ಬೆಂಗಳೂರು: ಹಿರಿಯ ನಾಯಕ ಸಿ.ಎಂ.ಇಬ್ರಾಹಿಂ ಜೆಡಿಎಸ್ ಸೇರ್ಪಡೆ ಸನ್ನಿಹಿತವೆ? ಈ ಕುರಿತ ಸುದ್ದಿಗಳು ರಾಜ್ಯ ರಾಜಕೀಯ ವಲಯದಲ್ಲಿ ಹರಿದಾಡುತ್ತಿದ್ದು ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಸಿ.ಎಂ.ಇಬ್ರಾಹಿಂ ಅವರು ಜಾತ್ಯತೀತ ಜನತಾ ದಳದತ್ತ ಒಲವು ಹೊಂದಿದ್ದಾರೆಂದು ವಿಶ್ಲೇಷಿಸಬಹುದಾಗಿದೆ.
ಕಾಂಗ್ರೆಸ್ ಪಕ್ಷದಲ್ಲಿ ತಮ್ಮನ್ನು ನಿರ್ಲಕ್ಷಿಸಲಾಗುತ್ತದೆ ಎಂದು ಆಪ್ತರ ಜೊತೆ ಅಸಮಾಧಾನ ವ್ಯಕ್ತಪಡಿಸಿದ್ದ ಸಿ.ಎಂ.ಇಬ್ರಾಹಿಂ ಕೆಲ ದಿನಗಳ ಹಿಂದೆ ಜೆಡಿಎಸ್ ಸೇರುವ ಬಗ್ಗೆ ಆಪ್ತರ ಜೊತೆ ಚರ್ಚಿಸಿದ್ದಾರೆನ್ನಲಾಗಿದೆ.
ಈ ನಡುವೆ ಭಾನುವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸಿ.ಎಂ.ಇಬ್ರಾಹಿಂ ಅವರನ್ನು ಭೇಟಿಯಾಗಿ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ. ಪಕ್ಷದಲ್ಲಿ ಹಿರಿಯರನ್ನು ಗುರುತಿಸಿ ಸೂಕ್ತ ಸ್ಥಾನಮಾನ ನೀಡುವ ಭರವಸೆಯನ್ನಿ ಡಿಕೆಶಿ ನೀಡಿದ್ದರು.
ಗೌಡರ ಭೇಟಿಯ ಅಚ್ಚರಿ
ಇದೆಲ್ಲದರ ನಡುವೆ ಸಿ.ಎಂ.ಇಬ್ರಾಹಿಂ ಅವರು ಜೆಡಿಎಸ್ ವರಿಷ್ಠ ನಾಯಕ ಎಚ್. ಡಿ ದೇವೇಗೌಡರನ್ನು ಭೇಟಿ ಮಾಡಿ ಈ ವಿದ್ಯಮಾನಗಳಿಗೆ ಪುಷ್ಠಿ ನೀಡಿದ್ದಾರೆ. ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನಿವಾಸದಲ್ಲಿ ಸಿ.ಎಂ ಇಬ್ರಾಹಿಂ ಅವರು ಭೇಟಿ ನೀಡಿ ಕುತೂಹಲಕಾರಿ ಚರ್ಚೆ ನಡೆಸಿದರು. ಮಾಜಿ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ,ಚಿಕ್ಕನಾಯಕನಹಳ್ಳಿ ಕ್ಷೇತ್ರದ ಮಾಜಿ ಶಾಸಕ ಸುರೇಶ್ ಬಾಬು, ಟಿ.ದಾಸರಹಳ್ಳಿ ಕ್ಷೇತ್ರದ ಶಾಸಕ ಆರ್. ಮಂಜುನಾಥ್ ಕೂಡಾ ಉಪಸ್ಥಿತರಿದ್ದರು.