ಗ್ಯಾರೆಂಟಿ ಹೆಸರಲ್ಲಿ 11,000 ಕೋಟಿ ಹಣ ಬೇರೆಡೆ ವರ್ಗಾಯಿಸಿ ಸರ್ಕಾರದಿಂದ ದಲಿತರಿಗೆ ವಂಚನೆ ಆರೋಪ; ಹೋರಾಟಕ್ಕೆ ಸಜ್ಜಾದ ಬಿಜೆಪಿ

ಬೆಂಗಳೂರು: ಗ್ಯಾರೆಂಟಿ ಹೆಸರಲ್ಲಿ 11 ಸಾವಿರ ಕೋಟಿ ರೂಪಾಯಿಗಳನ್ನು ಬೇರೆಡೆ ವರ್ಗಾಯಿಸಿ ಸರ್ಕಾರ ದಲಿತರಿಗೆ ವಂಚನೆ ಮಾಡಿದೆ ಎಂದು ಆರೋಪಿಸಿರುವ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್, ಇದರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರಕಾರವು 5 ಗ್ಯಾರಂಟಿ ಯೋಜನೆಗಳಿಗೆ ದಲಿತರ ಏಳಿಗೆ, ಕಲ್ಯಾಣಕ್ಕೋಸ್ಕರ ಮೀಸಲಿಟ್ಟ ಹಣವನ್ನು ಒಂದೆಡೆ ನೀಡುತ್ತಿದೆ. ಅಷ್ಟೂ ಸಾಕಾಗದೆ ಬೆಲೆ ಏರಿಕೆಯ ಬರೆಯನ್ನೂ ಈ ಸರಕಾರ ಹಾಕುತ್ತಿದೆ ಎಂದು ಟೀಕಿಸಿದರು.  ವಿದ್ಯುತ್ ಬಿಲ್, ಬಸ್ ಪ್ರಯಾಣ ದರ, ನೀರಿನ ದರ, ಮದ್ಯದ ದರ, ವಿವಿಧ ತರಕಾರಿ ಬೆಲೆಯನ್ನೂ ಏರಿಸಿದೆ. ಶಾಲಾ ಕಾಲೇಜುಗಳ ಕ್ಯಾಬ್ ತೆರಿಗೆ, ಮೋಟಾರು ತೆರಿಗೆ ಹೆಚ್ಚಿಸಿದೆ. ಸರಕು ಸಾಗಣೆ ದರ ಏರಿಸಿದೆ. ಕಟ್ಟಡ ನಿರ್ಮಾಣಕ್ಕೆ ಬಳಸುವ ಜಲ್ಲಿ, ಮರಳು ಬೆಲೆ ಹೆಚ್ಚು ಮಾಡಿದೆ. ಎತ್ತರದ ಕಟ್ಟಡಗಳ ಶುಲ್ಕವನ್ನು ಹೆಚ್ಚಿಗೆ ಮಾಡಿದೆ ಎಂದು ಟೀಕಿಸಿದರು.

ಆಸ್ತಿ ನೋಂದಣಿ ಶುಲ್ಕ ಹೆಚ್ಚಳ ಮಾಡಿದೆ. ಹೋಟೆಲ್‍ನಲ್ಲಿ ತಿಂಡಿ, ಚಹಾ, ಕಾಫಿ ದರ ಏರಿಕೆ ಮಾಡಿದೆ. ಆಹಾರದ ಬೆಲೆ ಏರಿಕೆ ಮಾಡಿದೆ. ನಂದಿನಿ ಹಾಲು, ಮಜ್ಜಿಗೆ, ತುಪ್ಪ ಸೇರಿ ಎಲ್ಲ ಉತ್ಪನ್ನಗಳ ದರ ಏರಿಕೆ ಮಾಡಿದೆ. ಹೀಗೆ ಸುಮಾರು 25 ರೀತಿಯ ಬೆಲೆ ಏರಿಕೆಯನ್ನು ಮಾಡಿದೆ ಎಂದು ಖಂಡಿಸಿದರು. ಒಂದು ಕಡೆ ಕೊಟ್ಟು ಅನೇಕ ಕಡೆ ಕಿತ್ತುಕೊಳ್ಳುವ ಸರಕಾರ ಬಡವರಿಗೆ ಸಹಾಯ ಮಾಡುವುದಾಗಿ ಹೇಳಿಕೊಂಡು 5 ಗ್ಯಾರಂಟಿ ಯೋಜನೆಗಳಿಗಾಗಿ 25 ರೀತಿಯಲ್ಲಿ ಬೆಲೆ ಏರಿಕೆ ಮಾಡಿದೆ ಎಂದು ರವಿಕುಮಾರ್ ಅವರು ನುಡಿದರು. ಈ ಸರಕಾರ ಒಂದು ಕಡೆ ಕೊಡುತ್ತದೆ. ಅನೇಕ ಕಡೆ ಕಿತ್ತುಕೊಳ್ಳುತ್ತಿದೆ ಎಂದು ದೂರಿದರು. ಇದು ಬಡವರ ಪರ, ಹಿಂದುಳಿದವರ ಪರ, ದಲಿತರ ಪರವಾಗಿ ಇರುವ ಸರಕಾರ ಅಲ್ಲ. ಇದು ಹಿಂದುಳಿದ ವರ್ಗಗಳ, ದಲಿತರ, ಎಸ್‍ಸಿ, ಎಸ್‍ಟಿ ಸಮುದಾಯದ ವಿರೋಧಿ ಸರಕಾರ ಎಂದು ಅವರು ಆರೋಪಿಸಿದರು.

