ಬೆಂಗಳೂರು: ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆ (6ರಿಂದ 8ನೇ ತರಗತಿ) ಹುದ್ದೆಗಳಿಗೆ ಸಂಬಂಧಿಸಿದಂತೆ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿಗೆ ಸಚಿವ ಸಂಪುಟ ಅನುಮೋದನೆ ನೀಡುವುದರೊಂದಿಗೆ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಹೊಸ ಶಕೆ ಪ್ರಾರಂಭವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
2017ರ ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ಅಸ್ತಿತ್ವಕ್ಕೆ ಬಂದ ಪ್ರಾಥಮಿಕ ಶಾಲಾ ಶಿಕ್ಷಕ (6ರಿಂದ 8ನೇ ತರಗತಿ) ಹುದ್ದೆಗಳ ಭರ್ತಿಗಾಗಿ 2018 ಮತ್ತು 2019ರ ನೇಮಕಾತಿ ಅಧಿಸೂಚನೆಗೆ ಅಗತ್ಯ ಸಂಖ್ಯೆಯ ಅಭ್ಯರ್ಥಿಗಳ ಕೊರತೆಯಿಂದ ಹೆಚ್ಚಿನ ಸ್ಥಾನಗಳು ಖಾಲಿ ಬಿದ್ದಿದ್ದವು. ಶೈಕ್ಷಣಿಕ ಸುಧಾರಣೆಗೆ, ಶಿಕ್ಷಕ ಸಂಪನ್ಮೂಲದಲ್ಲಿ ವೈವಿಧ್ಯತೆಯ ಅಗತ್ಯವನ್ನು ಮನಗಂಡು ವೃಂದ ನಿಯಮಗಳಿಗೆ ಕೆಲ ತಿದ್ದುಪಡಿಯನ್ನು ಶಿಕ್ಷಣ ಇಲಾಖೆ ಪ್ರಸ್ತಾಪಿಸಿದ್ದು, ಈ ತಿದ್ದುಪಡಿಗೆ ಸಂಪುಟ ಇಂದು ಅನುಮೋದನೆ ನೀಡಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವೃಂದ ನಿಯಮಗಳಿಗೆ ಕೆಲವು ತಿದ್ದುಪಡಿ ಅಗತ್ಯವಾಗಿತ್ತು. ವಿಜ್ಞಾನ ಶಿಕ್ಷಕ ಹುದ್ದೆಗಳಲ್ಲಿ ಇಂಜಜಿನಿಯರಿಂಗ್ ಪದವೀಧರರೂ ಸೇರಿದಂತೆ ವಿವಿಧ ಪದವೀಧರರಿಗೆ ಅವಕಾಶ ಕಲ್ಪಿಸಬೇಕೆಂಬ ಪರಿಣಿತರ ಸಮಿತಿ ಅಭಿಪ್ರಾಯದಂತೆ ಈ ತಿದ್ದುಪಡಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.