ಕೋಲಾರ: ಚಿನ್ನದ ನಾಡಿನ ಅಂತರಗಂಗೆ ಬೆಟ್ಟದ ಬಂಡೆ ಮೇಲೆ ವಿವಾದಾತ್ಮಕ ಬರಹ ಆರೋಪ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಅರಣ್ಯ ಇಲಾಖೆಯವರು ಕೋಲಾರ ಗ್ರಾಮಾಂತರ ಠಾಣೆಯಲ್ಲಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.
ಕೋಲಾರದ ಧಾರ್ಮಿಕ ಕ್ಷೇತ್ರಗಳಲ್ಲೊಂದಾದ ಅಂತರಗಂಗೆ ಬೆಟ್ಟದ ಬಂಡೆ ಕಲ್ಲುಗಳ ಮೇಲೆ ಹಸಿರು ಬಣ್ಣ ಬಳಿದು ವಿವಾದಾತ್ಮಕ ಬರಹ ಬರೆಯಲಾಗಿತ್ತು. ಈ ಘಟನೆ ವಿವಾದದ ತಿರುವು ಪಡೆಯುತ್ತಿದ್ದಂತೆಯೇ ಎಚ್ಛೆತ್ತುಕೊಂಡ ಕೋಲಾರ ಗ್ರಾಮಾಂತರ ಪೊಲೀಸರು ಈ ವಿವಾದಾತ್ಮಕ ಬರಹದ ಮೇಲೆ ಬಿಳಿ ಬಣ್ಣ ಬಳಿದು ಅಳಿಸಿ ಹಾಕಿದ್ದರು. ಇದೇ ವೇಳೆ ಆರೋಪಿಗಳ ಬಂಧನಕ್ಕೆ ಬಲೇ ಬೀಸಿದ ಪೊಲೀಸರು, ಪಾಪರಾಜನಹಳ್ಳಿಯ ಅನ್ವರ್ ಅಲಿಯಾಸ್ ಪ್ಯಾರೇಜಾನ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.