UPI ಪರಿಣಾಮ: ಪಾವತಿಗಳಲ್ಲಿ ಭಾರತವೇ ಮುಂಚೂಣಿ ಎಂದ IMF ವರದಿ

ನವದೆಹಲಿ:ಭಾರತದ ಏಕೀಕೃತ ಪಾವತಿ ಇಂಟರ್ಫೇಸ್‌ (UPI) ವ್ಯವಸ್ಥೆಯ ವ್ಯಾಪಕ ಅಳವಡಿಕೆ ಹಾಗೂ ಅದರಿಂದ ಉಂಟಾಗಿರುವ ತ್ವರಿತ ಡಿಜಿಟಲ್ ವಹಿವಾಟುಗಳು ಭಾರತವನ್ನು ಪಾವತಿಗಳ ಕ್ಷೇತ್ರದಲ್ಲಿ ವಿಶ್ವದ ಎತ್ತರಕ್ಕೆ ಕೊಂಡೊಯ್ದಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ತನ್ನ ವರದಿಯಲ್ಲಿ ಹೊಗಳಿದೆ.

‘Growing Retail Digital Payments: The Value of Interoperability’ ಎಂಬ ಶೀರ್ಷಿಕೆಯ ಅಡಿಯಲ್ಲಿ ಬಿಡುಗಡೆಗೊಂಡಿರುವ IMF ವಿಶ್ಲೇಷಣೆಯಲ್ಲಿ, ಭಾರತವು ಈಗ ವಿಶ್ವದ ಯಾವುದೇ ದೇಶಕ್ಕಿಂತ ವೇಗವಾಗಿ ಪಾವತಿಗಳನ್ನು ಪ್ರಕ್ರಿಯೆಗೊಳಿಸುತ್ತಿದೆ ಎಂದು ಸ್ಪಷ್ಟಪಡಿಸಲಾಗಿದೆ.

2016ರಲ್ಲಿ ಪರಿಚಯವಾದ ನಂತರ UPI ವೇಗವಾಗಿ ಜನಪ್ರಿಯತೆ ಪಡೆದಿದ್ದು, ಇದೀಗ ತಿಂಗಳಿಗೆ 18 ಶತಕೋಟಿಗೂ ಹೆಚ್ಚು ವಹಿವಾಟುಗಳು ಇದರ ಮೂಲಕ ನಡೆಯುತ್ತಿವೆ. ಇವುಗಳಲ್ಲಿ ಬಹುಪಾಲು ಚಿಲ್ಲರೆ ಎಲೆಕ್ಟ್ರಾನಿಕ್ ಪಾವತಿಗಳೇ ಆಗಿದ್ದು, UPI ಇತಿಹಾಸದಲ್ಲೇ ಮಹತ್ತರ ಪಾತ್ರವಹಿಸಿದೆ.

UPI ವ್ಯವಸ್ಥೆ ತಕ್ಷಣದ ಪಾವತಿ ಸೇವೆ IMPS ಮೇಲೆ ನಿರ್ಮಿಸಲ್ಪಟ್ಟ ತಂತ್ರಜ್ಞಾನವಾಗಿದ್ದು, ಭಾರತೀಯ ಉಪಯೋಗದಾರರಿಗೆ ಸುಲಭ, ಸುರಕ್ಷಿತ ಹಾಗೂ ವೇಗದ ಪಾವತಿಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ.

“ಬಳಕೆದಾರರಿಗೆ ತಮ್ಮ ನೆಚ್ಚಿನ ಅಪ್ಲಿಕೇಶನ್‌ ಆಯ್ಕೆಮಾಡುವ ಅವಕಾಶವನ್ನು ಪರಸ್ಪರ ಕಾರ್ಯಸಾಧ್ಯತೆ ನೀಡುತ್ತದೆ. ಇದು ಪೂರೈಕೆದಾರರ ನಡುವಿನ ಸ್ಪರ್ಧೆಯನ್ನು ಉತ್ತೇಜಿಸುತ್ತದೆ ಮತ್ತು ಬಳಕೆದಾರರಿಗೆ ಉತ್ತಮ ಗುಣಮಟ್ಟದ ಸೇವೆ ಲಭಿಸುವಂತಾಗುತ್ತದೆ,” ಎಂದು IMF ಟಿಪ್ಪಣಿ ವಿವರಿಸಿದೆ.

