ಬೆಂಗಳೂರು: ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷನಾಗಿ ಜವಾಬ್ದಾರಿ ಸ್ವೀಕರಿಸಿದ ತರುವಾಯ ಬಿ.ವೈ.ವಿಜಯೇಂದ್ರ ಅವರು ಇಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ ಅಚ್ಚರಿ ಮೂಡಿಸಿದ್ದಾರೆ. ನಡ್ಡಾ ಅವರ ಜನ್ಮದಿನದಂದೇ ಅವರನ್ನು ಭೇಟಿಯಾಗಿ ಕೃತಜ್ಞತೆ ಸಮರ್ಪಿಸಿದ ವಿಜಯೇಂದ್ರ ನಡೆ ತೀವ್ರ ಕುತೂಹಲ ಮೂಡಿಸಿದೆ.
ಕೆಲವು ದಿನಗಳ ಹಿಂದಷ್ಟೇ ಬಿ.ವೈ.ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರವಹಿಸಿಕೊಂಡಿದ್ದಾರೆ. ಅದೇ ಹೊತ್ತಿಗೆ ರಾಜ್ಯ ಬಿಜೆಪಿಯ ಅನೇಕನಾಯಕರು ಅತೃಪ್ತಿಯನ್ನೂ ಹೊರಹಾಕಿದ್ದಾರೆ. ಈ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದ್ದಂತೆಯೇ ಬಿಎಸ್ವೈ ಪುತ್ರ ವಿಜಯೇಂದ್ರ ಅವರು ಇಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಇಯಾಗಿ ಮಾರುಕತೆ ನಡೆಸಿದ್ದು, ಈ ಬೆಳವಣಿಗೆ ಕಮಲ ಪಾಳಯದಲ್ಲಿ ಸಂಚಲನ ಸೃಷ್ಟಿಸಿದೆ.
ಆದರೆ ಈ ಭೇಟಿಗೆ ರಾಜಕೀಯ ಮಹತ್ವ ನೀಡಬೇಕಿಲ್ಲ ಎಂದು ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ. ವರಿಷ್ಠ ನಾಯಕನ ಭೇಟಿ ಬಗ್ಗೆ ಮಾಹಿತಿ ಹಂಚಿಕೊಂಡಿರುವ ವಿಜಯೇಂದ್ರ, ಭಾರತೀಯ ಜನತಾ ಪಾರ್ಟಿಗೆ ಹೊಸ ಚೈತನ್ಯ ತುಂಬಲು ಯುವ ಪೀಳಿಗೆಯನ್ನು ಉತ್ತೇಜಿಸುತ್ತಿರುವ ನಡ್ಡಾ ಜೀ ಅವರು ನನ್ನ ಬಗ್ಗೆ ಇರಿಸಿರುವ ಅಚಲ ನಂಬಿಕೆಯ ನುಡಿಗಳು ಅದಮ್ಯ ಆತ್ಮವಿಶ್ವಾಸದ ಉತ್ಸಾಹ ಮೂಡಿಸುವುದರೊಂದಿಗೆ, ಬಹು ದೊಡ್ಡ ಹೊಣೆಗಾರಿಕೆಯನ್ನೂ ನೆನಪಿಸಿತು ಎಂದು ಹೇಳಿಕೊಂಡಿದ್ದಾರೆ.
ವರಿಷ್ಠರು ಇರಿಸಿರುವ ನಿರೀಕ್ಷೆಯ ಗುರಿ ತಲುಪುವುದೇ ನನ್ನ ಮಹಾ ಸಂಕಲ್ಪವಾಗಿದೆ ಎಂದವರು ಜಯೇಂದ್ರ ತಿಳಿಸಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ. ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
(ಕರುಣಾಕರ ಖಾಸಲೆ)
ಮಾಧ್ಯಮ ಸಂಚಾಲಕರು
ಬಿಜೆಪಿ ಕರ್ನಾಟಕ