ಕಾಂಗ್ರೆಸ್ ಜಯಭೇರಿ.. ಖರ್ಗೆ, ಸಿದ್ದು, ಡಿಕೆಶಿಗೆ ಶಾಸಕ ಮಂಜುನಾಥ್ ಭಂಡಾರಿ ಅಭಿನಂದನೆ

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಭಾರಿಸುವ ಮೂಲಕ ಹೊಸ ಯುಗ ಆರಂಭವಾಗಿದೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಪ್ರತಿಕ್ರಿಯಿಸಿದ್ದಾರೆ. ತಾವೂ ಗೆದ್ದು, ಪಕ್ಷದ ನಾಯಕರನ್ನೂ ಗೆಲ್ಲಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಸಫಲರಾಗಿರುವ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರನ್ನು ಅಭಿನಂಧಿಸಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಜನಮತ ಬಂದಿರುವ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮಂಜುನಾಥ್ ಭಂಡಾರಿ, ಈ ಹಿಂದೆ ಬಿಜೆಪಿಯು ಹಿಂಬಾಗಿಲಿನ ರಾಜಕಾರಣ ಮಾಡಿತ್ತು. ಹಿಂದೆ ಚುನಾವಣೆಯಲ್ಲಿ ಗೆದ್ದ ಶಾಸಕರನ್ನು ಆಪರೇಷನ್ ಕಮಲ ಮೂಲಕ ಹೈಜಾಕ್ ಮಾಡಿ ವಾಮಮಾರ್ಗದ ಮೂಲಕ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಆ ಪಕ್ಷಕ್ಕೆ ರಾಜ್ಯದ ಜನರು ಈ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಿದ್ದಾರೆ ಎಂದು ವಿಶ್ಲೇಷಿಸಿದರು. ಈ ಬಾರಿ ಸರಳ ಬಹುಮತಕ್ಕಿಂತ ಬಹಳಷ್ಟು ಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲಿಸುವ ಮೂಲಕ ಜನತೆ ಈ ರಾಜ್ಯದಲ್ಲಿ ಮತ್ತೊಮ್ಮೆ ಆಪರೇಷನ್ ಕಮಲಕ್ಕೆ ಅವಕಾಶ ನೀಡದಿರುವುದು ಉತ್ತಮ ಬೆಳವಣಿಗೆ ಎಂದರು.

ಕರ್ನಾಟಕವನ್ನು ಬಿಜೆಪಿ ಅಧಿಪತ್ಯದ ಹೆಬ್ಬಾಗಿಲು ಎಂದು ಬೀಗುತ್ತಿರುವ ಬಿಜೆಪಿ ಪಕ್ಷವು ಅಧಿಕಾರದಲ್ಲಿದ್ದಾಗಲೂ ಈ ಬಾರಿ ಬರೋಬ್ವರಿ 9 ರಾಜ್ಯಗಳಲ್ಲಿ ಬಿಜೆಪಿಗೆ ಶೂನ್ಯ ಫಲಿತಾಂಶ ಬಂದಿದೆ. ಇದನ್ನು ಗಮನಿಸಿದರೆ ರಾಜ್ಯದಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲ ಎಂಬುದನ್ನು ಜನರು ಸ್ಪಷ್ಟವಾಗಿ ತೋರಿಸಿದ್ದಾರೆ ಎಂದು ಮಂಜುನಾಥ್ ಭಂಡಾರಿ ಅವರು ಚುನಾವಣಾ ಫಲಿತಾಂಶದ ಬಗ್ಗೆ ತಮ್ಮದೇ ದಾಟಿಯಲ್ಲಿ ಬಣ್ಣಿಸಿದರು.

ನುಡಿದಂತೆ ನಡೆಯುತ್ತೇವೆ;

ರಾಹುಲ್ ಗಾಂಧಿ ನಾಯಕತ್ವದಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯಲ್ಲಿ ಸಂಘಟನಾತ್ಮಕ ರೀತಿಯಲ್ಲಿ ಯುವಜನರನ್ನು ಜೋಡಿಸಿಕೊಂಡಿರುವ ಮಂಜುನಾಥ್ ಭಂಡಾರಿ ಅವರು ಕರಾವಳಿಯಲ್ಲಿ ಚುನಾವಣಾ ಉಸ್ತುವಾರಿ ವಹಿಸಿದ್ದರು. ಕರಾವಳಿಯನ್ನು ಪ್ರತಿನಿಧಿಸುತ್ತಿರುವ ಮೇಲ್ಮನೆ ಶಾಸಕರೂ ಆಗಿರುವ ಮಂಜುನಾಥ್ ಭಂಡಾರಿಯರು ಪ್ರಬಲ ಭಂಟ ಸಮುದಾಯದ ನಾಯಕರಲ್ಲೊಬ್ಬರು. ದಶಕದ ಹಿಂದೆ ಜಮ್ಮು-ಕಾಶ್ಮೀರ ಹಾಗೂ ಉತ್ತರ ಪ್ರದೇಶ ರಾಜ್ಯಗಳಲ್ಲೂ ಕಾಂಗ್ರೆಸ್ ಚುನಾವಣಾ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿ, ಕಾಂಗ್ರೆಸ್ ಪಕ್ಷಕ್ಜೆ ಬಲತಂದುಕೊಟ್ಟಿದ್ದರು. ಇದೀಗ ಪುತ್ತೂರು ಕ್ಷೇತ್ರದ ಗೆಲುವಿನಲ್ಲೂ ಭಂಡಾರಿಯವರು ಮಹತ್ವದ ಪಾತ್ರವಹಿಸಿದ್ದರು.

ತಮ್ಮ ಪಕ್ಷದ ಈ ಅಭ್ಯರ್ಥಿಗಳ ಭರ್ಜರಿ ಗೆಲುವಿನ ಬಗ್ಗೆ ಸಂತಸ ಹಂಚಿಕೊಂಡಿರುವ ಮಂಜುನಾಥ್ ಭಂಡಾರಿ ಅವರು, ಕಾಂಗ್ರೆಸ್ ಪಕ್ಷದ ಸರ್ಕಾರವು ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರ ಮಾರ್ಗದರ್ಶನದಲ್ಲಿ ಜನರ ನಿರೀಕ್ಷೆಗಳಿಗೆ ತಕ್ಕಂತೆ ಆಡಳಿತ ನಡೆಸಲಿದೆ. ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಿದೆ ಎಂದು ಭರವಸೆ ನೀಡಿದರು.

Related posts