ಈ ಪರಸ್ಪರ ಕಾರ್ಯಸಾಧ್ಯ ವ್ಯವಸ್ಥೆಯು ಪಾವತಿ ಜಗತ್ತಿನಲ್ಲಿ ಬದಲಾವಣೆಗೆ ಕಾರಣವಾಗಿದ್ದು, ಜಗತ್ತಿನ ಇತರ ಕ್ಲೋಸ್ಡ್-ಲೂಪ್ ವ್ಯವಸ್ಥೆಗಳಿಗೆ ಹೋಲಿಸಿದರೆ ಹೆಚ್ಚು ವ್ಯಾಪಕವಾಗಿ ಅಳವಡಿಕೆಯಾಗುತ್ತಿದೆ ಎಂದು ವರದಿ ಹೇಳಿದೆ.

BHIM ಅಪ್ಲಿಕೇಶನ್‌ ಉದಾಹರಣೆ ನೀಡಿದ IMF, “2016ರ ಅಂತ್ಯದೊಳಗೆ ಕಡಿಮೆ UPI ಬಳಕೆದಾರರು ಇದ್ದಾಗ BHIM ಅಪ್ಲಿಕೇಶನ್ ಒಟ್ಟು ವಹಿವಾಟುಗಳಲ್ಲಿ ಅರ್ಧಕ್ಕಿಂತ ಹೆಚ್ಚಿನ ಪಾಲು ಹೊಂದಿತ್ತು. ಇದು ಸರ್ಕಾರದ ನೇರ ಹಸ್ತಕ್ಷೇಪವು ಯಾವ ಮಟ್ಟಿಗೆ ವೇಗವರ್ಧಕವಾಗಬಹುದು ಎಂಬುದಕ್ಕೆ ನಿದರ್ಶನ” ಎಂದು ತಿಳಿಸಿದೆ.

ಜೂನ್‌ 2025ರ ವೇಳೆಗೆ ದಿನಸಿ ವಹಿವಾಟುಗಳ ಸಂಖ್ಯೆ 613 ಮಿಲಿಯನ್‌ಗೆ ಏರಿಕೆಯಾಗಿದೆ. ಹೋಲಿಕೆಗಾಗಿ, ಮೇ ತಿಂಗಳಲ್ಲಿ ಈ ಸಂಖ್ಯೆ 602 ಮಿಲಿಯನ್‌ ಇತ್ತು. ವಹಿವಾಟು ಮೌಲ್ಯದಲ್ಲಿ ವಾರ್ಷಿಕ ಶೇ. 20ರಷ್ಟು ಮತ್ತು ಪ್ರಮಾಣದಲ್ಲಿ ಶೇ. 32ರಷ್ಟು ಏರಿಕೆಯಾಗಿದೆ ಎಂದು IMF ವಿವರಿಸಿದೆ.

ಡಿಜಿಟಲ್ ಪರಿವರ್ತನೆಗೆ ಭರವಸೆಯ ಹಾದಿಯಾಗಿ UPI ಬದಲಾಗಿದೆ. ಇತರೆ ದೇಶಗಳು ಈ ಮಾದರಿಯಿಂದ ಪಾಠ ಕಲಿಯಬಹುದೆಂಬ ನುಡಿಗಟ್ಟನ್ನು IMF ಟಿಪ್ಪಣಿ ಮುಂದಿಟ್ಟಿದೆ. ಉತ್ತಮ ತಂತ್ರಜ್ಞಾನ ಮೂಲಸೌಕರ್ಯ, ನಿಯಂತ್ರಣ ಸಂಬಂಧಿ ಪ್ರೋತ್ಸಾಹಗಳು ಮತ್ತು ಸಾರ್ವಜನಿಕ ಹಾಗೂ ಖಾಸಗಿ ಪಾಲುದಾರಿಕೆಯಿಂದ ಈ ಯಶಸ್ಸು ಸಾಧ್ಯವಾಯಿತು ಎಂಬುದು ವರದಿ ಹೈಲೈಟ್ಸ್.

Related posts