ಬೆಲೆ ಏರಿಕೆಯಿಂದ ಸುಮಾರು 50 ಸಾವಿರ ಕೋಟಿ ರೂಪಾಯಿ ಸಂಗ್ರಹಿಸುವ ಬೃಹತ್ ಯೋಜನೆಯನ್ನು ಸಿದ್ದರಾಮಯ್ಯನವರು ಮಾಡಿದ್ದಾರೆ ಎಂದು ವಿವರಿಸಿದರು. ಇದು ಕೊಡುವ ಸರಕಾರ ಅಲ್ಲ; ಕಿತ್ತುಕೊಳ್ಳುವ ಸರಕಾರ ಎಂದು ಆಕ್ಷೇಪಿಸಿದರು.  ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರ ತಿಳಿಸಿದಾಗ ಕಾಂಗ್ರೆಸ್ ಮುಖಂಡರು ಮೊಸಳೆಕಣ್ಣೀರು ಸುರಿಸಿ ಕೇಂದ್ರ ಸರಕಾರವನ್ನು ಬೈದರು. ಪುಂಖಾನುಪುಂಖವಾಗಿ ಕೇಂದ್ರ ಸರಕಾರವನ್ನು ಬೈದರು. ಕೇಂದ್ರದ್ದು ಕರ್ನಾಟಕ ರಾಜ್ಯ ವಿರೋಧಿ ಸರಕಾರ ಎಂದರು. ಈಗ ನಮ್ಮ ಕೇಂದ್ರ ಸರಕಾರವು ಅಮೆರಿಕ, ಬೇರೆ ದೇಶಗಳಿಗೆ ಅಕ್ಕಿ ರಫ್ತನ್ನು ನಿಲ್ಲಿಸಿದೆ. ವಿಪರೀತ ಮಳೆ, ಪ್ರವಾಹ, ಅನೇಕ ರಾಜ್ಯಗಳಲ್ಲಿ ಕಡಿಮೆ ಮಳೆ ಪರಿಣಾಮವಾಗಿ ಬೆಲೆ ಹೆಚ್ಚಳ ಆಗಬಹುದೆಂಬ ದೂರದೃಷ್ಟಿ ಇಟ್ಟುಕೊಂಡು 400 ಮಿಲಿಯನ್ ಟನ್ ಅಕ್ಕಿ ರಫ್ತನ್ನು ನಿಲ್ಲಿಸಿದೆ. ಇದರಿಂದ ದೇಶದ ಬಡವರು, ಹಿಂದುಳಿದ ವರ್ಗಗಳಿಗೆ, ದಲಿತ ವರ್ಗದವರಿಗೆ ಸಹಾಯ ಆಗಲಿದೆ ಎಂದು ವಿವರಿಸಿದರು. ಅಕ್ಕಿ ರಫ್ತು ನಿಲ್ಲಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ರಾಜ್ಯ ಬಿಜೆಪಿ ಅಭಿನಂದಿಸುತ್ತದೆ ಎಂದು ಹೇಳಿದರು.

