ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ಅವರನ್ನು ಮೂಲೆಗುಂಪಾಗಿಸಲು ಜೆಡಿಎಸ್ ಜೊತೆ ಮೈತ್ರಿಗೆ ಬಿಜೆಪಿ ನಾಯಕರು ಮುದ್ರೆ ಒತ್ತಿದ್ದಾರೆ ಎಂದು ಕೆಪಿಸಿಸಿ ಸಂವಹನ ವಿಭಾಗದ ಉಪಾಧ್ಯಕ್ಷರೂ ಆದ ರಮೇಶ್ ಬಾಬು ವಿಶ್ಲೇಷಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಮೇಶ್ ಬಾಬು, ಕರ್ನಾಟಕ ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಬಿಜೆಪಿಯ 26 ಶಾಸಕರು ಹೈಕಮಾಂಡಿಗೆ ಪತ್ರ ಬರೆದು ಬೊಮ್ಮಾಯಿ ಅವರಿಗೆ ಸರ್ಕಾರ ನಡೆಸಲು ಶಕ್ತಿ ಇಲ್ಲ ಎಂದಿದ್ದರು. ಅವರನ್ನು ಕೆಳಗೆ ಇಳಿಸಿ ಎಂದು ಮಾಡಿದ್ದರು, ರಾಜ್ಯ ರಾಜಕಾರಣದಲ್ಲಿ ಯಡಿಯೂರಪ್ಪ ಅವರನ್ನು ಮೂಲೆಗೆ ತಳ್ಳಲು ಹುನ್ನಾರ ಮಾಡಿದವರೇ ಇಂದು ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಗೆ ಮುದ್ರೆ ಒತ್ತಿದ್ದಾರೆ ಎಂದರು.
ವಿಧಾನಸಭಾ ಚುನಾವಣೆಯ ನಂತರ ಬಿಜೆಪಿ ಮತ್ತೆ ಯಡಿಯೂರಪ್ಪ ಅವರ ಚುಕ್ಕಾಣಿಗೆ ಹೋಗಿತ್ತು, ಅದನ್ನು ತಪ್ಪಿಸಲು ಈ ಮೈತ್ರಿಯ ಹುನ್ನಾರ. ವ್ಯವಸ್ಥಿತವಾಗಿ ಯಡಿಯೂರಪ್ಪ ಅವರ ಕುಟುಂಬವನ್ನು ಮುಗಿಸುವ ಕೆಲಸ ಇದಾಗಿದೆ. ಹಿರಿಯ ನಾಯಕನಿಗೆ ಬೆದರಿಕೆ ಹಾಕಿ ಬಾಯಿ ಮುಚ್ಚಿಸಲಾಗುತ್ತಿದೆ ಎಂದು ರಮೇಶ್ ಬಾಬು ಹೇಳಿದ್ದಾರೆ.
ಬಿಜೆಪಿಯ ಕೇಂದ್ರ ಸಮಿತಿಯಲ್ಲಿ ಯಡಿಯೂರಪ್ಪ ಅವರಿಗೆ ನಾಮಕಾವಸ್ಥೆಗೆ ಸ್ಥಾನ ಕೊಟ್ಟು, ಕರ್ನಾಟಕದ ರಾಜಕೀಯ ಬೆಳವಣಿಗೆ ಬಗ್ಗೆ ಮಾಹಿತಿ ನೀಡದೆ, ಅವರ ಅಭಿಪ್ರಾಯಗಳನ್ನು ಮೂಲೆಗುಂಪು ಮಾಡಲಾಗಿದೆ. ಮಕ್ಕಳ ಭವಿಷ್ಯಕ್ಕಾಗಿ ಮೌನವಾಗಿ ಇದ್ದಾರೆ ಎಂದು ಅವರು ಬಣ್ಣಿಸಿದರು.