ಕಾರವಾರ: ಕಾಂಗೇಸ್ ವಿರುದ್ಧ ಟೀಕೆ ಮಾಡಿರುವ ಬಿಜೆಪಿ ರಾಜ್ಯಅಧ್ಯಕ್ಷ ನಳಿನ್ ಕುಮಾರ್ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಗರಂ ಆಗಿದ್ದಾರೆ. ಕಾರವಾರದಲ್ಲಿ ಪ್ರತಿಕ್ರಿಯೆ ನೀಡಿರುವ ಡಿ.ಕೆ.ಶಿವಕುಮಾರ್, ಕುಮಾರ್ ಕಟೀಲ್ ವಿರುದ್ಧ ವಾಗ್ದಾಳಿ ನಡೆಸಿದರಲ್ಲದೆ, ಕಟೀಲ್’ರನ್ನು ಆಸ್ಪತ್ರೆಗೆ ಸೇರಿಸುವ ಅನಿವಾರ್ಯತೆ ಇದೆ ಎಂದು ಲೇವಡಿ ಮಾಡಿದರು.
ಸಿದ್ದರಾಮಯ್ಯ ಅವರು ಮಾದಕ ದ್ರವ್ಯ ಹಣದಿಂದ ಸರ್ಕಾರ ನಡೆಸಿದ್ದರೆ, ಇದುವರೆಗೂ ಯಾಕೆ ಎಫ್ ಐಆರ್ ದಾಖಲಿಸಿಲ್ಲ ಎಂದು ಪ್ರಡಿಕೆಶಿ, ನಳಿನ್ ಕುಮಾರ್ ಗೆ ಹೆಚ್ಚುಕಮ್ಮಿ ಆಗಿರಬೇಕು. ಅವರನ್ನು ಆಸ್ಪತ್ರೆಗೆ ಸೇರಿಸುವ ಅನಿವಾರ್ಯತೆ ಇದೆ ಎಂದರು.
ಜವಾಬ್ದಾರಿಯುತ ಸ್ಥಾನದಲ್ಲಿ ಕೂತಿರುವ ಕಟೀಲ್ ಆ ಸ್ಥಾನಕ್ಕೆ ಗೌರವ ತರುವಂತೆ ನಡೆದುಕೊಳ್ಳಲಿ. ಅವರಿಗೆ ಅಲ್ಪಸ್ವಲ್ಪ ರಾಜಕೀಯ ಜ್ಞಾನ ಇದೆ ಎಂದುಕೊಂಡಿದ್ದೆ. ಒಂದು ಸರ್ಕಾರವನ್ನು ಡ್ರಗ್ಸ್ ಹಣದಿಂದ ನಡೆಸಲಾಗುತ್ತದೆ ಎಂಬ ಹೇಳಿಕೆ ಅವರ ಸ್ಥಾನಕ್ಕೆ ಕಳಂಕ ತರುವಂತಿದೆ ಎಂದು ಪ್ರತಿಕ್ರಿಯಿಸಿದರು.
ನಾವು ವಿರೋಧ ಪಕ್ಷದವರು. ನಮಗೂ ಬಿಜೆಪಿ ಆಂತರಿಕ ಬೆಳವಣಿಗೆಗೂ ಯಾವುದೇ ಸಂಬಂಧವಿಲ್ಲ. ನಾವು ಅದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಅವರು ಸರ್ಕಾರದಲ್ಲಿ ಯಾರನ್ನಾದರೂ ಸೇರಿಸಿಕೊಳ್ಳಲಿ ಅಥವಾ ತೆಗೆದುಹಾಕಲಿ ಅದಕ್ಕೂ ನಮಗೂ ಸಂಬಂಧ ಇಲ್ಲ ಎಂದು ಡಿಕೆಶಿ ಹೇಳಿದರು.