ಬೆಳಗಾವಿ: ಹಿಂದುತ್ವದ ಕೇಂದ್ರವಾದ ಬೆಳಗಾವಿ ಲೋಕಸಭೆಯ ಉಪ ಚುನಾವಣೆಯಲ್ಲಿ ಯಾವುದೇಕಾರಣಕ್ಕೂ ಮುಸ್ಲೀಂರಿಗೆ ಟಿಕೇಟ್ ಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿ ಬೇಕಾದರೆ ರಾಯಣ್ಣನ ಶಿಷ್ಯರು, ಶಂಕರಾಚಾರ್ಯರ ಶಿಷ್ಯರಿಗೆ ಅಥವಾ ಚೆನ್ನಮ್ಮಳ ಶಿಷ್ಯರಿಗೆ ಟಿಕೆಟ್ನೀ ಡುತ್ತೇವೆ. ಆದರೆ ಯಾವುದೇ ಕಾರಣಕ್ಕೂ ಮುಸ್ಲಿಂ ಸಮಾಜಕ್ಕೆ ಟಿಕೆಟ್ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಭಾರತೀಯ ಜನತಾ ಪಕ್ಷಕ್ಕೆ ಕುರುಬರ, ಒಕ್ಕಲಿಗರ, ಲಿಂಗಾಯತರ ಅಥವಾ ಬ್ರಾಹ್ಮಣರ ಸಮಾಜದ ಪ್ರಶ್ನೆ ಇಲ್ಲ. ಎಲ್ಲರೂ ಒಟ್ಟಿಗೆ ಕುಳಿತುಕೊಂಡು ಚರ್ಚೆ ಮಾಡುತ್ತೇವೆ. ಇದು ಪ್ರಜಾಪ್ರಭುತ್ವದ ವ್ಯವಸ್ಥೆ, ನಮ್ಮ ಪಕ್ಷ ಬಿಟ್ಟರೆ ಬೇರೆ ಯಾವ ಪಾರ್ಟಿಯಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆಯಿಲ್ಲ ಎಂದರು.
ಯಾರು ಜನರ ಮಧ್ಯೆ ಇರುತ್ತಾರೋ ಅವರನ್ನು ಹುಡುಕಿ ಟಿಕೆಟ್ ಕೊಡಲಾಗುತ್ತದೆ. ಅದನ್ನು ಹೈಕಮಾಂಡ ನಿರ್ಧರಿಸುತ್ತದೆ ಎಂದು ಈಶ್ವರಪ್ಪ ಹೇಳಿದರು.