ಮಂಗಳೂರು: ನಾಡಿನೆಲ್ಲೆಡೆ ಶುಭ ಶುಕ್ರವಾರ (ಗುಡ್ ಪ್ರೈಡೇ) ಆಚರಣೆ ಗಮನಸೆಳೆಯಿತು. ಜಗತ್ತಿಗೆ ಶಾಂತಿ-ಸಹಬಾಳ್ವೆಯ ಬದುಕಿನ ಮಾರ್ಗವನ್ನು ತೋರಿಸಿಕೊಟ್ಟಿರುವ ಭಾಗಾವಾನ್ ಎಸು ಕ್ರಿಸ್ತನ ಪ್ರಾರ್ಥನಾ ಕಲಾಪಗಳಲ್ಲಿ ಕೋಟ್ಯಂತರ ಜನರು ಭಾಗಿಯಾದರು.
ಇತ್ತ ದಕ್ಷಿಣಕನ್ನಡ ಜಿಲ್ಲೆ ಬಂಟ್ವಾಳ ಸಮೀಪದ ಬೊರಿಮಾರ್‌ನ ಸಂತ ಜೋಸೆಫ್ ಚರ್ಚ್‌ನಲ್ಲೂ ಪವಿತ್ರ ಗುಡ್ ಫ್ರೈಡೇ ಪ್ರಯುಕ್ತ ಭಕ್ತಿಪ್ರಧಾನ ವಿಶೇಷ ಕಾರ್ಯಕ್ರಮಗಳು ನೆರವೇರಿದವು. ಪ್ರಭು ಯೇಸು ಕ್ರಿಸ್ತರ ಪಾರ್ಥಿವ ಶರೀರದ ಮೆರವಣಿಗೆ ಹಾಗೂ ಜಗತ್ತಿನ ಶಾಂತಿಗಾಗಿ ಮೊಂಬತ್ತಿ ಹಿಡಿದು ಮೌನ ಮೆರವಣಿಗೆ ನಡೆಸಲಾಯಿತು. ಭಕ್ತರು ಮೊಂಬತ್ತಿಗಳನ್ನು ಹಿಡಿದು ಶಾಂತಿಯ ಸಂಕೇತವಾಗಿ ಮೆರವಣಿಗೆಯಲ್ಲಿ ಸಾಗಿ, ಪ್ರಭು ಯೇಸು ಕ್ರಿಸ್ತರ ತ್ಯಾಗ, ಪ್ರೀತಿ ಮತ್ತು ಮಾನವೀಯ ಮೌಲ್ಯಗಳನ್ನು ಸಾರಿದರು.
ಈ ವೇಳೆ ಚರ್ಚ್ ಪರಿಸರದಲ್ಲಿ ನಡೆದ ಕೈಂಕರ್ಯದಲ್ಲಿ ವಿವಿಧ ಧರ್ಮೀಯರು ಭಾಗವಹಿಸಿ ಭಗವಂತನ ಕೃಪೆಗೆ ಪಾತ್ರರಾದರು.
ಏನಿದು ಗುಡ್ ಫ್ರೈಡೇ ಆಚರಣೆ?
ಯೇಸುವಿನ ಸ್ಮರಣೆ ಮೂಲಕ ಶುಭ ಶುಕ್ರವಾರ ಆಚರಿಸಲಾಗುತ್ತದೆ. ವಿವಿಧ ಚರ್ಚ್ ಗಳಲ್ಲಿ ವಿಶೇಷ ಪ್ರಾರ್ಥನೆ, ಶಿಲುಬೆಯ ಆರಾಧನೆಯೊಂದಿಗೆ ಆಚರಿಸಲಾಗುತ್ತದೆ. ವಿಶೇಷ ಪ್ರಾರ್ಥನೆ, ಶಿಲುಬೆಯ ಹಾದಿ, ಶಿಲುಬೆಯ ಆರಾಧನೆ ಮತ್ತಿತರ ಕಾರ್ಯಕ್ರಮಗಳು ಗಮನಸೆಳೆಯುತ್ತದೆ. ಯೇಸು ಕ್ರಿಸ್ತರಿಗೆ ಶಿಲುಬೆಯ ಮರಣ ಶಿಕ್ಷೆ ವಿಧಿಸಿದ ಸನ್ನಿವೇಶದಿಂದ ಆರಂಭಗೊಂಡು ಅವರು ಶಿಲುಬೆಯಲ್ಲಿ ಮರಣವನ್ನಪ್ಪಿ ಅವರ ಶರೀರವನ್ನು ಸಮಾಧಿ ಮಾಡುವಲ್ಲಿ ವರೆಗಿನ ಪ್ರಮುಖ ಘಟನಾವಳಿಗೆ ಸಂಬಂಧಿಸಿದ ‘ಶಿಲುಬೆಯ ಹಾದಿ’ (ವೇ ಆಫ್ ದಿ ಕ್ರಾಸ್) ಪ್ರಮುಖ ಕೈಂಕರ್ಯವನ್ನು ಶ್ರದ್ದಾ ಭಕ್ತಿಯಿಂದ ಆಚರಿಸಲಾಗುತ್ತದೆ.
ಈ ಆಚರಣೆಯು ನಾಡಿನ ವಿವಿಧ ಚರ್ಚುಗಳಲ್ಲಿ ಶ್ರದ್ದಾ ಭಕ್ತಿಯಿಂದ ನೆರವೇರಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ಈ ಕಾರ್ಯಕ್ರಮಗಳಲ್ಲಿ ಭಾಗಿಯಾದರು.

