ಕಾಂಗ್ರೆಸ್ ಹಾದಿ ಹಿಡಿದ ‘ಪಂಚಮಸಾಲಿ ಹೋರಾಟ’.. ಮೀಸಲಾತಿಗಾಗಿ ಕಿವಿ ಮೇಲೆ ಹೂ ಮುಡಿದು ಸತ್ಯಾಗ್ರಹ..

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಸಿಡಿದೆದ್ದಿರುವ ಪ್ರಭಾವಿ ಪಂಚಮಸಾಲಿ ಲಿಂಗಾಯತ ಸಮುದಾಯದ ಹೋರಾಟಗಾರರು ಇದೀಗ ಕಾಂಗ್ರೆಸ್ ಹಾದಿಯನ್ನು ಹಿಡಿದಂತಿದೆ. ಕೆಲವು ದಿನಗಳ ಹಿಂದೆ ರಾಜ್ಯ ಸರ್ಕಾರ ಬಜೆಟ್ ಮಂಡಿಸಿದ ಸಂದರ್ಭದಲ್ಲಿ ಕಿವಿ ಮೇಲೆ ಹೂ ಇಟ್ಟುಕೊಂಡು ಕಾಂಗ್ರೆಸ್ ನಾಯಕರು ಗಮನಸೆಳೆದಿದ್ದರು. ಅದೇ ರೀತಿಯಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟಗಾರರು ಗುರುವಾರ ಕಿವಿಗೆ ಹೂ ಇಟ್ಟುಕೊಂಡು ನಡೆಸಿದ ಸತ್ಯಾಗ್ರಹ ಅಚ್ಚರಿ ಹಾಗೂ ಕುತೂಹಲಕ್ಕೆ ಕಾರಣವಾಯಿತು.

ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸಬೇಕೆಂದು ಒತ್ತಾಯಿಸಿ ಕಳೆದೆರಡು ವರ್ಷಗಳಿಂದ ಸರಣಿ ಹೋರಾಟ ನಡೆಸುತ್ತಿರುವ ಸಮುದಾಯದ ಮಂದಿ ಇದೀಗ ಉಗ್ರ ಹೋರಾಟದ ಹಾದಿಹಿಡಿದಿದ್ದಾರೆ. ಇದೀಗ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಿರಂತರ ಸತ್ಯಾಗ್ರಹ ನಡೆಸುತ್ತಿದ್ದು ಈ ಸತ್ಯಾಗ್ರಹ 48ನೇ ದಿನವೂ ಮುಂದುವರಿಯಿತು. ವಿವಿಧ ಜಿಲ್ಲೆಗಳ ಹೋರಾಟಗಾರರು ಈ ಸತ್ಯಾಗ್ರಹದಲ್ಲಿ ಸ್ವಾಮೀಜಿಗೆ ಸಾಥ್ ನೀಡಿದರು. ಇದೇ ಸತ್ಯಾಗ್ರಹದಲ್ಲಿ ಹೋರಾಟಗಾರರು ಕಿವಿ ಮೇಕೆ ಹೂ ಇಟ್ಟುಕೊಂಡು ನಡೆಸಿದ ವೈಖರಿ ಗಮನಸೆಳೆಯಿತು.

‘ಕಿವಿಗೆ ಸಿಎಂ ಬೊಮ್ಮಾಯಿಯವರು ಈ ರೀತಿ ಹೂವು ಇಟ್ಟರೆ, ನಾವು ಚುನಾವಣೆಯಲ್ಲಿ ವೋಟ್‌ಗೆ ಹೂವು ಇಡುತ್ತೇವೆ’ ಎಂದು ಹೋರಾಟಗಾರರು ಘೋಷಣೆ ಕೂಗಿದರು.

ಇದೇ ವೇಳೆ ಮಲೆನಾಡುಭಾಗದ ಪಂಚಮಸಾಲಿ ಸಮುದಾಯದವರು ಮರವಣಿಗೆಯಲ್ಲಿ ಧಾವಿಸಿ ಸತ್ಯಾಗ್ರಹದಲ್ಲಿ ಭಾಗಿಯಾದರು. ಮಾರ್ಚ್ 2 ಗುರುವಾರದಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುವ ಸತ್ಯಾಗ್ರಹಕ್ಕೆ ಬೆಂಬಲ ಘೋಷಿಸಿದರು. ‘ತಾಯಿ ಮೇಲೆ ಆಣೆ’ ಮಾಡಿ ಪಂಚಮಸಾಲಿ ಸಮಾಜಕ್ಕೆ ಮೋಸ ಮಾಡಿದ್ದನ್ನು ಖಂಟಿಸಿ, ಖಂಡಿಸಿ ಕಿವಿಗೆ ಹೂವು ಇಟ್ಟುಕೊಂಡು ಭಾಗವಹಿಸಿದ ಶಿವಮೊಗ್ಗ ಜಿಲ್ಲಾ ಪಂಚಮಸಾಲಿ ಮಲೆಗೌಡರು, ವಿಜಯನಗರ ಜಿಲ್ಲಾ ಹರಪನಹಳ್ಳಿ ಹಾಗೂ ಹೂವಿನ ಹಡಗಲಿ ತಾಲೂಕಿನ ಸ್ವಯಂಸೇವಕರು ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿದರು.

