ಬೆಂಗಳೂರು: ಅತ್ತಿಬೆಲೆ ಪಟಾಕಿ ದುರಂತದ ಬಳಿಕ ಎಚ್ಛೆತ್ತುಕೊಂಡಿರುವ ರಾಜ್ಯ ಸರ್ಕಾರ ರಾಜ್ಯದಲ್ಲಿ ಪಟಾಕಿ ನಿಷೇಧ ಜಾರಿ ಬಗ್ಗೆ ಚಿಂತನೆ ನಡೆಸುತ್ತಿದೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಗೃಹ ಸಚಿವ ಜಿ.ಪರಮೇಶ್ವರ್, ಮೊದಲ ಬಾರಿಗೆ ಬೆಂಗಳೂರಿನಲ್ಲಿ ಪಟಾಕಿ ನಿಷೇಧ ಪ್ರಾಯೋಗಿಕ ಜಾರಿಗೊಳಿಸುವ ಸುಳಿವು ನೀಡಿದ್ದಾರೆ.
ಅತ್ತಿಬೆಲೆ ಪಟಾಕಿ ದುರಂತ ಸ್ಥಳಕ್ಕೆ ಬುಧವಾರ ಭೇಟಿ ಪರಿಶೀಲನೆ ನಡೆಸಿದ ಜಿ.ಪರಮೇಶ್ವರ್, ಮೊದಲ ಬಾರಿಗೆ ಬೆಂಗಳೂರಿನಲ್ಲಿ ಪಟಾಕಿ ನಿಷೇಧ ಪ್ರಾಯೋಗಿಕ ಜಾರಿಗೊಳಿಸಿ ಯಶಸ್ವಿಯಾದರೆ ಇಡೀ ರಾಜ್ಯಕ್ಕೆ ವಿಸ್ತರಿಸಲಾಗುವುದು ಎಂದು ಹೇಳಿದರು.
ದೆಹಲಿಯಲ್ಲಿ ಈಗಾಗಲೇ ಪಟಾಕಿ ನಿಷೇಧಿಸಲಾಗಿದೆ. ರಾಜ್ಯದಲ್ಲೂ ಯಾವುದೇ ಪಕ್ಷದ ಕಾರ್ಯಕ್ರಮಗಳಲ್ಲಿ ಪಟಾಕಿ ಬಳಸುವುದನ್ನು ನಿಷೇಧಿಸಲಾಗಿದೆ. ಹಬ್ಬಗಳ ಸಂದರ್ಭಗಳಲ್ಲೂ ದುರಂತಗಳಿಂದ ಜೀವಗಳು ಬಲಿಯಾಗಬಾರದೆಂಬುದು ಸರ್ಕಾರದ ಉದ್ದೇಶವಾಗಿದೆ ಎಂದವರು ತಿಳಿಸಿದ್ದಾರೆ.
ದೀಪಾವಳಿ ಸಮೀಪಿಸುತ್ತಿದ್ದು, ಅನಾಹುತ ತಡೆಗಟ್ಟಲು ಪಟಾಕಿ ನಿಷೇಧಕ್ಕೆ ಸಾಧಕ ಬಾಧಕ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.