ಬೆಂಗಳೂರು: ಬೆಂಗಳೂರು ವಿದ್ಯಾನಗರದಲ್ಲಿರುವ ಶ್ರೀ ಜಯಪ್ರಕಾಶ್ ನಾರಾಯಣ ರಾಷ್ಟ್ರೀಯ ಯುವ ಕೇಂದ್ರವನ್ನು ಖೇಲೋ ಇಂಡಿಯಾ ರಾಜ್ಯ ಉತ್ಕೃಷ್ಟತಾ ಕೇಂದ್ರವೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಕೇಂದ್ರ ಕ್ರೀಡಾ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಅವರು ಘೋಷಿಸಿದ್ದಾರೆ.
ಭಾರತದ 8 ರಾಜ್ಯಗಳ ಕ್ರೀಡಾ ಕೇಂದ್ರಗಳಿಗೆ ಈ ಮಾನ್ಯತೆ ದೊರೆತಿದ್ದು, ಬೆಂಗಳೂರು ಕೇಂದ್ರದಲ್ಲಿ ಈಜು, ಅಥ್ಲೆಟಿಕ್ಸ್ ಮತ್ತು ಶೂಟಿಂಗ್ ವಿಭಾಗಗಳ ತರಬೇತಿ ನೀಡಲಾಗುವುದು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಅತ್ಯುತ್ತಮ ಕ್ರೀಡಾ ಸೌಲಭ್ಯಗಳನ್ನು ಒದಗಿಸಲು ಆದ್ಯತೆ ನೀಡಿದೆ. ಈ ನಿಟ್ಟಿನಲ್ಲಿ ವಿದ್ಯಾನಗರದ ಯುವ ಕೇಂದ್ರಕ್ಕೆ ಉತ್ಕೃಷ್ಟತಾ ಕೇಂದ್ರದ ಮಾನ್ಯತೆ ದೊರೆತಿರುವುದರಿಂದ ಕ್ರೀಡೆಗೆ ಇನ್ನಷ್ಟು ಮೂಲಸೌಲಭ್ಯ ಒದಗಿಸಲು ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ ಕ್ರೀಡಾ ಹಾಸ್ಟೆಲ್ ಗಳು ಮತ್ತು ಇತರ ಸಂಘ ಸಂಸ್ಥೆಗಳಿಂದ ಓಲಿಂಪಿಕ್ ಪದಕ ಗೆಲ್ಲಬಲ್ಲ ಸಾಮರ್ಥ್ಯವುಳ್ಳ 32 ಕ್ರೀಡಾಪಟುಗಳನ್ನು ಗುರುತಿಸಿ ತರಬೇತಿಗೆ ಆಯ್ಕೆ ಮಾಡಲಾಗಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಕೇಂದ್ರ ಕ್ರೀಡಾ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಮಾತನಾಡಿ, ಖೇಲೋ ಇಂಡಿಯಾ ರಾಜ್ಯ ಉತ್ಕೃಷ್ಟತಾ ಕೇಂದ್ರಗಳಲ್ಲಿ ಅತ್ಯುತ್ತಮ ಮೂಲಸೌಕರ್ಯ ಹಾಗೂ ಮಾನವ ಸಂಪನ್ಮೂಲ ಒದಗಿಸುವ ಮೂಲಕ ಭಾರತವನ್ನು ಕ್ರೀಡಾ ಕ್ಷೇತ್ರದಲ್ಲಿ ಮುಂಚೂಣಿಯ ದೇಶವಾಗಿ ರೂಪಿಸಲು ಉದ್ದೇಶಿಸಲಾಗಿದೆ. 2028ರ ಲಾಸ್ ಏಂಜೆಲಿಸ್ ಒಲಿಂಪಿಕ್ಸ್ ನಲ್ಲಿ ಅತಿ ಹೆಚ್ಚು ಪದಕಗಳನ್ನು ಗೆಲ್ಲುವ ಗುರಿಯೊಂದಿಗೆ ದೇಶದ ಪ್ರತಿಭಾವಂತ ಕ್ರೀಡಾಪಟುಗಳಿಗೆ ಅತ್ಯುತ್ತಮ ತರಬೇತಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅರುಣಾಚಲ ಪ್ರದೇಶ, ಕೇರಳ, ಮಣಿಪುರ, ಮಿಝೋರಂ, ನಾಗಾಲ್ಯಾಂಡ್, ಒಡಿಶಾ ಹಾಗೂ ತೆಲಂಗಾಣ ರಾಜ್ಯಗಳ ಕ್ರೀಡಾ ಸಚಿವರು, ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಅರ್ಜುನ ಪ್ರಶಸ್ತಿ ಪುರಸ್ಕೃತ ಒಲಿಂಪಿಕ್ಸ್ ಶೂಟರ್ ಪಿ.ಎನ್. ಪ್ರಕಾಶ್ ಹಾಗೂ ಹಾಕಿ ಆಟಗಾರ ವಿ.ಆರ್. ರಘುನಾಥ್ ಉಪಸ್ಥಿತರಿದ್ದರು.