ಎಚ್ ಐವಿ ಸೋಂಕಿತರಿಗೆ 5 ಲಕ್ಷ ರೂ.ವರೆಗೆ ಉಚಿತ ಔಷಧಿ

ಬೆಂಗಳೂರು: ಮುನ್ನೆಚ್ಚರಿಕೆ ಕ್ರಮ, ಜಾಗೃತಿ ಕಾರ್ಯಕ್ರಮಗಳ ಮೂಲಕ ಎಚ್‍ಐವಿ ಸೋಂಕು ಹರಡುವುದನ್ನು ತಡೆಗಟ್ಟಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಮಂಗಳವಾರ ನಡೆದ ವಿಶ್ವ ಏಡ್ಸ್ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾಗತಿಕ ಒಗ್ಗಟ್ಟು, ಜವಾಬ್ದಾರಿಯ ಹಂಚಿಕೆಯೊಂದಿಗೆ ಏಡ್ಸ್ ನಿಯಂತ್ರಣಕ್ಕೆ ತರಬೇಕು ಎಂದು ಈ ಬಾರಿ ಘೋಷಿಸಲಾಗಿದೆ. ಎಚ್ ಐವಿಗೊಳಗಾದವರು ಮಾನಸಿಕ ಖಿನ್ನತೆಗೆ ಒಳಗಾಗಿರುತ್ತಾರೆ. ಕೋವಿಡ್ ಬಂದಾಗ, ‘ರೋಗದ ವಿರುದ್ಧ ಹೋರಾಡಬೇಕೆ ಹೊರತು ರೋಗಿಯ ವಿರುದ್ಧ ಅಲ್ಲ’ ಎಂಬ ಸಂದೇಶ ನೀಡಲಾಯಿತು. ಈ ಸಂದೇಶ ಎಲ್ಲ ರೋಗಗಳಿಗೂ ಅನ್ವಯವಾಗುತ್ತದೆ. ಏಡ್ಸ್ ರೋಗಿಗಳನ್ನು ಅವಮಾನಕಾರಿಯಾಗಿ ನೋಡಬಾರದು ಎಂದರು.

ಎಚ್ ಐವಿ ಸೋಂಕಿತರಿಗೆ ಕೋವಿಡ್ ಕೂಡ ಬಂದರೆ ಕಷ್ಟ ಎಂದು ಮೊದಲಿಗೆ ಭಯವಾಗಿತ್ತು. ರಾಜ್ಯದಲ್ಲಿ 280 ಎಚ್ ಐವಿ ಸೋಂಕಿತರು ಕೋವಿಡ್ ಸೋಂಕಿಗೆ ಒಳಗಾಗಿದ್ದರು. ಈ ಪೈಕಿ 275 ಮಂದಿ ಜೀವಂತವಾಗಿದ್ದು, ಅವರ ಆರೋಗ್ಯ ಸುರಕ್ಷಿತವಾಗಿದೆ ಎಂದರು.

ಎಚ್‍ಐವಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಅನುದಾನ ನೀಡಲಾಗುತ್ತಿದೆ. ಅವರಿಗೆ ವಾರ್ಷಿಕ 5 ಲಕ್ಷ ರೂ.ವರೆಗೆ ಉಚಿತ ಔಷಧಿ ನೀಡಬೇಕು ಎಂದು ಆರೋಗ್ಯ ಕೇಂದ್ರಗಳಿಗೆ ಸೂಚಿಸಲಾಗಿದೆ. ಎಪಿಎಲ್ ಹಾಗೂ ಬಿಪಿಎಲ್ ರೋಗಿಗಳಿಗೆ ಇದು ಅನ್ವಯವಾಗಲಿದೆ ಎಂದು ತಿಳಿಸಿದರು.

Related posts