ನಕಲಿ ಆಧಾರ್ ಕಾರ್ಡ್ ಕೇಸ್; ಸಂಫೂರ್ಣ ಜಾಲ ಬೇಧಿಸಲು ಉನ್ನತ ಮಟ್ಟದ ತನಿಖೆ ಅಗತ್ಯ

ಬೆಂಗಳೂರು: ಸಚಿವ ಭೈರತಿ ಸುರೇಶ್ ಆಪ್ತರ ನಕಲಿ ಆಧಾರ್ ಕಾರ್ಡ್ ಪ್ರಕರಣ ಅತ್ಯಂತ ಗಂಭೀರವಾಗಿದ್ದು, ಇದರ ಹಿಂದಿನ ಜಾಲವನ್ನು ಭೇದಿಸಿ ಪೂರ್ಣ ಜಾಲವನ್ನು ಬಂಧಿಸಲು ಸೂಚಿಸಬೇಕು ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಎಸ್ ರೆಡ್ಡಿ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾಜಿ ಸಚಿವ ಸುರೇಶ್ ಕುಮಾರ್ ಜೊತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿವೇಕ್ ರೆಡ್ಡಿ, ಚುನಾವಣಾ ಆಯೋಗವು ಇಂಥ ಮತದಾರರ ನಕಲಿ ಗುರುತುಚೀಟಿ ಕುರಿತಂತೆ ತನಿಖೆ ನಡೆಸಬೇಕಿದೆ ಎಂದು ಪ್ರತಿಪಾದಿಸಿದರು.

ಭಾರತದಲ್ಲಿ ಪೌರತ್ವ ಗುರುತುಚೀಟಿ ಇಲ್ಲ; ಅದಕ್ಕೆ ಹತ್ತಿರದ ಹೋಲಿಕೆಯ ಕಾರ್ಡ್ ಆಧಾರ್ ಕಾರ್ಡ್. ಇದರ ಮೂಲಕ ಹಲವಾರು ಸೌಲಭ್ಯ ಪಡೆಯಬಹುದು ಎಂದರು. ಬಾಂಗ್ಲಾದೇಶದಿಂದ ಬಂದ ನಿವಾಸಿಗಳು ಅತ್ಯಂತ ಸುಲಭವಾಗಿ ಇಂಥ ನಕಲಿ ಗುರುತಿನ ಚೀಟಿ ಪಡೆಯುವಂತಾಗಿದೆ ಎಂದು ವಿವೇಕ್ ರೆಡ್ಡಿ ಆಕ್ಷೇಪಿಸಿದರು.

ಭಾರತೀಯ ನಿವಾಸಿಗಳು ಕೆಲವು ಸಂದರ್ಭಗಳಲ್ಲಿ ಕೋರ್ಟಿಗೆ ಹೋಗಿ, ಪುರಾವೆ ನೀಡಿ ಅತ್ಯಂತ ಕಷ್ಟದಿಂದ ಆಧಾರ್ ಕಾರ್ಡ್ ಮಾಡಿಸುತ್ತಾರೆ. ಆದರೆ, ಇಲ್ಲಿ ಬೇರೆ ದೇಶದವರು ಸಲೀಸಾಗಿ ನಕಲಿ ಆಧಾರ್ ಕಾರ್ಡ್ ಮಾಡಿಸುತ್ತಿದ್ದಾರೆ. ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ; ಇದನ್ನು ಮುಚ್ಚಿಹಾಕಲು ಮುಂದಾಗಿದ್ದಾರೆ ಎಂದು ಅವರು ಟೀಕಿಸಿದರು..

Related posts