ಹಾವೇರಿ : ಕುವೆಂಪು ಅವರು ರಚಿಸಿರುವ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ ಕಾವ್ಯ ಭಾರತದ ಸಾಹಿತ್ಯ ಲೋಕದಲ್ಲಿಯೇ ವಿಶಿಷ್ಟ ಸ್ಥಾನ ಪಡೆದುಕೊಂಡಿದ್ದು, ಇದು ಅಜರಾಮರ ಗೀತೆಯಾಗಿದೆ ಎಂದು ಹಿರಿಯ ಸಾಹಿತಿ ಡಾ. ಪ್ರಧಾನ ಗುರುದತ್ತ ಅವರು ಅಭಿಪ್ರಾಯಪಟ್ಟರು.
ಹಾವೇರಿಯಲ್ಲಿ ಜರುಗುತ್ತಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೆ ದಿನವಾದ ಶನಿವಾರದಂದು ಕನಕ-ಶರೀಫ-ಸರ್ವಜ್ಞ ಪ್ರಧಾನ ವೇದಿಕೆಯಲ್ಲಿ ಜರುಗಿದ ‘ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ’ ಕುರಿತ ವಿಶೇಷ ಉಪನ್ಯಾಸದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕುವೆಂಪು ಅವರ ಅನೇಕ ಸಾಹಿತ್ಯಗಳಲ್ಲಿ ಮಾತೆ ಹಾಗೂ ಜನ್ಮಭೂಮಿಯ ವರ್ಣನೆ ಮಾಡಿದ್ದರೆ. ರಾಮಾಯಣ ಮತ್ತು ಮಹಾಭಾರತದಲ್ಲಿ ಕೂಡ ಮಾತೆ ಮತ್ತು ಜನ್ಮಭೂಮಿಯ ಮಹತ್ವವನ್ನು ವಿವರಿಸಲಾಗಿದ್ದು, ರಾಮಾಯಣದಲ್ಲಿ ಋಷಿಮುನಿಗಳು ಹೇಳಿದ ಮಾತುಗಳು, ಶ್ರೀರಾಮನು ಲಕ್ಷ್ಮಣನಿಗೆ ಹೇಳುವಂತಹ ಮಾತುಗಳು, “ಧನ ಧಾನ್ಯ, ಸಿರಿ ಸಂಪತ್ತುಗಳು ಪ್ರಜೆಗಳಿಗೆ ಪ್ರಮುಖ ಸಂಪತ್ತುಗಳಾದರೆ, ಆದರೆ ಮಾತೆ ಮತ್ತು ಮಾತೃಭೂಮಿ ಸ್ವರ್ಗದಲ್ಲಿ ದೊರೆಯಬಹುದಾದ ಭೋಗ ಭಾಗ್ಯಗಳಿಗಿಂತ ಮಿಗಿಲಾದ ಸಂಪತ್ತು ಎಂಬುದಾಗಿ ವರ್ಣಿಸಿದ್ದಾರೆ. ಭಾರತದಲ್ಲಿ ಜನನಿಗೆ ಮತ್ತು ಮಾತೃಭೂಮಿ ಕುರಿತು ಸಮಾಜದಲ್ಲಿರುವ ಪೂಜ್ಯ ಭಾವನೆ, ಆತ್ಮೀಯತೆ ಕುರಿತು ಜಗತ್ತಿನಲ್ಲಿಯೇ ವಿಶೇಷವಾದುದು. