GST ಪರಿಷ್ಕರಣೆ: ಜನಸಾಮಾನ್ಯರು ನಿರಾಳ, ಶ್ರೀಮಂತರಿಗೆ ಹೊರೆ..

ನವದೆಹಲಿ:ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಜಿಎಸ್‌ಟಿ ಪರಿಷ್ಕರಣೆಯ ಭರವಸೆ ಈಗ ಜಾರಿಯಾಗಿದೆ. ದೀಪಾವಳಿಯ ಮುನ್ನವೇ ಕೇಂದ್ರ ಸರ್ಕಾರ ಹಲವು ವಸ್ತುಗಳ ಮೇಲಿನ ಜಿಎಸ್‌ಟಿ ದರಗಳನ್ನು ಇಳಿಸುವ ಮೂಲಕ ಜನತೆಗೆ “ಉಡುಗೊರೆ” ನೀಡಿದೆ.

ಹೊಸ ತಿದ್ದುಪಡಿ ಪ್ರಕಾರ ಶೇಕಡಾ 5 ಮತ್ತು 18ರ ತೆರಿಗೆ ಸ್ಲ್ಯಾಬ್‌ಗಳನ್ನು ಮಾತ್ರ ಮುಂದುವರಿಸಲಾಗಿದ್ದು, ಶೇಕಡಾ 12 ಹಾಗೂ 28ರ ಸ್ಲ್ಯಾಬ್‌ಗಳನ್ನು ರದ್ದುಪಡಿಸಲಾಗಿದೆ. ಇದರ ಪರಿಣಾಮವಾಗಿ ಅನೇಕ ಅಗತ್ಯ ವಸ್ತುಗಳ ಬೆಲೆ ಇಳಿಕೆಯಾಗಲಿದೆ. ಜೊತೆಗೆ, ಹಲವಾರು ವಸ್ತುಗಳನ್ನು ಸಂಪೂರ್ಣ ತೆರಿಗೆ ಮುಕ್ತಗೊಳಿಸಲಾಗಿದೆ.

ಐಷಾರಾಮಿ ವಸ್ತುಗಳಿಗೆ 40% ತೆರಿಗೆ

ಮಧ್ಯಮ ವರ್ಗ ಹಾಗೂ ಬಡವರ ಹಿತದೃಷ್ಟಿಯಿಂದ ತೆರಿಗೆ ಕಡಿತ ಮಾಡಿರುವ ಸರ್ಕಾರ, ಐಷಾರಾಮಿ ವಸ್ತುಗಳ ಮೇಲಂತೂ ತೆರಿಗೆ ಭಾರ ಹೆಚ್ಚಿಸಿದೆ. ಇದುವರೆಗೆ ಶೇಕಡಾ 28ರ ತೆರಿಗೆ ವಿಧಿಸಲಾಗುತ್ತಿದ್ದ ಐಷಾರಾಮಿ ವಸ್ತುಗಳಿಗೆ ಇನ್ಮುಂದೆ ಶೇಕಡಾ 40ರ ಜಿಎಸ್‌ಟಿ ಅನ್ವಯವಾಗಲಿದೆ.

ಹೊಸ ಸ್ಲ್ಯಾಬ್‌ಗೆ ಒಳಪಡುವ ವಸ್ತುಗಳು:

ಸಿಗರೇಟ್, ಸಿಗಾರ್, ಪಾನ್ ಮಸಾಲ, ಜರ್ದಾ, ಬೀಡಿ, ತಂಬಾಕು ಉತ್ಪನ್ನಗಳು
ಹೆಚ್ಚುವರಿ ಸಕ್ಕರೆ ಇರುವ ಪಾನೀಯಗಳು, ಸೋಡಾ, ಕೂಲ್‌ಡ್ರಿಂಕ್ಸ್, ಹಣ್ಣಿನ ಕಾರ್ಬೊನೇಟೆಡ್ ಪಾನೀಯಗಳು, ಕಾಫೀನ್ ಪಾನೀಯಗಳು
ಖಾಸಗಿ ವಿಮಾನ, ಹೆಲಿಕಾಪ್ಟರ್ ಬಳಕೆ
ಐಷಾರಾಮಿ ಕಾರುಗಳು (1500 ಸಿಸಿ ಮೀರಿದವು, 4000 ಮಿ.ಮೀ. ಉದ್ದವಿರುವವು)
ಹೆಚ್ಚಿನ ಸಾಮರ್ಥ್ಯದ ಬೈಕ್‌ಗಳು (350 ಸಿಸಿ ಮೀರಿದವು)
ಮನರಂಜನೆಗೆ ಬಳಸುವ ದೋಣಿಗಳು ಮತ್ತು ಹಡಗುಗಳು
ಹೆಚ್ಚು ಸಾಮರ್ಥ್ಯದ ರಿವಾಲ್ವರ್‌ಗಳು ಮತ್ತು ಪಿಸ್ತೂಲ್‌ಗಳು

ಇದರಿಂದ, ಸಾಮಾನ್ಯ ಬಳಕೆಯ ವಸ್ತುಗಳು ಅಗ್ಗವಾಗುವ ನಿರೀಕ್ಷೆಯಿದ್ದು, ಐಷಾರಾಮಿ ವಸ್ತುಗಳ ಬೆಲೆ ಇನ್ನಷ್ಟು ದುಬಾರಿಯಾಗಲಿದೆ.

Related posts