‘ಅಣ್ಣ ಇರೆಗ್ ಏರ್ ಇಜ್ಜಿಂಡಲ ಮಲ್ಲೆಜ್ಜಿ ಯಾನುಲ್ಲೆ, ಎಂಕ್ಲೆನಾ ಗುರುಬೆಳದಿಂಗಳು ಸಂಸ್ಥೆ ಉಂಡು.. (ನಿಮಗೆ ಯಾರೂ ಇಲ್ಲದಿದ್ದರೂ ಪರವಾಗಿಲ್ಲ, ನಮ್ಮ ಗುರುಬೆಳದಿಂಗಳು ಸಂಸ್ಥೆ ಇರುತ್ತದೆ) ಎಂಬ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ನೀಡಿದ ಭರವಸೆಯ ಮಾತು ಆಟೋ ಕುಕ್ಕರ್ ಬಾಂಬ್ ಸ್ಪೋಟದ ಸಂತ್ರಸ್ತ ಪುರುಷೋತ್ತಮ ಪೂಜಾರಿಯವರ ಪಾಲಿಗೆ ಈಡೇರಿದ ಖುಷಿ… ಇಡೀ ಕುಟುಂಬ ಸದಸ್ಯರ ಮೊಗದಲ್ಲಿ ವಿಶ್ವಾಸದ ಬೆಳಕು…
ಮಂಗಳೂರು: ಇತ್ತೀಚೆಗೆ ಆಟೋ ರಿಕ್ಷಾದಲ್ಲಿ ಕುಕ್ಕರ್ ಸ್ಫೋಟ ಘಟನೆಯಲ್ಲಿ ಗಾಯಗೊಂಡ ಆಟೋ ಚಾಲಕ ಉಜ್ಜೋಡಿಯ ಪುರುಷೋತ್ತಮ ಪೂಜಾರಿ ಬದುಕಲ್ಲಿ ಭರವಸೆಯ ಬೆಳಕು ಮೂಡಿದೆ. ಬಡಪಾಯಿ ಕುಟುಂಬಕ್ಕೆ ಆಸರೆಯಂತೆ ನಿಂತಿರುವ ಸಮಾಜಮುಖಿ ಸಂಸ್ಥೆ ‘ಗುರುಬೆಳದಿಂಗಳು’ ಇದೀಗ ಪುರುಷೋತ್ತಮ್ ಬದುಕಿಗೆ ಚೈತನ್ಯ ತುಂಬಿದೆ. ಸಮರ್ಪಕ ಸೂರಿಲ್ಲದೆ ಪರಿತಪಿಸುತ್ತಿದ್ದ ಅಸಹಾಯಕನಿಗೆ ಖ್ಯಾತ ವಕೀಲರೂ ಆದ ಪದ್ಮರಾಜ್ ಆರ್ ಸಾರಥ್ಯದ ‘ಗುರುಬೆಳದಿಂಗಳು’ ಸಂಸ್ಥೆ ಸುಸಜ್ಜಿತ ಮನೆಯನ್ನು ನಿರ್ಮಿಸಿಕೊಟ್ಟಿದೆ.
ಕೆಲ ಸಮಯದ ಹಿಂದೆ ಕುಕ್ಕರ್ ಬಾಂಬ್ ಸ್ಫೋಟದ ಸಂತ್ರಸ್ತ ಉಜ್ಜೋಡಿಯ ಪುರುಷೋತ್ತಮ ಪೂಜಾರಿಯವರು ತಮ್ಮನ್ನು ಭೇಟಿಯಾದ ‘ಗುರುಬೆಳದಿಂಗಳು ಫೌಂಡೇಶನ್’ ಅಧ್ಯಕ್ಷ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್ ತಂಡದ ಬಳಿ ತನ್ನ ನೋವಿನ ಕಥೆಯನ್ನು ಹೇಳಿಕೊಂಡಿದ್ದರು. ಬರುವ ಮೇ ತಿಂಗಳಿನಲ್ಲಿ ಮಗಳ ಮದುವೆ ನಿಗದಿಯಾಗಿದ್ದು, ಅದಕ್ಕಿಂತ ಮುನ್ನ ಮನೆ ನವೀಕರಣ ಮಾಡಬೇಕು ಎನ್ನುವುದು ಪೂಜಾರಿಯವರ ಕನಸಾಗಿತ್ತು.ಪುರುಷೋತ್ತಮ ಪೂಜಾರಿಯವರ ನೋವಿನ ಕಥಾನಕ ಬಗ್ಗೆ ಮಮ್ಮಲ ಮರುಗಿದ ಪದ್ಮರಾಜ್, ‘ಮನೆಯನ್ನು ನವೀಕರಿಸುವ ಜವಾಬ್ದಾರಿಯನ್ನು ಗುರುಬೆಳದಿಂಗಳು ಫೌಂಡೇಶನ್ ವಹಿಸಲಿದೆ. ನೀವು ಯಾವುದಕ್ಕೂ ಚಿಂತೆ ಮಾಡಬೇಡಿ. ಸರ್ಕಾರ ನಿಮಗೆ ಸ್ಪಂದಿಸದಿದ್ದರೂ ನಾವು ಸದಾ ನಿಮ್ಮೊಂದಿಗೆ ಇದ್ದೇವೆ’ ಎಂದು ಭರವಸೆ ನೀಡಿ ಮನೋಸ್ಥೈರ್ಯ ತುಂಬಿದ್ದರು.
‘ಗುರುಬೆಳದಿಂಗಳು’ ಮುಖ್ಯಸ್ಥರು ಮಾತು ಕೊಟ್ಟ ಮರುದಿನದಿಂದಲೇ ಮನೆಯನ್ನು ಸುಸಜ್ಜಿತವಾಗಿ ನವೀಕರಿಸಲು ಪ್ರಾರಂಭಿಸಿದ ಸಂಸ್ಥೆ ಇದೀಗ ಸುಮಾರು 6 ಲಕ್ಷ ರೂಪಾಯಿ ವೆಚ್ಚದಲ್ಲಿ ಸುಂದರವಾಗಿ ಮನೆ ನಿರ್ಮಿಸಿಕೊಟ್ಟಿದೆ.. ಮಾರ್ಚ್ 22ರ ಯುಗಾದಿ ಹಬ್ಬದಂದು ಬೆಳಗ್ಗೆ 10ಗಂಟೆಗೆ ಮನೆ ಹಸ್ತಾಂತರ ನಡೆಯಲಿದೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ‘ಗುರುಬೆಳದಿಂಗಳು ಫೌಂಡೇಷನ್’ ಮುಖ್ಯಸ್ಥ ಪದ್ಮರಾಜ್ ಆರ್., ನೊಂದವರ ಪಾಲಿಗೆ ಬೆಳದಿಂಗಳು ಆಸರೆಯಾಗುತ್ತಲೇ ಇರಬೇಕೆಂಬುದು ನಮ್ಮ ಆಶಯ, ಈ ನಿಟ್ಟಿನಲ್ಲಿ ನಮ್ಮ ತಂಡ ಸಮಾಜಮುಖಿ ಕಾಯ್ಯಗಳನ್ನು ಮುಂದುವರಿಸಿದೆ ಎಂದರು. ಗುರುಬೆಳದಿಂಗಳು ಭರವಸೆ ಮಾತ್ರವಲ್ಲ ನಂಬಿಕೆಯೂ, ವಿಶ್ವಾಸವೂ ಹೌದು ಎಂದವರು ಹೇಳಿದ್ದಾರೆ.