ಮಂಗಳೂರು: ಕರ್ಣಾಟಕ ಬ್ಯಾಂಕ್‌ನ ಮಾಜಿ ಅಧ್ಯಕ್ಷರೂ ಆದ ಹಿರಿಯ ಆರ್ಥಿಕ ತಜ್ಞ ಪೊಳಲಿ ಜಯರಾಂ ಭಟ್ ವಿಧಿವಶರಾಗಿದ್ದಾರೆ. ಸುಮಾರು ನಾಲ್ಕು ದಶಕಗಳ ಕಾಲ ಕರುನಾಡಿನ ಪ್ರತಿಷ್ಠಿತ ಖಾಸಗಿ ಬ್ಯಾಂಕ್‌ನಲ್ಲಿ ಕಾರ್ಯನಿರ್ವಹಿಸಿ ಬ್ಯಾಂಕಿಂಗ್ ಕ್ಷೇತ್ರದ ದಿಗ್ಗಜನೆನಿಸಿದ್ದ ಪೊಳಲಿ ಜಯರಾಂ ಭಟ್ ಅವರು ಇಂದು ಮಧ್ಯಾಹ್ನ ಹೃದಯಾಘಾತಕ್ಕೊಳಗಾಗಿ ವಿಧಿವಶರಾಗಿದ್ದಾರೆ.
ಖಾಸಗಿ ಹಣಕಾಸು ಸಂಸ್ಥೆಯ ಮುಖ್ಯಸ್ಥರಾಗಿರುವ ಅವರು ಜನರಲ್ ಬಾಡಿ ಮೀಟಿಂಗ್‌ನಲ್ಲಿ ಪಾಲ್ಗೊಂಡು ಮುಂಬೈನಿಂದ ಮಂಗಳೂರಿಗೆ ವಾಪಾಸಾಗುತ್ತಿದ್ದಾಗ ಎದೆನೋವು ಕಾಣಿಸಿಕೊಂಡಿದೆ. ಬಜಪೆಯಲ್ಲಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿಯುತ್ತಿದ್ದಂತೆಯೇ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲೇ ಕೊನೆಯುಸಿರೆಳೆದಿದ್ದಾರೆ. ಹೃದಯಾಘಾತಕ್ಕೊಳಗಾಗಿ ಅವರು ಮೃತಪಟ್ಟಿದ್ದಾರೆಂದು ವೈದ್ಯರು ದೃಢಪಡಿಸಿದ್ದಾರೆ.
ಮಂಗಳೂರು ಮೂಲದ ಕರ್ಣಾಟಕ ಬ್ಯಾಂಕ್‌ನ ಅಧ್ಯಕ್ಷರಾಗಿದ್ದ ಅವರು ಅದಕ್ಕೂ ಮುನ್ನ ಅದೇ ಬ್ಯಾಂಕ್‌ನಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದರು. ಅಧ್ಯಕ್ಷರಾಗಿದ್ದಾಗ ಕರ್ನಾಟಕ ಮೂಲದ ಖಾಸಗಿ ಬ್ಯಾಂಕನ್ನು ದೇಶದ ವಿವಿಧ ರಾಜ್ಯಗಳಿಗೆ ವಿಸ್ತರಿಸಿ ರಾಷ್ತ್ರೀಯ ಬ್ಯಾಂಕುಗಳಿಗಿಂತ ಖಾಸಗಿ ಬ್ಯಾಂಕ್ ಕಡಿಮೆಯೇನಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇವರ ಅಧಿಕಾರಾವಧಿಯಲ್ಲಿ ಕರ್ಣಾಟಕ ಬ್ಯಾಂಕ್ ಉತ್ಕೃಷ್ಟ ಸೇವೆಗಾಗಿ ಪುರಸ್ಕಾರವನ್ನೂ ಪಡೆದಿದೆ ಎಂದು ಅಧಿಕಾರಿಗಳು ಸ್ಮರಿಸಿದ್ದಾರೆ.
ಕರಾವಳಿಯ ಅತ್ಯುತ್ತಮ ಬ್ಯಾಂಕರ್, ಆರ್ಥಿಕ ತಜ್ಞರಾಗಿದ್ದ ಪೊಳಲಿ ಜಯರಾಂ ಭಟ್ ಅವರ ನಿಧನಕ್ಕೆ ಗಣ್ಯರನೇಕರು ಶೋಕ ವ್ಯಕ್ತಪಡಿಸಿದ್ದಾರೆ.