವಾಹನ ನಿಲುಗಡೆ, ದಾಖಲೆಗಳಿಲ್ಲದೇ ವಾಹನ ಚಾಲನೆ, ವಾಹನಗಳಿಗೆ ವಿಮೆ ಇಲ್ಲದೆ ಚಾಲನೆ ಹೀಗೆ ಎಲ್ಲ ಬಗೆಯ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸುವ ಜತೆಗೆ, ಇನ್ನೊಮ್ಮೆ ಉಲ್ಲಂಘನೆ ಮಾಡಿದರೆ ಪರವಾನಗಿ ರದ್ದುಪಡಿಸುವ ಎಚ್ಚರಿಕೆ ನೀಡಿದ್ದಾರೆ.
ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಹಿನ್ನಲೆಯಲ್ಲಿ ನಗರ ವ್ಯಾಪ್ತಿಯಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಪ್ರಮುಖ ಜನ ಸಂದಣಿ ಪ್ರದೇಶಗಳಲ್ಲಿ ಸಿಸಿ ಟಿವಿ ಕಣ್ಗಾವಲು ವಾಹನ ಸವಾರರ ನಿಯಮ ಉಲ್ಲಂಘನೆ ಸೆರೆ ಹಿಡಿಯಲು ಸಜ್ಜಾಗಿವೆ.
ಪಾರ್ಕಿಂಗ್ ಹಾವಳಿಗೂ ಬ್ರೇಕ್:
ಪಟ್ಟಣದಲ್ಲಿ ಪ್ರಮುಖವಾಗಿ ಪಾರ್ಕಿಂಗ್ ಸಮಸ್ಯೆ ಯಥೇಚ್ಚವಾಗಿ ಕಾಡುತ್ತಿದೆ. ತಾಲ್ಲೂಕು ಕಚೇರಿ ರಸ್ತೆ, ಡಾ.ಬಿ.ಆರ್ ಅಂಬೇಡ್ಕರ್ ವೃತ್ತ, ಡಿ.ಕ್ರಾಸ್ ಸೇರಿದಂತೆ ಹಲವೆಡೆ ಕಿರಿದಾದ ರಸ್ತೆಯ ಅಕ್ಕಪಕ್ಕದಲ್ಲಿ ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡಲಾಗುತ್ತಿದೆ. ಈಗಾಗಲೇ ಪ್ರಮುಖ ರಸ್ತೆಗಳಲ್ಲಿ ದಿನಗಳನ್ನು ನಿಗದಿಪಡಿಸಿ, ಏಕಮುಖ ಪಾರ್ಕಿಂಗ್ ಜಾರಿಯಲ್ಲಿದ್ದರೂ ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಇದಕ್ಕೂ ಸಹ ಮುಂದಿನ ದಿನಗಳಲ್ಲಿ ಕಡಿವಾಣ ಬೀಳಲಿದೆ
ಪ್ರತಿ ದಿನ ಸಂಚಾರಿ ಮಾರ್ಗಸೂಚಿ ಬಗ್ಗೆ ರಸ್ತೆಗಿಳಿದು ಮಾಹಿತಿ ನೀಡಿರುವ ನಗರ ಪೊಲೀಸ್ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ಅಮರೇಶ್ ಗೌಡ.ಎ, ನಗರದಲ್ಲಿ ಏಕಮುಖ ಸಂಚಾರ ನಿಯಮ ಜಾರಿಯಲ್ಲಿರುವ ಎಲ್ಲಾ ರಸ್ತೆಗಳಲ್ಲಿ ಸಂಚಾರಿ ನಿಯಮಗಳ ಫಲಕಗಳನ್ನು ಅಳವಡಿಸಲಾಗಿದೆ. ಅಲ್ಲದೆ ತ್ರಿಬಲ್ ರೈಡಿಂಗ್, ಫೋನ್ ನಲ್ಲಿ ಮಾತನಾಡುತ್ತ ಬರುವ ಸವಾರರು, ಡಿಎಲ್ ಇಲ್ಲದ ಬೈಕ್ ಸವಾರರನ್ನು ತಡೆದು ದಂಡ ವಿಧಿಸುವ ಬದಲಾಗಿ, ಏಕಮುಖ ಸಂಚಾರ ರಸ್ತೆಯಲ್ಲಿ ಒಂದು ಗಂಟೆಗಳ ಕಾಲ ನಿಂತು ಸವಾರರಿಗೆ ಸೂಚನೆ ನೀಡುವ ಶಿಕ್ಷೆ ವಿಧಿಸಿ, ವಿನೂತನವಾಗಿ ಏಕಮುಖ ಸಂಚಾರದ ಜಾಗೃತಿ ಮೂಡಿಸಲಾಗುತ್ತಿದೆ ಎಂದಿದ್ದಾರೆ.
ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ರಸ್ತೆ ಸಂಚಾರ ಹಾಗೂ ಪಾರ್ಕಿಂಗ್ ಕುರಿತು ನಗರದಲ್ಲಿ ಎಲ್ಲ ಕಡೆ ಫಲಕಗಳನ್ನು ಅಳವಡಿಸಲಾಗಿದೆ. ಪ್ರಮುಖ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಸವಾರರಿಗೆ ಏಕಮುಖ ಸಂಚಾರ ರಸ್ತೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಇದನ್ನು ಮೀರುವವರಿಗೆ ದಂಡ ಹಾಕಲಾಗುವುದು. ಸಾರ್ವಜನಿಕರು ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದವರು ತಿಳಿಸಿದ್ದಾರೆ.