ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ಜಯಭೇರಿ ಭಾರಿಸಿರುವ ಕಾಂಗ್ರೆಸ್ ಇದೀಗ ಸರ್ಕಾರ ರಚಿಸುವ ತಯಾರಿಯಲ್ಲಿದೆ. ಆದರೆ ಸಿಎಂ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ವರಿಷ್ಠರಿಗೆ ನಾಯಕರ ಬಣ ರಾಜಕೀಯ ಅಡ್ಡಿಯಾಗಿದೆ. ಈ ಬಗ್ಗೆ ಶಾಸಕರ ವೈಯಕ್ತಿಕ ಅಭಿಪ್ರಾಯ ಪಡೆದು ಅಂತಿಮವಾಗಿ ಸಿಎಂ ಯಾರಾಗಬೇಕೆಂಬ ಬಗ್ಗೆ ಆಯ್ಕಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬಿಟ್ಟುಬಿಡುವ ನಿರ್ಧಾರವನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧರಿಸಲಾಗಿದೆ.
ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳನ್ಬು ಗೆದ್ದಿರುವ ಕಾಂಗ್ರೆಸ್ ಪಕ್ಷದ ಶಾಸಕರು ಬೆಂಗಳೂರಿನ ಶಾಂಗ್ರಿ ಲಾ ಹೊಟೇಲ್ನಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸಿದ್ದರು. ಪ್ರದೇಶ ಕಾಂಗ್ರೆಸ್ ಉಸ್ತುವಾರಿ ನಾಯಕ ರಣದೀಪ್ ಸುರ್ಜೇವಾಲ ಉಪಸ್ಥಿತಿಯಲ್ಲಿ ನಡೆದ ಈ ಸಭೆಯಲ್ಲಿ ಎಐಸಿಸಿ ವೀಕ್ಷಕರಾಗಿ ಸುಶೀಲ್ ಕುಮಾರ್ ಶಿಂಧೆ, ಕೆ.ಸಿ.ವೇಣುಗೋಪಾಲ್ ಕೂಡಾ ಭಾಗವಹಿಸಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಹಿತ ಹಲವು ಮುಖಂಡರು ಗೆದ್ದ ಕಾಂಗ್ರೆಸ್ ಶಾಸಕರನ್ನು ಅಭಿನಂಧಿಸಿದರು.
ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಬಗ್ಗೆ ಚರ್ಚೆ ನಡೆಯಿತು. ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರನ್ನು ಸಿಎಂ ಮಾಡುವುದು ಪಕ್ಷದಲ್ಲಿ ಬಹುಕಾಲದಿಂದ ನಡೆದು ಬಂದ ಸಂಪ್ರದಾಯ. ಅದರಂತೆ ಪ್ರಸ್ತುತ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಮಾಡಬೇಕೆಂಬ ಒತ್ತಡ ಒಕ್ಕಲಿಗ ಸಮುದಾಯದ ನಾಯಕರದ್ದು. ಈ ಬಗ್ಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರಸ್ತಾಪವಾಗಿದೆ. ಈ ಸಂದರ್ಭದಲ್ಲಿ ಅವಧಿ ವಿಭಜನೆ ಬಗ್ಗೆಯೂ ಸಲಹೆ ವ್ಯಕ್ತವಾಗಿದೆ ಎನ್ನಲಾಗಿದ್ದು, ಮೊದಲ ಅವಧಿಯಲ್ಲಿ ತಾವು ಸಿಎಂ ಆಗುವ ಅವಕಾಶವನ್ನು ಸಿದ್ದರಾಮಯ್ಯ ಕೇಳಿದ್ದಾರೆ ಎನ್ಬಲಾಗಿದೆ.
ಈ ನಡುವೆ, ಸಿಎಂ ಆಯ್ಕೆ ವಿಚಾರದಲ್ಲಿ ಬಣ ರಾಜಕೀಯಕ್ಕೆ ಅವಕಾಶ ಸಿಗದಂತೆ ಪರಿಸ್ಥಿತಿ ನಿಭಾಯಿಸುವ ಸೂತ್ರಕ್ಕೆ ನಾಯಕರು ಮುಂದಾಗಿದ್ದಾರೆ. ಈ ಕುರಿತಂತೆ ಸಲಹೆ ಮುಂದಿಟ್ಟ ರಣದೀಪ್ ಸುರ್ಜೇವಾಲಾ ಅವರು, ಪ್ರತಿಯೊಬ್ಬ ಶಾಸಕರಿಂದಲೂ ವೈಯಕ್ತಿಕ ಅಭಿಪ್ರಾಯ ಸಂಗ್ರಹಿಸಿ ಅಂತಿಮವಾಗಿ ಸಿಎಂ ಆಯ್ಕೆಯ ತೀರ್ಮಾನವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವಹಿಸುವ ಸಲಹೆಯನ್ನು ಮುಂದಿಟ್ಟರು ಎನ್ನಲಾಗಿದೆ.