ಕೆಐಎಡಿಬಿ ಅವ್ಯವಹಾರ: ಸಿದ್ದರಾಮಯ್ಯ, ಎಂ.ಬಿ.ಪಾಟೀಲ್ ವಿರುದ್ಧ ಮೋದಿ, ಷಾಗೆ CRF ದೂರು

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿರುವ ಮುಡಾ ನಿವೇಶನ ಅಕ್ರಮ, ವಾಲ್ಮೀಕಿ ನಿಗಮದ ಕರ್ಮಕಾಂಡದ ಬೆನ್ನಲ್ಲೇ ಸಿದ್ದರಾಮಯ್ಯ ಸರ್ಕಾರಕ್ಕೆ KIADB ಬಹುಕೋಟಿ ಹಗರಣವೂ ಸಂಕಷ್ಟ ತಂದೊಡ್ಡಿದೆ. ಕುತೂಹಲಕಾರಿ ಬೆಳವಣಿಗೆಯಲ್ಲಿ ‘ದೇವನಹಳ್ಳಿ KIADB ಭೂಸ್ವಾಧೀನ ಅವ್ಯವಹಾರ’ ಆರೋಪ ಕುರಿತಂತೆ ಸಿಎಂ ಸಿದ್ದರಾಮಯ್ಯ, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹಾಗೂ ಕೆ.ಎ.ಎಸ್ ಅಧಿಕಾರಿ ಬಾಳಪ್ಪ ಹಂದಿಗುಂದ ವಿರುದ್ಧ ಜಾರಿ ನಿರ್ದೇಶನಾಲಯ (ED)ದ ನಿರ್ದೇಶಕರಿಗೆ ದೂರು ಸಲ್ಲಿಕೆಯಾಗಿದೆ. ‘ಸಿಟಿಜನ್ ರೈಟ್ಸ್ ಫೌಂಡೇಶನ್’ ಈ ದೂರನ್ನು ಸಲ್ಲಿಸಿದ್ದು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ನಿರ್ದೇಶನ ಕೋರಿ ಕೇಂದ್ರ ಸರ್ಕಾರಕ್ಕೂ ದೂರು ಸಲ್ಲಿಕೆಯಾಗಿದೆ.

ಕೈಗಾರಿಕೋದ್ಯಮಗಳನ್ನು ಉತ್ತೇಜಿಸಲು, ಉದ್ಯಮ ಸಂಸ್ಥೆಗಳಿಗೆ ಮೂಲಸೌಕರ್ಯ ಕಲ್ಪಿಸುವ ಸಂಬಂಧ ಸ್ಥಾಪಿಸಲಾಗಿರುವ ರಾಜ್ಯ ಸರ್ಕಾರದ ಅಧೀನದ ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (KIADB) ಇದೀಗ ಹಗರಣಗಳ ಕೂಪವಾಗಿದ್ದು, ಒಂದೊಂದೇ ಕರ್ಮಕಾಂಡಗಳು ಬೆಳಕಿಗೆ ಬರುತ್ತಿವೆ. ಅದರಲ್ಲೂ ಸರ್ಕಾರಿ ಜಮೀನಿಗೆ ನಕಲಿ ಮಾಲೀಕರನ್ನು ಸೃಷ್ಟಿಸಿ ಪರಿಹಾರದ ಮೊತ್ತವನ್ನು ಪಾವತಿಸಿರುವ ಆರೋಪ ಕೇಳಿಬಂದಿದೆ. ಈ ಹಗರಣದಲ್ಲಿ KIADB ಭೂಸ್ವಾಧೀನಾಧಿಕಾರಿಯಾಗಿರುವ KAS ಅಧಿಕಾರಿ ಬಾಳಪ್ಪ ಹಂದಿಗುಂದ ಅವರು ಅಧಿಕಾರ ದುರುಪಯೋಗಪಡಿಸಿದ್ದಾರೆ ಎಂದು ‘ಸಿಟಿಜನ್ ರೈಟ್ಸ್ ಫೌಂಡೇಶನ್’ ಅಧ್ಯಕ್ಷ ಕೆ.ಎ.ಪಾಲ್ ಅವರು ಈ ದೂರು ಸಲ್ಲಿಸಿದ್ದಾರೆ.