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷ್ ಇತಿಹಾಸಕಾರರನ್ನು ಭಾರತೀಯರು ಅನುಸರಿಸಿದ್ದುಂಟು. ಪ್ರಸ್ತುತ ದಿನಮಾನಗಳಲ್ಲಿ ಹಿಂಧುತ್ವ ಮತ್ತು ಭಾರತೀಯತೆ ಅಪಾಯದಲ್ಲಿದೆ ಎಂಬುದನ್ನು ಹಲವು ನಿದರ್ಶನಗಳಿಂದ ಗುರುತಿಸಬಹುದಾಗಿದೆ. ಭಾರತದಲ್ಲಿ ಭಾಷಿಕ ಸಮಸ್ಯೆ ಇದುವರೆಗೂ ಇಲ್ಲ. ಸಂಸ್ಕøತದಿಂದ ಪ್ರೇರಿತ ಹಾಗೂ ಉದಯಿಸಿದ ಅನೇಕ ಭಾಷೆಗಳು ಕೂಡ ನಮ್ಮ ದೇಶದ ಭಾಷೆಗಳೇ ಆಗಿವೆ. ಡಾ. ಎಸ್.ಎಲ್. ಭೈರಪ್ಪ ನವರು ಹಾಗೂ ಎಂ. ವೀರಪ್ಪ ಮೊಯಿಲಿ ಇಬ್ಬರೂ ಕೂಡ ಸರಸ್ವತಿ ಸಮ್ಮಾನ ಪ್ರಶಸ್ತಿ ಪುರಸ್ಕøತರೇ ಆಗಿದ್ದಾರೆ. ಹುಯಿಲಗೋಳ ನಾರಾಯಣರಾಯರ ಉದಯವಾಗಲಿ ಚೆಲುವ ಕನ್ನಡ ನಾಡು, ಕರ್ಕಿ ಅವರ ಹಚ್ಚೇವು ಕನ್ನಡದ ದೀಪ ಕಾವ್ಯಗಳು ಕೂಡ ಜನಪ್ರಿಯತೆಯನ್ನು ಪಡೆದುಕೊಂಡಿವೆ. ಆದರೆ ಕನ್ನಡ ಸಾಹಿತ್ಯ ಲೋಕದಲ್ಲಿ ಜಯ ಭಾರತ ಜನನಿಯ ತನುಜಾತೆ ಕೋಟಿ ಕೋಟಿ ಕನ್ನಡಿಗರ ಅನನ್ಯ ದೇಗುಲದಲ್ಲಿ ಶಾಶ್ವತವಾಗಿ ನೆಲೆಗೊಂಡಿದೆ. ಈ ಗೀತೆ ಭಾರತೀಯ ಸಾಹಿತ್ಯದಲ್ಲಿ ವಿಶಿಷ್ಟವಾದ ಸ್ಥಾನ ಪಡೆದುಕೊಂಡಿದೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಶೇಷ ಉಪನ್ಯಾಸ ನೀಡಬೇಕಿದ್ದ ಡಾ. ಎಸ್.ಎಲ್. ಭೈರಪ್ಪ ಅವರು ಅನಾರೋಗ್ಯದಿಂದ ಗೈರು ಹಾಜರಾದ ಕಾರಣ, ಅವರ ಸಂದೇಶವನ್ನೂ ಕೂಡ ವಾಚನ ಮಾಡಿದ ಡಾ. ಪ್ರಧಾನ ಗುರುದತ್ತ ಅವರು, ಭಾರತ ದೇಶ ಭಾಷೆಗಳ ಶಬ್ದ ಕೋಶಕ್ಕೆ ಸಂಸ್ಕøತವೇ ಮೂಲ ಆಧಾರ, ಕನ್ನಡ ಭಾಷೆ ಶಬ್ದಕೋಶಕ್ಕೆ ಶೇ. 65 ರಷ್ಟು ಸಂಸ್ಕøತವೇ ಆಧಾರವಾಗಿದೆ. ತೆಲುಗು ಮತ್ತು ಮಲೆಯಾಳಂ ಗಳಲ್ಲಿ ಶೇ. 80 ರಷ್ಟಿದ್ದರೆ, ತಮಿಳು ಭಾಷೆಯಲ್ಲ ಇದರ ಪ್ರಮಾಣ ಕಡಿಮೆಯಿದೆ. ದೇಶಭಾಷೆಗಳಿಗೆ ಅನುವಾದಗೊಂಡಿರುವ ಮಾತೃಸ್ವರೂಪಿ ಸಂಸ್ಕøತವಾಗಿದೆ. ದೇಶದ ವಿವಿಧ ಭಾಷೆಗಳಿಗೆ ಸಂಸ್ಕøತವೇ ಭಾಷಿಕ ಸಾಮರಸ್ಯ ಮಾಡಿದೆ. ಕುವೆಂಪು ಅವರ ರಾಮಾಯಣದರ್ಶನಂ ಮುಂತಾದ ಮಹಾ ಕಾವ್ಯಗಳು, ಇಂತಹ ಸಾಮರಸ್ಯ ಕಾರ್ಯಗಳಿಗೆ ಕೊಡುಗೆ ನೀಡಿವೆ ಎಂದರು. ಡಾ. ಎಸ್.