ಯಾರು ದಲಿತರ ಪರ, ಯಾರು ಹಿಂದುಳಿದ ವರ್ಗಗಳ ಪರ ಎಂದು ಸಿದ್ದರಾಮಯ್ಯನವರು ಈಗ ಹೇಳಲಿ ಎಂದು ಸವಾಲೆಸೆದರು. ಯಾಕೆ ಸಿದ್ದರಾಮಯ್ಯನವರು ಮಾತನಾಡುತ್ತಿಲ್ಲ? ಸ್ವಾಗತ ಮಾಡುತ್ತಿಲ್ಲ ಎಂದು ಕೇಳಿದ ಅವರು, ನಿಮಗೆ ಬೈಯೋಕೆ ಮಾತ್ರ ಬರುವುದೇ? ಒಳ್ಳೆಯದಾಗಿದ್ದನ್ನು ಸ್ವಾಗತಿಸುವ ಬುದ್ಧಿ ಇಲ್ಲವೇ ಎಂದು ಪ್ರಶ್ನಿಸಿದರು. ಗ್ಯಾರಂಟಿ ಯೋಜನೆಗೆ ನಾವು ಪರ ಇದ್ದೇವೆ. ಆದರೆ, ಹಾಲಿನಿಂದ ಆಲ್ಕೋಹಾಲಿನ ವರೆಗೆ 25 ರೀತಿಯ ಬೆಲೆ ಏರಿಕೆಯಿಂದ ಎಲ್ಲರಿಗೂ ತೊಂದರೆ ಆಗಿದೆ. ಇದು ಎಲ್ಲರಿಗೂ ತೊಂದರೆ ಕೊಡುವ ಸರಕಾರ ಎಂದು ನುಡಿದರು. ಮಹದೇವಪ್ಪ ಅವರು ದಲಿತರ ಪರವೇ ದಲಿತ ವಿರೋಧಿಯೇ ಎಂದು ಮುಕ್ತವಾಗಿ ಹೇಳಿಕೆ ಕೊಡಬೇಕು ಎಂದು ಆಗ್ರಹಿಸಿದರು.

11 ಸಾವಿರ ಕೋಟಿ ಬೇರೆಡೆಗೆ ವರ್ಗಾಯಿಸಿ ದಲಿತರನ್ನು ವಂಚಿಸಿದ ಸಿದ್ದರಾಮಯ್ಯನವರು ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು. 34,293 ಕೋಟಿ ತೆಗೆದಿಟ್ಟದ್ದು ಯಾಕೆ ಮತ್ತು ಅದನ್ನು ಬೇರೆ ಉದ್ದೇಶಕ್ಕೆ ಕೊಡುವುದು ಯಾಕೆ ಎಂದು ಅವರು ಕೇಳಿದರು. ಹಾಲು ಉತ್ಪಾದಕರು, ತುಪ್ಪ ಉತ್ಪಾದಕರಿಗೆ ದ್ರೋಹ ಮಾಡಿದ ಸರಕಾರ ಇದಾಗಿದೆ. ರಾಜ್ಯದಿಂದ ಟಿಟಿಡಿಗೆ 2022ರಲ್ಲಿ 13 ಲಕ್ಷ ಕೆಜಿ ತುಪ್ಪವನ್ನು ಮಾರಾಟ ಮಾಡಿದ್ದೆವು. ಈ ಬಾರಿ ಅದು ನಿಂತು ಹೋಗಿದೆ. ಇದರಿಂದ ರಾಜ್ಯಕ್ಕೆ ಅನ್ಯಾಯ ಆಗಿದೆ ಎಂದು ತಿಳಿಸಿದರು. ದರದ ವಿಚಾರದಲ್ಲಿ ಸರಕಾರ- ಕೆಎಂಎಫ್ ವಿಫಲವಾಗಿದೆ. ಕಾನೂನು ಸುವ್ಯವಸ್ಥೆ, ಬೆಲೆ ನಿರ್ಧಾರ, ರೈತರಿಗೆ ಸಹಾಯ ಮಾಡುವ ವಿಚಾರದಲ್ಲಿ ವೈಫಲ್ಯದ ಸರಕಾರ ಇದೆಂದು ತಿಳಿಸಿದರು. ಸರಕಾರ 11 ಸಾವಿರ ಕೋಟಿಯನ್ನು ಗ್ಯಾರಂಟಿ ಯೋಜನೆಗೆ ನೀಡುವುದನ್ನು ವಿರೋಧಿಸಿ ಎಸ್‍ಸಿ ಮೋರ್ಚಾ, ಎಸ್‍ಟಿ ಮೋರ್ಚಾ ಸೇರಿದಂತೆ ಬಿಜೆಪಿ ವತಿಯಿಂದ ಮುಂದಿನ ದಿನಗಳಲ್ಲಿ ದೊಡ್ಡ ಹೋರಾಟ ಹಮ್ಮಿಕೊಳ್ಳುವುದಾಗಿ ಅವರು ಪ್ರಕಟಿಸಿದರು.

Related posts