 ಶ್ರೀ ಬಸವ ಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಪ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಪಂಚಮಸಾಲಿ ಮೀಸಲಾತಿ ಹೋರಾಟದ 48 ನೇ ದಿನದ ಧರಣಿ ಸತ್ಯಾಗ್ರಹದಲ್ಲಿ ಕಿವಿಗೆ ಹೂವನ್ನು ಮುಡಿದು ಭಾಗವಹಿಸಿದ ವಿವಿಧ ಜಿಲ್ಲೆಗಳ ಪಂಚಮಸಾಲಿ ಹೋರಾಟ ಸಮಿತಿ ಸದಸ್ಯರು, ಮಾರ್ಚ್ 4ರ ಹೆದ್ದಾರಿ ಬಂದ್ ನಡೆಸಿ ಮೀಸಲಾತಿ ಹೋರಾಟವನ್ನು ಯಶಸ್ವಿಗೊಳಿಸುವುದಾಗಿ ಸಾರಿದರು. 

ಮುದ್ದೆಬಿಹಾಳದ ಮಾಜಿ ಶಾಸಕ ಅಪ್ಪಾಜಿ ನಾಡಗೌಡ, ಮಸ್ಕಿಯ ಮಾಜಿ ಶಾಸಕ ಪ್ರತಾಪ ಗೌಡ, ಶಿವಮೊಗ್ಗ ಜಿಲ್ಲೆಯ ಸಮಿತಿ ಅಧ್ಯಕ್ಷ ಶಿವಕುಮಾರ್, ಗೌರವ ಅಧ್ಯಕ್ಷ ಮಹೇಶ್ವರಪ್ಪ , ಪ್ರಧಾನ ಕಾರ್ಯದರ್ಶಿ ಗಂಗಾಧರಪ್ಪ , ಜಿಲ್ಲಾ ಮೀಸಲಾತಿ ಅಧ್ಯಕ್ಷ ಡಾ.ಮಾಲತೆಶ್ , ಶಿಕಾರಿಪುರ ಘಟಕದ ಅಧ್ಯಕ್ಷ ರುದ್ರಗೌಡ್, ಭದ್ರಾವತಿ ಘಟಕದ ಅಧ್ಯಕ್ಷ ಸತೀಶ್, ಮಲ್ಲೇಶಪ್ಪ , ಸೊರಬದ ಬಾಸುರು ಚಂದ್ರೆಗೌಡ, ಶಿವಪ್ಪ ವಕೀಲ, ಹರಪನಹಳ್ಳಿ ತಾಲೂಕು ಅಧ್ಯಕ್ಷ ಆಡವಿಹಲ್ಳಿ ಬಸವರಾಜ ಪೂಜಾರ, ನಿಜಲಿಂಗಪ್ಪ ತೆಲಗಿ, ರೆವಪ್ಪ ತೆಲಗಿ, ಈಸಪ್ಪ ತೆಲಗಿ, ರಾಜೆಂದ್ರಗೌಡ, ನಿಜಲಿಂಗಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಉಮಾ ಶಂಕರ್, ಸುಮ, ವಿಜಯಾ ದಿವಾಕರ್ ಮೊದಲಾದ ಪ್ರಮುಖರು ಭಾಗವಹಿಸಿದ್ದರು.

ಭಜನೆ ಸಂಘದ ಪ್ರಮುಖರಾದ ಕಾಲಪ್ಪ, ರಾಜು ಪೂಜಾರ, ಬೊರವೆಲ್ ಶಂಬಣ್ಣ, ಕಂಚಿಕೆರಿ ಸಿದ್ದೇಶ್, ಜಂಬಗಿ ಕೊಟ್ರೇಶಿ ಮೊದಲಾದವರು ಭಾಗವಹಿಸಿದರು. ರಾಷ್ಟ್ರೀಯ ಪಂಚಸೇನಾ ಅಧ್ಯಕ್ಷ ಡಾ.ಬಿ.ಎಸ್.ಪಾಟೀಲ್ ನಾಗರಳ್ ಹುಲಿ, ಪುಟ್ಟರಾಜ್ ಹಳ್ಳದ ಕಾಂತೇಶ್ ತುಂಬಗಿ, ಮಲ್ಲನಗೌಡರು, ಶಿವಪುತ್ರಪ್ಪ ಮಲ್ಲೆವಾಡ, ಅಮರೇಶ ಅವುಟೀ ಮೊದಲಾದವರು ಭಾಗಿಯಾಗಿ ಹೋರಾಟಗಾರರಲ್ಲಿ ಉತ್ಸಾಹ ತುಂಬಿದರು.

Related posts