KIADB ಮೂಲಕ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಸಮೀಪ ನೂರಾರು ಎಕ್ರೆ ಜಮೀನನ್ನು ಕೈಗಾರಿಕಾ ಉದ್ದೇಶಗಳಿಗಾಗಿ ವಶಪಡಿಸಿಕೊಳ್ಳಲು ನೋಟಿಫಿಕೇಶನ್ ಹೊರಡಿಸಲಾಗಿತ್ತು. ಈ ಪೈಕಿ ದೇವನಹಳ್ಳಿ ತಾಲೂಕಿನ ಕುಂದಾಣ ಹೋಬಳಿಯ ಚಪ್ಪರದಹಳ್ಳಿ ಗ್ರಾಮದಲ್ಲಿ ನಡೆದ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದೆ. ಕುಂದಾಣ ಹೋಬಳಿಯ ಚಪ್ಪರದಹಳ್ಳಿ ಗ್ರಾಮದ ಸರ್ವೇ ನಂಬರ್ 7ರಲ್ಲಿ ಅನಧಿಕೃತವಾಗಿ ಕೃಷಿ ಮಾಡುತ್ತಿದ್ದ ಹಲವರಿಗೆ 1984ರಲ್ಲಿ ಆಗಿನ ತಹಸೀಲ್ದಾರರು ‘ಎವಿಕ್ಷನ್ ನೋಟಿಸ್’ ಜಾರಿ ಮಾಡಿದ್ದರು. ಅನಂತರ ಸದರಿ ಜಮೀನನ್ನು ‘ಸರ್ಕಾರಿ ಫಡಾ’ ಎಂದು ಘೋಷಿಸಲಾಗಿತ್ತು. ಆದರೆ, ಕೆಐಎಡಿಬಿ ವತಿಯಿಂದ ಭೂಸ್ವಾಧೀನ ಪ್ರಸ್ತಾಪವಾದ ಸಂದರ್ಭದಲ್ಲಿ ಹಲವರನ್ನು ಜಮೀನು ಮಾಲೀಕರೆಂದು ಗುರುತಿಸಿ ಪರಿಹಾರ ಹಂಚಲಾಗಿದೆ ಎಂಬ ಆರೋಪ ಕೇಳಿಬಂದಿದೆ. 27.07.202 ರಂದು ಬಾಳಪ್ಪ ಹಂದಿಗುಂದ (ವಿಶೇಷ ಭೂಸ್ವಾಧೀನಾಧಿಕಾರಿ-2) ಅವರ ಉಪಸ್ಥಿತಿಯಲ್ಲಿ ನಡೆದ ತೀರ್ಮಾನ ಹಾಗೂ ಅವರ ಆದೇಶದಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು EDಗೆ ಸಲ್ಲಿಸಲಾಗಿರುವ ದೂರಿನಲ್ಲಿ ಗಮನಸೆಳೆಯಲಾಗಿದೆ.

ಈ ಸಂಬಂಧ ತನಿಖೆಗೆ ಕೋರಿ 12.09.2024ರಂದು ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ, ಕೈಗಾರಿಕಾ ಸಚಿವರಿಗೆ ದೂರು ನೀಡಲಾಗಿತ್ತು. ಇದಕ್ಕೆ ಸ್ಪಂಧಿಸದಿದ್ದಾಗ 09.10.2024ರಂದು ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗಿದೆ. ಅದಕ್ಕೂ ಸರ್ಕಾರ ಸ್ಪಂಧಿಸದ ಹಿನ್ನೆಲೆ ಅಕ್ಟೊಬರ್ 23ರಂದು EDಗೆ ಅಹವಾಲು ಸಲ್ಲಿಸಲಾಗಿದ್ದು, ಬುಧವಾರ (06.11.2024) ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಜಾರಿ ನಿರ್ದೇಶನಾಲಯದ ನಿರ್ದೇಶಕರಿಗೆ ದೂರು ಸಲ್ಲಿಸಿ ಬಹುಕೋಟಿ KIADB ಹಗರಣ ಬಗ್ಗೆ ಸಮಗ್ರ ತನಿಖೆ ನಡೆಸಲು ಕೆ.ಎ.ಪಾಲ್ ಮನವಿ ಮಾಡಿದ್ದಾರೆ.

