ವಾಷಿಂಗ್ಟನ್: ಅಮೆರಿಕದಲ್ಲಿ ಭಾರತೀಯರು ಅಕ್ರಮ ವಲಸಿಗರಾಗಿ ನೆಲೆಸಿದ್ದಲ್ಲಿ ಅಂಥವರನ್ನು ಭಾರತಕ್ಕೆ ವಾಪಸ್ ಕರೆಸಿಕೊಳ್ಳುತ್ತೇವೆ ಜೊತೆಗೆ ಮಾನವ ಕಳ್ಳಸಾಗಣೆದಾರರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾರತ ಮತ್ತು ಅಮೆರಿಕ “ಯಾವಾಗಲೂ ಒಂದೇ ಅಭಿಪ್ರಾಯವನ್ನು ಹೊಂದಿವೆ, ಮತ್ತು ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿರುವ ಯಾವುದೇ ಭಾರತೀಯರನ್ನು ನಾವು ಭಾರತಕ್ಕೆ ಮರಳಿ ಕರೆದೊಯ್ಯಲು ಸಂಪೂರ್ಣವಾಗಿ ಸಿದ್ಧರಿದ್ದೇವೆ” ಎಂದು ಅವರು ಗುರುವಾರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ದ್ವಿಪಕ್ಷೀಯ ಮಾತುಕತೆಯ ನಂತರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅಮೆರಿಕವು ಈ ತಿಂಗಳು ಅಮೃತಸರಕ್ಕೆ ಮಿಲಿಟರಿ ವಿಮಾನದಲ್ಲಿ ಭಾರತದಿಂದ ಸುಮಾರು 100 ಅಕ್ರಮ ವಲಸಿಗರನ್ನು ವಾಪಸ್ ಕಳುಹಿಸಿತು. ಭಾರತವು 18,000 ಅಕ್ರಮ ವಲಸಿಗರನ್ನು ವಾಪಸ್ ತೆಗೆದುಕೊಳ್ಳಲು ಒಪ್ಪಿಕೊಂಡಿದೆ ಎಂದು ವರದಿಯಾಗಿದೆ.
“ದೊಡ್ಡ ಕನಸುಗಳು ಮತ್ತು ದೊಡ್ಡ ಭರವಸೆಗಳೊಂದಿಗೆ” ಅವರನ್ನು ಆಕರ್ಷಿಸಿ “ಸಾಮಾನ್ಯ ಕುಟುಂಬಗಳ ಮಕ್ಕಳನ್ನು” ಶೋಷಿಸುವ ಮಾನವ ಕಳ್ಳಸಾಗಣೆದಾರರ ವಿರುದ್ಧ ಹೋರಾಡಲು ತಾನು ಬಯಸಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದರು. ನೆರೆಯ ದೇಶಗಳಿಂದ ಬರುವ ಅಕ್ರಮ ವಲಸಿಗರ ಸಮಸ್ಯೆಯೂ ಭಾರತಕ್ಕೂ ಇದೆ ಎಂದವರು ಅಮೆರಿಕಾದ ಗಮನಸೆಳೆದರು.