ರಸ್ತೆ ಕಳಪೆ ಡಾಂಬರೀಕರಣ ಆರೋಪ: BJPಗೆ ತಿರುಗೇಟು ನೀಡಿದ ಜಿ.ಪಂ. ಮಾಜಿ ಸದಸ್ಯ ಚುಂಚೇಗೌಡ

ಬೆಂಗಳೂರು: ದೊಡ್ಡಬಳ್ಳಾಪುರ: ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ವತಿಯಿಂದ 1.5 ಕೋಟಿ ವೆಚ್ಚದಲ್ಲಿ ತಾಲೂಕಿನ ಹೊನ್ನಾದೇವಿಪುರ-ಗೂಳ್ಯ ರಸ್ತೆಗೆ 1.5 ಕಿ.ಮೀ ರಸ್ತೆಗೆ ಹಾಕಲಾಗಿದ್ದ ಡಾಂಬರ್ , ಕಳಪೆಯಾಗಿದೆ ಎಂದು ಕೆಲ ಬಿಜೆಪಿ ಮುಖಂಡರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಜಿ.ಪಂ ಮಾಜಿ ಸದಸ್ಯ ಚುಂಚೇಗೌಡ ಹೇಳಿದರು. ಒಂದು ಪದರ ಡಾಂಬರ್ ಹಾಕುವುದು ಬಾಕಿ ಇದೆ, ಅಷ್ಟರಲ್ಲಿ ಈ ಆರೋಪವನ್ನು ಮಾಡಲಾಗಿದೆ. ಈ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಬಿಜೆಪಿ ಮುಖಂಡರ ಆರೋಪವನ್ನು ತಳ್ಳಿ ಹಾಕಿದರು.

ತಾಲೂಕಿನ ಹೊನ್ನಾದೇವಿಪುರ-ಗೂಳ್ಯ ರಸ್ತೆಗೆ ಡಾಂಬರು ಹಾಕಿದ 15 ದಿನಗಳಲ್ಲೇ ಗುಂಡಿಗಳು ಬಿದ್ದಿವೆ. ಈ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಎಂದು ಬಿಜೆಪಿ ಮುಖಂಡರು ಆರೋಪ ಮಾಡಿ ರಸ್ತೆಯಲ್ಲಿ ಕುಳಿತು ಧರಣಿ ನಡೆಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ಆಗಮಿಸಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, 20 ವರ್ಷಗಳಿಂದ ಈ ಗ್ರಾಮಕ್ಕೆ ರಸ್ತೆ ಇರಲಿಲ್ಲ. ರಾತ್ರಿ ಹೊತ್ತು ಓಡಾಡಲೂ ಗ್ರಾಮಸ್ಥರು ಪರದಾಡಬೇಕಾಗಿತ್ತು. ಕೊನೆಗೂ ಹೊನ್ನಾದೇವಿಪುರ ರಸ್ತೆಗೆ ಡಾಂಬರು ಭಾಗ್ಯ ಸಿಕ್ಕಿದೆ.
ಇದರಲ್ಲಿ ರಾಜಕೀಯ ಮಾಡಬಾರದು, ಗ್ರಾಮದ ಅಭಿವೃದ್ಧಿಗೆ ಪಕ್ಷ ಬೇಧ ಮರೆತು ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.

ಡಾಂಬರೀಕರಣ ಕಾಮಗಾರಿ ಕಳಪೆಯೋ ಅಥವಾ ಗುಣಮಟ್ಟದಿಂದ ಕೂಡಿದಿಯೋ ಎಂಬುದು ಸಂಬಂಧಿಸಿದ ಇಲಾಖೆಯ ಇಂಜಿನಿಯರ್‌ಗಳು ಕಾಮಗಾರಿಯನ್ನ ಪರಿಶೀಲನೆ ಮಾಡಿ ವರದಿ ಬಿಡುಗಡೆ ಮಾಡುತ್ತಾರೆ‌. ಆಗ ಈ ಕುರಿತು ಸತ್ಯ ಗೊತ್ತಾಗುತ್ತದೆ. ಈ ಕುರಿತು ಇಂಜಿನಿಯರ್ ವರದಿ ಬಂದೇ ಇಲ್ಲ, ಇನ್ನೂ ಕಾಮಗಾರಿ ಬಾಕಿ ಇದೆ. ಅಷ್ಟರಲ್ಲಿ ಈ ಆರೋಪ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಅವರು ಪ್ರಶ್ನೆ ಮಾಡಿದರು.

ವಿಧಾನಸಭೆ ಚುನಾವಣೆ ಮುನ್ನವೇ ತಾಲೂಕಿನಲ್ಲಿ 40 ಕೋಟಿ ಅನುದಾನದಲ್ಲಿ 40 ಕಿ.ಮೀ ಡಾಂಬರೀಕರಣ ಕಾಮಗಾರಿ ಆರಂಭವಾಗಿತ್ತು, ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಕಾಮಗಾರಿ ನಿಲ್ಲಿಸಲಾಗಿತ್ತು. ಈಗ ಮತ್ತೆ ಪ್ರಾರಂಭ ಮಾಡಲಾಗಿದೆ. ಎಲ್ಲಾ ಕಾಮಗಾರಿ ಅಂತಿಮ ಹಂತದಲ್ಲಿ ಇವೆ. ಕೆಲವೊಂದು ಕಡೆ ಬಿಜೆಪಿ ಮುಖಂಡರು ಡಾಂಬರೀಕರಣ‌ ಕಾಮಗಾರಿ ಬಗ್ಗೆ‌ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಈ ರೀತಿಯ ಸುಳ್ಳು ಆರೋಪಗಳನ್ನು ಮಾಡುತ್ತಿರುವ ಪುಡಾರಿಗಳನ್ನ ಹಾಲಿ ಶಾಸಕರು ದೂರವಿಡಬೇಕು. ಇಲ್ಲದಿದ್ದರೆ ಶಾಸಕರಿಗೂ ಕೆಟ್ಟ ಹೆಸರು ಬರುತ್ತದೆ ಎಂದು ಸಲಹೆ ನೀಡಿದರು.

Related posts