ಎಲ್. ಭೈರಪ್ಪನವರದು ವಿಶ್ವ ಸಾಹಿತ್ಯ ಎನ್ನುವಂತದ್ದು ಉಚಿತವೂ ಹಾಗೂ ಸಮರ್ಥನೀಯವೂ ಆಗಿದೆ. ಕುವೆಂಪು ಅವರ ಅನೇಕ ಕೃತಿಗಳು ಇತರೆ ಭಾಷೆಗಳಿಗೆ ಅನುವಾದಗೊಂಡಿವೆ. ಕೃತಿಯಾದ ರಾಮಾಯಣದರ್ಶನಂ, ಇಂಗ್ಲೀಷ್, ಹಿಂದಿ ಸೇರಿದಂತೆ ಅನೇಕ ಭಾಷೆಗಳಲ್ಲಿ ಅನುವಾದಗೊಂಡಿದ್ದು, ವಿಶ್ವ ಮಾನವ ಸಂದೇಶ 14 ಭಾಷೆಗಳಿಗೆ ಅನುವಾದಗೊಂಡಿರುವ ಸಂದರ್ಭದಲ್ಲಿ ಕನ್ನಡ ಅಧ್ಯಯನ ಸಂಸ್ಥೆ ಸಮಸ್ತ ನಾಟಕಗಳನ್ನು ಅನುವಾದಿಸಲು ಸಾಧ್ಯವಾಗಿದೆ. ಯುಗದ ಕವಿ, ಜಗದ ಕವಿ, ಕುವೆಂಪು ಅವರು ಕನ್ನಡದ ಬಹುತೇಕ ಸಾಹಿತ್ಯ ಪ್ರಕಾರಗಳಲ್ಲಿ ರಚನೆ ಮಾಡಿದ್ದಾರೆ. ಎಲ್ಲಿ ಮಾತೆಯರು ನೆಲೆಸಿರುತ್ತಾರೆಯೋ, ಅಲ್ಲಿ ದೇವತೆಗಳು ನೆಲೆಸುತ್ತಾರೆ. ಹೀಗಾಗಿ ಎಲ್ಲ ಮಾತೆಯರು ಕೂಡ ದೇವರ ಸ್ವರೂಪಿಗಳೇ. ಭಾರತ ಜನನಿಯ ತನುಜಾತೆಯ ಅರ್ಥವೂ ಕೂಡ ಮಾತೆಯ ಮಹತ್ವವನ್ನೇ ಸಾರುತ್ತದೆ. ಹೆತ್ತು ಹೊತ್ತು ಸಾಕಿ ಸಲಹಿ, ಮನುಷ್ಯನನ್ನಾಗಿ ಮಾಡಿದ ನೀತಿ ನಿಯಮ ಆದರ್ರ್ಶಗಳನ್ನು ಪಾಲಿಸುವಂತೆ ಮಾಡಿದ ಮಾತೃಭೂಮಿ, ಅಥವಾ ಜನ್ಮ ಭೂಮಿ ಜೀವನಕ್ಕೆ ಆಧಾರದ ಮೌಲ್ಯಗಳನ್ನು ಕಲಿಸುತ್ತದೆ. ಜನನಿ ಮತ್ತು ಜನ್ಮಭೂಮಿ ಬಗ್ಗೆ ಅನೇಕ ಪ್ರಕಾರಗಳಲ್ಲಿ ಮಹತ್ವವನ್ನು ವರ್ಣಿಸಲಾಗುತ್ತದೆ ಎಂದು ಪ್ರಧಾನ ಗುರುದತ್ತ ಅವರು ಹೇಳಿದರು.
ಕಾರ್ಯಕ್ರಮದಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ. ದೊಡ್ಡರಂಗೇಗೌಡ, ಕಸಾಪ ರಾಜ್ಯಾಧ್ಯಕ್ಷ ಡಾ. ಮಹೇಶ್ ಜೋಶಿ ಉಪಸ್ಥಿತರಿದ್ದರು. ಸಿದ್ದಪ್ಪ ಹೊಟ್ಟಿ ಸ್ವಾಗತಿಸಿದರು, ಗಾಯತ್ರಿ ಉಡುಪ ನಿರ್ವಹಿಸಿದರು, ಸಿದ್ದಪ್ಪ ಸಂಗಪ್ಪ ಮೇಟಿ ವಂದಿಸಿದರೆ, ಡಾ. ನಿಷ್ಠಿ ರುದ್ರಪ್ಪ ಕಾರ್ಯಕ್ರಮ ನಿರೂಪಿಸಿದರು.