ದೇವನಹಳ್ಳಿಯ ಗೊಲ್ಲಹಳ್ಳಿ, ದೊಡ್ಡಗೊಲ್ಲಹಳ್ಳಿ, ಜೋಡಿಗ್ರಾಮ, ಕುಂದಾಣ, ಚಪ್ಪರದಹಳ್ಳಿ, ಕೋಡಿಹಳ್ಳಿ ಕೋಣಗಟ್ಟಿ, ಬೈದೇನಹಳ್ಳಿ, ಹಾರೋನಹಳ್ಳಿ, ಹರಳೂರು, ಮೊದಲಾದ ಹತ್ತಾರು ಹಳ್ಳಿಗಳಲ್ಲಿ ಜಮೀನನ್ನು ಕೆಐಎಡಿಬಿ ವತಿಯಿಂದ ಸ್ವಾಧೀನಪಡಿಸಿ ವಿವಿಧ ಕಂಪನಿಗಳಿಗೆ ಹಂಚಿಕೆ ಮಾಡಲಾಗಿದೆ. ಸರ್ಕಾರದ ಭೂಮಿಯನ್ನು ಸ್ವಾಧೀನ ಪಡೆದು ನಕಲಿ ವ್ಯಕ್ತಿಗಳಿಗೆ ಪರಿಹಾರ ಪಾವತಿಸಲಾಗಿದೆ. ಚಪ್ಪರದಹಳ್ಳಿ ಗ್ರಾಮದ ಸರ್ವೇ ನಂಬರ್ 7ರಲ್ಲಿ 45 ಎಕರೆ 15 ಗುಂಟೆ ಪೈಕಿ 5.5 ಎಕರೆ ಜಮೀನನ್ನು ಹಂಗಾಮಿ ಸಾಗುವಳಿ ಭೂಮಿಯೇ ಎಂದು ಪರಿಶೀಲಿಸದೆ ಹಲವರ ಹೆಸರಿನಲ್ಲಿ ಪರಿಹಾರ ಪ್ರಕಟಿಸಲಾಗಿದೆ. 38.5 ಎಕರೆ ಹಂಗಾಮಿ ಸಾಗುವಳಿ ಜಾಮೀನು ‘ಸರ್ಕಾರಿ ಫಡಾ’ ಎಂದು ತಿಳಿದಿದ್ದರೂ ಅಕ್ರಮವಾಗಿ ಪರಿಹಾರದ ಮೊತ್ತ ಪಾವತಿಯಾಗಿದೆ ಎಂದು ಈ ದೂರಿನಲ್ಲಿ ಗುರುತರ ಆರೋಪ ಮಾಡಲಾಗಿದೆ.

ಬಾಳಪ್ಪ ಹಂದಿಗುಂದ ವಿರುದ್ದದ ಇತರ ಪ್ರಕರಣಗಳ ಬಗ್ಗೆಯೂ ಈ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬಾಳಪ್ಪ ಹಂದಿಗುಂದ ರವರು 2020ರಲ್ಲಿ ಬೇರೆ ಇಲಾಖೆಯ ಹೆಚ್ಚವರಿ ಅಧಿಕಾರಿಗಳಾಗಿರುವಾಗ ಸಾದಳ್ಳಿ ಗ್ರಾಮದ ರೈತರಿಗೆ 83 ಕೋಟಿ ರೂಪಾಯಿಗಳನ್ನು ವರ್ಗಾವಣೆ ಮಾಡಿ ಗೋಲ್ ಮಾಲ್ ಮಾಡಿರುವ ಆರೋಪವೂ ಇದೆ. ಒಂದೇ ಜಮೀನಿಗೆ ಎರಡೆರಡು ಬಾರಿ ಪರಿಹಾರದ ಹಣ ಪಾವತಿಸಿರುವ ಅಕ್ರಮವೂ ನಡೆದಿದೆ. ಕೆಲವು ಜಮೀನನ್ನು ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಲಾಗಿದೆ.

