ಬೆಂಗಳೂರು: ಮುಡಾ ಅಕ್ರಮ ಆರೋಪ ಕುರಿತಂತೆ ಸಿಎಂ ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲರು ಪ್ರಾಸಿಕ್ಯೂಷನ್ ಅನುಮತಿ ನೀಡಿರುವ ಕ್ರಮಕ್ಕೆ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲಿ ರಾಜ್ಯಪಾಲರ ಹುದ್ದೆ ಮಹತ್ವ ಕಳೆದುಕೊಂಡಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯರಾದ ವಿ.ಆರ್.ಸುದರ್ಶನ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ರಾಜ್ಯಪಾಲರು ತಮ್ಮ ಹುದ್ದೆಯ ಮಹತ್ವವನ್ನು ಕಡಿಮೆ ಮಾಡುವಂತಹ ಕೆಲಸವನ್ನು ಮಾಡುತ್ತಿದ್ದಾರೆ. ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಆಡಳಿತ ವಿಚಾರದಲ್ಲಿ ಮೂಗು ತೂರಿಸುತ್ತಿದ್ದಾರೆ ಎಂದು ದೂರಿದರು.
ರಾಜ್ಯಪಾಲರು ತಮ್ಮ ಹುದ್ದೆಯಲ್ಲಿ ಮುಂದುವರೆಯುವಂತಹ ಯಾವುದೇ ಹಕ್ಕು ಮತ್ತು ಗೌರವವನ್ನು ಉಳಿಸಿಕೊಂಡಿಲ್ಲ. ಕೂಡಲೇ ರಾಷ್ಟ್ರಪತಿಗಳು ರಾಜ್ಯಪಾಲರ ಅಧಿಕಾರವನ್ನು ಹಿಂಪಡೆಯಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಆಗ್ರಹಿಸುತ್ತದೆ ಎಂದ ಸುದರ್ಶನ್, ರಾಜ್ಯ ಹಾಗೂ ಕೇಂದ್ರ ಬಿಜೆಪಿಯ ಪ್ರಭಾವಕ್ಕೆ ಒಳಗಾಗಿ ರಾಜ್ಯಪಾಲರು ಕೆಲಸ ಮಾಡುತ್ತಿದ್ದಾರೆ. ವೈಯಕ್ತಿಕವಾಗಿದ್ದನ್ನು ಹಾಗೂ ದ್ವೇಷವನ್ನು ಸಾಧಿಸುವಂತಹ ಕ್ರಮಗಳನ್ನು ಅನುಸರಿಸುತ್ತಿದ್ದಾರೆ ಎಂದು ದೂರಿದರು.
ರಾಜ್ಯಪಾಲರ ತೀರ್ಮಾನದ ವಿರುದ್ಧ ಕಾನೂನಾತ್ಮಕವಾಗಿ ಹೋರಾಟ ಮಾಡಲಾಗುತ್ತದೆ. ಸರ್ಕಾರದ ಮಟ್ಟದಲ್ಲಿ ಹಾಗೂ ಪಕ್ಷದ ಮಟ್ಟದಲ್ಲಿ ಈ ಹೋರಾಟ ರೂಪಿಸಲಾಗುತ್ತದೆ ಎಂದವರು ತಿಳಿಸಿದರು.
2023ರಲ್ಲಿ ಕರ್ನಾಟಕ ಜನರು ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡಿದ್ದಾರೆ. ಚುನಾಯಿತ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಿ ಹರಿಯಾಣ ಮತ್ತು ಜಮ್ಮು ಕಾಶ್ಮೀರದಲ್ಲಿ ಈ ತಂತ್ರವನ್ನು ಬಳಸಬೇಕು ಎಂದು ಬಿಜೆಪಿ ಕುತಂತ್ರ ಮಾಡುತ್ತಿದೆ ಎಂದು ಆರೋಪಸಿದ ಅವರು, ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ನೀಡುವ ಮೊದಲು ಪ್ರಾಥಮಿಕ ತನಿಖೆ ನಡೆಯಬೇಕು. ಭಾರತ ಸರ್ಕಾರ ಸೆಪ್ಟೆಂಬರ್ 3, 2021 ರಲ್ಲಿ 17 ಎ ಸೆಕ್ಷನ್ ಅನ್ನು ಹೇಗೆ ಪರಿಗಣಿಸಬೇಕೆಂದು ನಿಯಮಾವಳಿ ರೂಪಿಸಿದ್ದಾರೆ. ನೂರಕ್ಕೆ ನೂರರಷ್ಟು ಈ ಪ್ರಕರಣ ನ್ಯಾಯಾಲಯಕ್ಕೆ ಹೋದ ತಕ್ಷಣ ತಡೆಯಾಜ್ಞೆ ಸಿಗುತ್ತದೆ. ಹತಾಶರಾಗಿರುವ ರಾಜಕಾರಣಿಗಳು ರಾಜ್ಯಪಾಲರ ಭವನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಉತ್ತಮವಾಗಿಯೇ ಕೆಲಸ ಮಾಡುತ್ತಿದೆ ಯಾವುದೇ ತೊಂದರೆ ಇಲ್ಲ ಆದರೂ ಸಹ ಇದರ ಹಿಂದೆೆ. ರಾಜಕೀಯ ಪ್ರೇರಣೆ ಕೆಲಸ ಮಾಡುತ್ತಿದೆ ಎಂದರು.