ತರಾತುರಿಯಲ್ಲಿ ಎಲೆಕ್ಷನ್.. ತರಾತುರಿಯಲ್ಲೇ ಟೆಂಡರ್..!

ಬೆಂಗಳೂರು: ತರಾತುರಿಯಲ್ಲಿ ಎಲೆಕ್ಷನ್ ತಯಾರಿ ನೆಡೆದಿದ್ದು, ತರಾತುರಿಯಲ್ಲೇ ಅಲ್ಪಾವದಿ  ಟೆಂಡರ್ ಕರೆಯಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ಸಂದರ್ಭದಲ್ಲಿ ನಾಯಕರ ಜೊತೆ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಡಿ.ಕೆ. ಶಿವಕುಮಾರ್ ಮಾತನಾಡಿದ ಡಿ.ಕೆ.ಶಿವಕುಮಾರ್,  ಕೊಳ್ಳೆಗಾಲದ ಮಾಜಿ ಶಾಸಕರಾದ ನಂಜುಂಡಸ್ವಾಮಿ, ಬಿಜಾಪುರದ ಮಾಜಿ ಶಾಸಕರಾದ ಮನೋಹರ್ ಐನಾಪುರ ಅವರು ಇಂದು ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಮೈಸೂರಿನ ಮಾಜಿ ಮೇಯರ್ ಹಾಗೂ ಬಿಎಸ್ ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್ ಅವರು ಕೂಡ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದು, ಈ ಮೂವರು ನಾಯಕರನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ ಎಂದರು.

ಈ ಮೂವರು ನಾಯಕರು ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಜ್ಯ ನಾಯಕತ್ವದ ಮೇಲೆ ವಿಶ್ವಾಸ ಇಟ್ಟು ಬೇಷರತ್ ಪಕ್ಷಕ್ಕೆ ಸೇರುತ್ತಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಅನ್ಯ ಪಕ್ಷಗಳ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಅವರಿಗೆ ಅನುಮತಿ ನೀಡಿದ್ದೇವೆ. ಕೆಲವು ಪ್ರಮುಖ ನಾಯಕರನ್ನು ಮಾತ್ರ ಈ ಪಕ್ಷದ ಕಚೇರಿಯಲ್ಲಿ ಸೇರಿಸಿಕೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಜನ ಕಾಂಗ್ರೆಸ್ ಪರವಾಗಿದ್ದಾರೆ ಎಂಬ ಸ್ಪಷ್ಟ ಚಿತ್ರಣ ಸಿಗುತ್ತಿದೆ. ನಮ್ಮ ಈ ಹಿಂದಿನ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಕಾಂಗ್ರೆಸ್ 136 ಸ್ಥಾನ ಗೆಲ್ಲುವ ವರದಿ ಇತ್ತು. ಈಗಿನ ವರದಿಗಳಲ್ಲಿ ಇದು 140 ರ ಗಡಿ ದಾಟಿದೆ. ಸೇವಾ ಮನೋಭಾವ, ಸಿದ್ಧಾಂತ ನಮ್ಮ ಪಕ್ಷದಲ್ಲಿ ಎದ್ದು ಕಾಣುತ್ತಿದೆ ಎಂದವರು ಹೇಳಿದರು.

ರಾಜ್ಯ ಚುನಾವಣೆಗೆ ಇನ್ನು 50 ದಿನಗಳು ಮಾತ್ರ ಇವೆ. ಗುಜರಾತ್ ಚುನಾವಣೆ ನಂತರ ಬಿಜೆಪಿಯವರು ರಾಜ್ಯದಲ್ಲಿ ಬಹಳ ತರಾತುರಿಯಲ್ಲಿ ಚುನಾವಣೆ ಮಾಡಲು ಅಧಿಕಾರಿಗಳ ಜತೆ ಸಭೆ ಮಾಡಿ ದಿನಾಂಕ ನಿಗದಿ ಮಾಡಿದ್ದರು. ಆದರೆ ಈಗ ಪ್ರತಿ ದಿನ ತರಾತುರಿಯಲ್ಲಿ ಅಲ್ಪಾವಧಿಯ ಟೆಂಡರ್ ಮೂಲಕ ಅಕ್ರಮ ಹಣ ಕ್ರೋಢೀಕರಣ ಮಾಡುತ್ತಿದ್ದಾರೆ. ಇದಕ್ಕಾಗಿ ಅವರೇ ನಿಗದಿ ಮಾಡಿದ್ದ ದಿನಾಂಕವನ್ನು ಮುಂದೂಡುತ್ತಿದ್ದಾರೆ. ಈ ವಿಚಾರವಾಗಿ ನಾವೆಲ್ಲ ನಾಯಕರು ಚರ್ಚೆ ಮಾಡಿ ಸರ್ಕಾರಕ್ಕೆ ನಮ್ಮ ನಿಲುವು ತಿಳಿಸುತ್ತೇವೆ ಎಂದವರು ಹೇಳಿದರು.

ದಿನನಿತ್ಯ ಬಿಜೆಪಿಗೆ ಆಘಾತಕಾರಿ ಸುದ್ದಿ ಬರುತ್ತಿದೆ. ರಾಷ್ಟ್ರೀಯ ನಾಯಕರು ನೆರೆ, ಕೋವಿಡ್ ಸಮಯದಲ್ಲಿ ರಾಜ್ಯಕ್ಕೆ ಬರಲಿಲ್ಲ. ಕೇವಲ ಮತ ಕೇಳಲು ಬರುತ್ತಿದ್ದಾರೆ. ಜನರ ಕಷ್ಟ, ಅಭಿವೃದ್ಧಿ ಅವರಿಗೆ ಆದ್ಯತೆಯಾಗಿಲ್ಲ. ಚುನಾವಣೆಯಲ್ಲಿ ಮತಗಳಿಸುವುದಷ್ಟೇ ಅವರ ಆದ್ಯತೆಯಾಗಿದೆ. ನಾವು ಚುನಾವಣೆಗೆ ಸದಾ ಸಿದ್ಧವಾಗಿದ್ದೇವೆ. ಚುನಾವಣಾ ಆಯೋಗ ಕೂಡಲೇ ಚುನಾವಣಾ ದಿನಾಂಕ ನಿಗದಿ ಮಾಡಿ ಬ್ರಹ್ಮಾಂಡ ಭ್ರಷ್ಟಾಚಾರ ತಡೆಯಬೇಕು. ಮುಂದಿನ ಕೆಲ ದಿನಗಳಲ್ಲಿ ನಾವು ಹಾಲಿ ಶಾಸಕರ ಪಟ್ಟಿ ಬಿಡುಗಡೆ ಮಾಡಲು ಚರ್ಚೆ ಮಾಡುತ್ತಿದ್ದೇವೆ ಎಂದ ಡಿಕೆಶಿ, ಕೇಂದ್ರದ ಗೃಹಮಂತ್ರಿ ಅಮಿತ್ ಶಾ ಅವರು ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಒಪ್ಪಿಕೊಂಡಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಬದಲಾವಣೆಯ ಪರ್ವ ರಾಜ್ಯದಲ್ಲಿ ಆರಂಭವಾಗಿದೆ. ನಮ್ಮ ನಾಯಕರ ರಾಜ್ಯ ಪ್ರವಾಸದ ಕಾರ್ಯಕ್ರಮದಲ್ಲಿ ಜನ ಪ್ರವಾಹದಂತೆ ಹರಿದು ಬರುತ್ತಿರುವುದೇ ಇದಕ್ಕೆ ಸಾಕ್ಷಿ ಎಂದರು.

Related posts