ದೇವನಹಳ್ಳಿ ತಾಲೂಕಿನ ಬೈದೇನಹಳ್ಳಿ, ದೊಡ್ಡಗೊಲ್ಲಹಳ್ಳಿ, ಚಪ್ಪರದಹಳ್ಳಿ, ಹರೋನಹಳ್ಳಿ ಮೊದಲಾದ ಗ್ರಾಮಗಳಲ್ಲಿ ಕೆಐಎಡಿಬಿ ಭೂಸ್ವಾಧೀನ ನಡೆಸಿದ್ದು, ಭೂಮಿಯ ಮಾಲೀಕರಿಗೆ ಪ್ರತೀ ಎಕರೆಗೆ 1.35 ಕೋಟಿ ರೂಪಾಯಿ ಪಾವತಿಸಿ, ಆ ಮೊತ್ತದಿಂದ ಕಮೀಷನ್ ಸಂಗ್ರಹಿಸಲಾಗಿದೆ ಎಂಬ ರೈತರು ‘ಸಿಟಿಜನ್ ರೈಟ್ಸ್ ಫೌಂಡೇಷನ್’ಗೆ ದೂರು ನೀಡಿದ್ದು, ಮುಖ್ಯಮತ್ರಿ ಸಿದ್ದರಾಮಯ್ಯ ಮತ್ತು ಸಚಿವ ಎಂ.ಬಿ.ಪಾಟೀಲ್ ರವರಿಗೆ ತಲುಪಿಸಲು ಪ್ರತೀ ಎಕರೆಗೆ 35 ಲಕ್ಷ ರೂಪಾಯಿ ಕಮೀಷನ್ ಸಂಗ್ರಹಿಸಲಾಗಿದೆ ಎಂದೂ ಆರೋಪಿಸಿದ್ದಾರೆ. ಅನೇಕ ಭೂ ಮಾಲೀಕರಿಗೆ ಹಣ ನೀಡುವ ಬದಲು 50:50 ಅನುಪಾತದಲ್ಲಿ ನಿವೇಶನ ಪಡೆಯುವ ಒಪ್ಪಂದ ಮಾಡಿಸಿ, ಆ ಜಮೀನನ್ನು ತಮ್ಮ ಬೇನಾಮಿ ವ್ಯಕ್ತಿಗಳಿಗೆ ಸೇಲ್ ಅಗ್ರಿಮೆಂಟ್ ಮಾಡಿಸಲಾಗಿದೆ ಎಂದೂ ಈ ದೂರಿನಲ್ಲಿ ಆರೋಪಿಸಲಾಗಿದೆ.

ಬಾಳಪ್ಪ ಹಂದಿಗುಂದ ಒಬ್ಬ ಪ್ರಭಾವಿ ಅಧಿಕಾರಿಯಾಗಿದ್ದು, ಅವ್ಯವಹಾರ ಪ್ರಕರಣದಲ್ಲಿ ಅಮಾನತಾಗಿದ್ದರೂ ಅದೇ ಇಲಾಖೆಯ ಹುದ್ದೆಯಲ್ಲಿ ಮುಂದುವರಿಯುವಷ್ಟು ಪ್ರಭಾವಿ. ಲೋಕಾಯುಕ್ತ ಹಾಗೂ ವಿವಿಧ ಪೊಲೀಸ್ ಠಾಣೆಗಳಲ್ಲಿ ಇವರ ವಿರುದ್ಧ ಪ್ರಕರಣಗಳಿದ್ದರೂ ಕೆಐಎಡಿಬಿಯಲ್ಲೇ ಮುಂದುವರಿಸಲು ಸಚಿವ ಎಂಬಿ ಪಾಟೀಲ್ ಶಿಫಾರಸು ಮಾಡಿದ್ದು, ಸಿಎಂ ಅದಕ್ಕೆ ಒಪ್ಪಿರುವ ಕ್ರಮವೂ ಆಕ್ಷೇಪಾರ್ಹ ಎಂದು ದೂರುದಾರ ಕೆ.ಎ.ಪಾಲ್ ಅವರು ಈ ದೂರಿನಲ್ಲಿ ಹೇಳಿದ್ದಾರೆ.

ಈ ನಡುವೆ ಕೆಐಎಡಿಬಿ ವತಿಯಿಂದ ನಡೆದಿದೆ ಎನ್ನಲಾಗಿರುವ ಅಕ್ರಮಗಳ ವಿರುದ್ಧ ‘ರೈತ ಹೋರಾಟ ಸಮಿತಿ’ ನೇತೃತ್ವದಲ್ಲಿ ಕಳೆದ 6-7 ತಿಂಗಳುಗಳಿಂದ ಪ್ರತಿಭಟನೆಗಳು ನಡೆಯುತ್ತಿದ್ದರೂ ಸರ್ಕಾರ ಸಮಸ್ಯೆ ಬಗೆಹರಿಸದೆ ಇರುವುದರಿಂದ ಕೇಂದ್ರ ಸರ್ಕಾರದ ಮಧ್ಯ ಪ್ರವೇಶಿಸಬೇಕೆಂದು ಕೆ.ಎ.ಪಾಲ್ ಆಗ್ರಹಿಸಿದ್ದಾರೆ.

Related posts