ಉಡುಪಿ: ರಾಜ್ಯ ಬಿಜೆಪಿ ಸರ್ಕಾರದ ವಿರುದ್ದವೇ ಹಿಂದೂ ಸಂಘಟನೆಗಳು ತಿರುಗಿಬಿದ್ದಿವೆ. ಸಚಿವ ಕಾರ್ಕಳ ಸುನಿಲ್ ಕುಮಾರ್ ಅವರ ಅವಾಂತರದಿಂದಾಗಿ ಶ್ರೀರಾಮಸೇನೆ ಸಹಿತ ಹಿಂದೂ ಸಂಘಟನೆಗಳು ಬಿಜೆಪಿ ಪಕ್ಷದ ವಿರುದ್ದ ತಿರುಗಿಬಿದ್ದಿವೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹಿಂದೂ ಸಂಘಟನೆಗಳು ಬಿಜೆಪಿಯ ವಿರುದ್ದ ನಿಲ್ಲಲಿವೆ ಎಂದು ಈ ಹಿಂದೂ ಮುಖಂಡರು ರಣಕಹಳೆ ಮೊಳಗಿಸಿದ್ದಾರೆ.
ಭಜರಂಗದಳದ ಮಾಜಿ ಮುಖಂಡರೂ ಆದ ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ಉಡುಪಿಯಲ್ಲಿ ಶನಿವಾರ ನಡೆಸಿದ ಸುದ್ದಿಗೋಷ್ಠಿ ಕುತೂಹಲದ ಕೇಂದ್ರಬಿಂದುವಾಯಿತು. ರಾಜ್ಯದಲ್ಲಿ ಸುಮಾರು ಮೂರು ಸಾವಿರ ಹಿಂದೂ ಕಾರ್ಯಕರ್ತರ ಮೇಲೆ ಕೇಸು ಇದೆ. ಹಿಂದೂಗಳ ಪರವಾಗಿರುವುದಾಗಿ ಹೇಳುತ್ತಿರುವ ಬಿಜೆಪಿ ಸರ್ಕಾರವೇ ಹಿಂದೂ ಕಾರ್ಯಕರ್ತರ ಮೇಲೆ ಕೇಸುಗಳನ್ನು ಹಾಕಿ ಬೆದರಿಸುತ್ತಿವೆ ಎಂದು ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೂ ನಾಯಕರ ಸಿಟ್ಟು ಕಾರ್ಕಳದ ಕೆಲವು ಸನ್ನಿವೇಶಗಳತ್ತ ಕೇಂದ್ರೀಕರಿಸಿದಂತಿತ್ತು. ರಾಜ್ಯದಲ್ಲಿ 18 ಹಿಂದೂ ಒಕ್ಕೂಟ ಬಿಜೆಪಿಗೆ ವಿರುದ್ಧವಾಗಿದೆ ಎಂದ ಅವರು ಮುಂಬರುವ ಚುನಾವಣೆಯಲ್ಲಿ ಕಾರ್ಕಳ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪ್ರಖರ ಹಿಂದೂವಾದಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಮುತಾಲಿಕ್ ಪುನರುಚ್ಚರಿಸಿದರು.
ನಮ್ಮ ಹೋರಾಟ ಬಿಜೆಪಿ ವಿರುದ್ಧವಲ್ಲ ಎಂದು ಸ್ಪಷ್ಟಪಡಿಸಿದ ಮುತಾಲಿಕ್, ಹಿಂದುತ್ವಕ್ಕಾಗಿ, ಅಭಿವೃದ್ಧಿಗಾಗಿ, ಪ್ರಾಮಾಣಿಕ ವ್ಯವಸ್ಥೆ ರೂಪಿಸಲು ನಿರಂತರ ಹೋರಾಟ ಮಾಡುತ್ತೇವೆ. ಆ ಕಾರಣದಿಂದಲೇ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದವರು ತಿಳಿಸಿದರು. .
ಏಳೆಂಟು ಕ್ಷೇತ್ರಗಳಲ್ಲಿ ಈಗಾಗಲೇ ಅಧ್ಯಯನ ಮಾಡಿದ್ದು ಕಾರ್ಯಕರ್ತರಿಗೆ ಶಕ್ತಿ ತುಂಬಲು ಚುನಾವಣೆಯಲ್ಲಿ ಹಿಂದೂ ಸಂಘಟನೆಯಾಗಿ ಸ್ಪರ್ಧಿಸುವುದು ಅನಿವಾರ್ಯವಾಗಿದೆ ಎಂದ ಅವರು, ಈ ತಿಂಗಳ ಅಂತ್ಯದಲ್ಲಿ ಅಧಿಕೃತವಾಗಿ ಘೋಷಣೆ ಮಾಡುವುದಾಗಿ ತಿಳಿಸಿದರು. ಕಾರ್ಕಳದಲ್ಲಿನ ಹಿಂದೂ ಕಾರ್ಯಕರ್ತರ ಮೇಲೆ ಕೇಸು ಹಾಕೋದು, ಹೆದರಿಸೋದು ಮಾಡುತ್ತಿದ್ದಾರೆ. ಹಿಂದುತ್ವದ ನೈತಿಕತೆ ಇದ್ದರೆ ಹೆದರಿಸುವ ಆವಶ್ಯಕತೆ ಇರಲಿಲ್ಲ ಎಂದು ಸಚಿವ ಸುನಿಲ್ ಕುಮಾರ್ ವಿರುದ್ದ ವಾಗ್ದಾಳಿ ನಡೆಸಿದ ಮುತಾಲಿಕ್, ಕಾರ್ಕಳದ ಭ್ರಷ್ಟಾಚಾರದ ದಾಖಲೆ ಇದೆ. ಒಂದೊಂದಾಗಿ ಬಹಿರಂಗಪಡಿಸುವುದಲ್ಲದೆ, ದೂರನ್ನೂ ದಾಖಲಿಸುವುದಾಗಿ ಹೇಳಿದರು. ಹಿಂದೂ ಕಾರ್ಯಕರ್ತರಲ್ಲಿ ಭಯಪಡಿಸುವ ಪಿತೂರಿಯ ವಿರುದ್ದ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇನೆ ಎಂದು ಅವರು ತಿಳಿಸಿದರು.