ರಾಜ್ಯದ ಮುಜರಾಯಿ ದೇಗುಲಗಳಲ್ಲಿ ‘ನಂದಿನಿ ತುಪ್ಪ’ ಮಾತ್ರ ಬಳಕೆ; ಸರ್ಕಾರದ ಕಟ್ಟಪ್ಪಣೆ

ಬೆಂಗಳೂರು: ರಾಜ್ಯದ ಮುಜರಾಯಿ ದೇಗುಲಗಳಲ್ಲಿ ನಂದಿನಿ ತುಪ್ಪವನ್ನೇ ಬಳಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಅವರ ಸೂಚನೆಯಂತೆ ಮುಜರಾಯಿ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

ತಿರುಪತಿ ದೇಗುಲದ ಪ್ರಸಾದದಲ್ಲಿ ನಕಲಿ ತುಪ್ಪ ಬಳಕೆ ಮಾಡಲಾಗಿತ್ತೆಂಬ ಬಗ್ಗೆ ಭಾರೀ ಚರ್ಚೆ ನಡೆದಿದೆ. ಈ ಹಿನ್ನೆಲೆಯಲ್ಲಿ ಈಗಿನ ಸರ್ಕಾರದ ಸೂಚನೆಯಂತೆ ತಿರುಪತಿ ದೇವಾಲಯವು ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟದ ಉತ್ಪನ್ನವಾಗಿರುವ ‘ನಂದಿನಿ ತುಪ್ಪ’ವನ್ನು ಖರೀದಿಸುತ್ತಿದೆ. ಇದೀಗ ರಾಜ್ಯದ ಮುಜರಾಯಿ ದೇಗುಲಗಳಲ್ಲೂ ನಂದಿನಿ ತುಪ್ಪವನ್ನೇ ಬಳಸುವಂತೆ ಕರ್ನಾಟಕ ಸರ್ಕಾರ ಆದೇಶಿಸಿದೆ.

ಕರ್ನಾಟಕ ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಅಧಿಸೂಚಿತ ದೇವಾಲಯಗಳಲ್ಲಿ ಸೇವೆಗಳಿಗೆ ಪ್ರಸಾದ ತಯಾರಿಕೆಗೆ ಮತ್ತು ಶುದ್ಧ ನಂದಿನಿ ತುಪ್ಪ ವನ್ನು ಮಾತ್ರ ಬಳಸುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ.‌

ಕರ್ನಾಟಕ ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯಡಿ ಬರುವ ಎಲ್ಲಾ ಅಧಿಸೂಚಿತ ದೇವಾಲಯಗಳಲ್ಲಿ ಸೇವೆಗಳಿಗೆ, ದೀಪಗಳಿಗೆ ಮತ್ತು ಎಲ್ಲಾ ವಿಧದ ಪ್ರಸಾದ ತಯಾರಿಕೆಗೆ ಹಾಗೂ ದಾಸೋಹ ಭವನದಲ್ಲಿ ಕಡ್ಡಾಯವಾಗಿ ನಂದಿನಿ ತುಪ್ಪವನ್ನು ಮಾತ್ರ ಬಳಸಬೇಕು. ಹಾಗೂ ದೇವಾಲಯಗಳಲ್ಲಿ ತಯಾರಿಸಲಾಗುವ ಪ್ರಸಾದಗಳಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳುವಂತೆ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ಈ ಸಂಬಂಧ ಎಲ್ಲಾ ಜಿಲ್ಲಾಧಿಕಾರಿಗಳಿಗೆ, ಸಹಾಯಕ ಆಯುಕ್ತರಿಗೆ ಹಾಗೂ ದೇವಾಲಯಗಳ ಕಾರ್ಯನಿರ್ವಹಣಾಧಿಕಾರಿಗಳಿಗೆ ಮುಜರಾಯಿ ಆಯುಕ್ತರು ಸೂಚನೆ ರವಾನಿಸಿದ್ದಾರೆ.

Related posts